Advertisement

ಮತ್ತೆ ಕೇಳಿಬರುತ್ತಿದೆ ಸಂಚಾರ ಉಪ ಠಾಣೆ ಬೇಡಿಕೆ 

12:21 PM Mar 27, 2019 | Naveen |
ಹಳೆಯಂಗಡಿ : ಮೂಲ್ಕಿ ಹೋಬಳಿಯು ತಾಲೂಕು ಕೇಂದ್ರವಾಗಲು ಸಜ್ಜಾಗಿರುವ ಹಿನ್ನೆಲೆಯಲ್ಲಿ 34 ಗ್ರಾಮಗಳ ಹೋಬಳಿಯಲ್ಲಿ ಹಳೆಯಂಗಡಿ, ಪಡು ಪಣಂಬೂರು, ಕೆಮ್ರಾಲ್‌, ಐಕಳ, ಮೆನ್ನಬೆಟ್ಟು, ಕಿನ್ನಿಗೋಳಿ, ಬಳ್ಕುಂಜೆ, ಅತಿಕಾರಿಬೆಟ್ಟು, ಕಿಲ್ಪಾಡಿ ಗ್ರಾ.ಪಂ. ಸಹಿತ ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿನ ಸಂಚಾರ ನಿಯಂತ್ರಣಕ್ಕೆ ಪ್ರತ್ಯೇಕ ಸಂಚಾರ ಉಪ ಠಾಣೆಯ ಬೇಡಿಕೆ ಮತ್ತೆ ಕೇಳಿಬರುತ್ತಿದೆ.
ಮೂಲ್ಕಿ ಹೋಬಳಿಯು ಮಂಗಳೂರು ಕಮಿಷನರೇಟ್‌ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಅಂದು ಅಸ್ತಿತ್ವಕ್ಕೆ ಬಂದ ಮಂಗಳೂರು ಉತ್ತರ ವಲಯದ ಸಂಚಾರ ಠಾಣಾ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ. ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಸಂಚಾರಿ ನಿಯಂತ್ರಣದಲ್ಲಿ ಬರುವ ಎಲ್ಲ ಕಾರ್ಯವ್ಯವಸ್ಥೆಯು ಸಂಚಾರ ಠಾಣೆಯ ಸುಪರ್ದಿಯಲ್ಲಿದೆ.
ಸಂಚಾರಿ ಒತ್ತಡ
ಮೂಲ್ಕಿ ಹೋಬಳಿಯು ರಾಷ್ಟ್ರೀಯ ಹೆದ್ದಾರಿ ಸಹಿತ ರಾಜ್ಯ ಹೆದ್ದಾರಿಯನ್ನೊಳ ಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಬ್ಬಾಗಿಲು ಬಪ್ಪನಾಡು ಬಳಿಯಿಂದ ಸಾಗುವ ರಾಷ್ಟ್ರೀಯ ಹೆದ್ದಾರಿಯು ಹೋಬಳಿಯ ಪಾವಂಜೆಯವರೆಗೆ ಸಾಗುತ್ತದೆ. ಗೋವಾ, ಮುಂಬಯಿ, ಪೂನಾ ಉತ್ತರ ಕನ್ನಡದ ಭಾಗಕ್ಕೆ ಸಂಚರಿಸುವವರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.
ಘನ ಹಾಗೂ ಲಘು ವಾಹನಗಳ ಸಂಚಾರವನ್ನು ಬಪ್ಪನಾಡು, ಮೂಲ್ಕಿ ಬಸ್‌ ನಿಲ್ದಾಣ, ಬಿಲ್ಲವ ಸಂಘದ ತಿರುವು, ಕೋಲ್ನಾಡು ಬೈಪಾಸ್‌, ಹಳೆಯಂಗಡಿ ಜಂಕ್ಷನ್‌, ಪಾವಂಜೆ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವೇಗ ಮಿತಿಯನ್ನು ಸೀಮಿತಗೊಳಿಲಾಗಿದೆ.
ಕಟೀಲು ಕ್ಷೇತ್ರ ಹಾಗೂ ಬಜಪೆ ವಿಮಾನ ನಿಲ್ದಾಣಕ್ಕೆ ತೆರಳುವವರು ಕಿನ್ನಿಗೋಳಿ ರಾಜ್ಯ ಹೆದ್ದಾರಿಯನ್ನು ಒಳ ರಸ್ತೆಯಾಗಿ ಬಳಸಲಾಗುತ್ತದೆ. ಕಿನ್ನಿಗೋಳಿ ಮುಖ್ಯ ಪೇಟೆಯಲ್ಲಿ ಸಂಚಾರದ ಒತ್ತಡ ನಿತ್ಯವೂ ಇರುತ್ತದೆ. ಇಲ್ಲಿನ ಬಸ್‌ ನಿಲ್ದಾಣದಲ್ಲೂ ಹಲವಾರು ಸಮಸ್ಯೆಗಳಿವೆ. ಮೂಲ್ಕಿ ಬಸ್‌ ನಿಲ್ದಾಣ, ಮೂರು ಕಾವೇರಿ ಜಂಕ್ಷನ್‌, ಹಳೆಯಂಗಡಿ ಜಂಕ್ಷನ್‌ ಇದರಿಂದ ಹೊರತಾಗಿಲ್ಲ. ಅಲ್ಲಲ್ಲಿ ರಸ್ತೆ ವಿಸ್ತರಣೆ ಕಂಡರೂ ಸಹ ವಾಹನಗಳ ವೇಗ ಮಿತಿ ಹೆಚ್ಚಾಗಿ ಅಪಘಾತಗಳೂ ಹೆಚ್ಚುತ್ತಿವೆ. ಪ್ರಸಿದ್ಧ ದೇವಾಲಯಗಳಾದ ಬಪ್ಪನಾಡು, ವೆಂಕಟ್ರಮಣ, ಕಟೀಲು ಜಾತ್ರೆ ಸಂದರ್ಭ, ಮಸೀದಿಗಳಲ್ಲಿನ ಉರೂಸ್‌ ಸಂಭ್ರಮ, ಚರ್ಚ್‌ನಲ್ಲಿ ನಡೆಯುವ ವಿಶೇಷ ಹಬ್ಬಗಳ ದಿನದಲ್ಲಿ ಸಂಚಾರದ ಒತ್ತಡವನ್ನು ನಿಯಂತ್ರಿಸಲು ಸಂಚಾರಿ ಪೊಲೀಸರು ಬೈಕಂಪಾಡಿಯಲ್ಲಿರುವ ಉತ್ತರ ವಲಯದ ಸಂಚಾರಿ ಠಾಣೆಯಿಂದಲೇ ನಿಯುಕ್ತಿಗೊಳ್ಳಬೇಕು. ಮೂಲ್ಕಿ ಬಳಿಯ ಕೋಲ್ನಾಡು ಕೈಗಾರಿಕೆ ಪ್ರಾಂಗಣದಲ್ಲಿ ಕೆಲವೊಮ್ಮೆ ಬೃಹತ್‌ ಕಂಟೈನರ್‌ಗಳು ಬಂದಾಗ ವಿಶೇಷ ಸಂಚಾರ ವ್ಯವಸ್ಥೆಗೆ ಸಂಚಾರಿ ಪೊಲೀಸರ ಅಗತ್ಯವಿದೆ. ವಿವಿಧ ಶಾಲಾ ವಠಾರದಲ್ಲಿ ಸಂಚಾರಿ ಪೊಲೀಸರ ನಿಯೋಜನೆಗೆ ಗ್ರಾಮಸಭೆ, ಜನಸ್ಪಂದನ ಸಭೆ ಹಾಗೂ ಪೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿ ಬರುತ್ತದೆ. ಸಾರ್ವಜನಿಕ ಮೆರವಣಿಗೆಗೂ ಸಹ ಸಂಚಾರಿ ಪೊಲೀಸರೇ ಕರ್ತವ್ಯ ನಿರ್ವಹಿಸಬೇಕಾಗಿದೆ.
ಮೂಲ್ಕಿ ಹೋಬಳಿಯಲ್ಲಿಯೇ ಉಪ ಠಾಣೆಯಾದಲ್ಲಿ ಏಳಿಂಜೆ, ಸಸಿಹಿತ್ಲು -ಕದಿಕೆ ಅಥವ ಬಳ್ಕುಂಜೆಯಂತಹ ಗ್ರಾಮೀಣ ಪ್ರದೇಶದಲ್ಲಿ ಅಪಘಾತವಾದಲ್ಲಿ ಅಥವ ಸಂಚಾರಿ ಪೊಲೀಸರ ತಪಾಸಣೆಯ ಸಂದರ್ಭದಲ್ಲಿ ದಂಡ ಪಾವತಿಸ ಬೇಕಾದಲ್ಲಿ ದೂರದ ಬೈಕಂಪಾಡಿ ಸಂಚಾರಿ ಠಾಣಾ ಕಚೇರಿ, ಮೂಡುಬಿದಿರೆ ಅಥವಾ ಮಂಗಳೂರಿನ ನ್ಯಾಯಾಲಯದಲ್ಲಿ ದಂಡ ಪಾವತಿಸಲು ತೆರಳಿದರೆ ದಿನ ಪೂರ್ತಿ ವ್ಯರ್ಥ ಮಾಡಬೇಕು. ಮೂಲ್ಕಿಯಲ್ಲಿಯೇ ಉಪ ಠಾಣೆಯಾದಲ್ಲಿ ಇದಕ್ಕೂ ಅನುಕೂಲ ಹಾಗೂ ಅಪಘಾತ ನಡೆದ ತತ್‌ಕ್ಷಣ ಸ್ಥಳಕ್ಕೆ ಸಂಚಾರಿ ಪೊಲೀಸರು ದೌಡಾಯಿ ಸಬಹುದು. ಈಗ ಸಂಚಾರಿ ನಿಯಂತ್ರಣಕ್ಕೆ ಹೆಚ್ಚಾಗಿ ಗೃಹ ರಕ್ಷಕದಳದವರನ್ನೇ ಅನಿವಾರ್ಯವಾಗಿ ನಿಯೋಜಿ ಸ ಲಾಗುತ್ತಿದೆ. ಸಿಬಂದಿ ಕೊರತೆ ಯನ್ನು ಸಹ ನೀಗಿಸಬಹುದು. ಇನ್ನಷ್ಟು ಪರಿಣಾಮಕಾರಿಯಾಗಿ ಸಂಚಾರ ವ್ಯವಸ್ಥೆಯನ್ನು ನಿಭಾಯಿಸಲು ಸಾಧ್ಯವಿದೆ. ಉತ್ತರ ವಲಯದ ಸಂಚಾರಿ ಠಾಣೆಗೆ ಈಗಿರುವ ಒತ್ತಡ ವನ್ನು ಸಹ ವಿಭಾಗಿಸಲು ಸಾಧ್ಯವಿದೆ.
 ಪರಿಶೀಲನೆ ನಡೆಸಿ ಪ್ರಸ್ತಾವ
ಮೂಲ್ಕಿ ಹೋಬಳಿಯಲ್ಲಿ ಪ್ರತ್ಯೇಕ ಹೊರ ಠಾಣೆ ಅಥವಾ ಉಪ ಠಾಣೆಯ ಬಗ್ಗೆ ನೀಡಿದ ಮನವಿಯನ್ನು ಸೂಕ್ತವಾಗಿ ಪರಿಶೀಲನೆ ನಡೆಸಿ, ಈಗಿನ ಸ್ಥಿತಿ ಗತಿಯನ್ನು ಅಭ್ಯಸಿಸಿ, ಪ್ರಸ್ತುತವಾಗಿ ಸಾಧ್ಯತೆಯ ಅಗತ್ಯತೆ ಇದ್ದಲ್ಲಿ ಸೂಕ್ತವಾಗಿ ಸರಕಾರಕ್ಕೆ ವರದಿ ನೀಡಿ ಪ್ರಸ್ತಾವನೆ ಸಲ್ಲಿಸಲಾಗುವುದು.
– ಸಂದೀಪ್‌ ಪಾಟೀಲ್‌,
  ಪೊಲೀಸ್‌ ಕಮಿಷನರ್‌,
   ಮಂಗಳೂರು ನಗರ 
ಮುಖ್ಯಮಂತ್ರಿಗೆ ಮನವಿ
ಮೂಲ್ಕಿ ನಾಗರಿಕ ಸಮಿತಿಯ ಮೂಲಕ ಮುಖ್ಯಮಂತ್ರಿ, ಗೃಹ ಸಚಿವರ ಸಹಿತ ಜನಪ್ರತಿನಿಧಿಗಳಿಗೆ ನೀಡಿರುವ ಮನವಿಯಲ್ಲಿ ಮೂಲ್ಕಿ ಹೋಬಳಿಯಲ್ಲಿ ಸಂಚಾರಿ ಹೊರ ಠಾಣೆ ಅಥವಾ ಪೂರ್ಣ ಪ್ರಮಾಣದ ಸಂಚಾರಿ ಠಾಣೆ
ಆರಂಭಕ್ಕೆ ಮನವಿ ನೀಡಿದ್ದೇವೆ. ಈ ಬಗ್ಗೆ ಸರಕಾರವು ಸ್ಪಂದಿಸುವ ಭರವಸೆ ಇದೆ. ಮೂಲ್ಕಿ ತಾಲೂಕು ರಚನೆಗೆ ಪೂರಕವಾಗಿ ಸಂಚಾರಿ ಠಾಣೆಯು ನಿರ್ಮಾಣವಾಗಬೇಕು.
– ಹರಿಕೃಷ್ಣ ಪುನರೂರು,
ಅಧ್ಯಕ್ಷರು, ನಾಗರಿಕ ಸಮಿತಿ, ಮೂಲ್ಕಿ
Advertisement

Udayavani is now on Telegram. Click here to join our channel and stay updated with the latest news.

Next