ಬೆಂಗಳೂರು: ರಾಜಧಾನಿಯಲ್ಲಿ ಪದೇ-ಪದೆ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ದಂಡ ವಸೂಲಿ ಮಾಡುವುದೇ ಸಂಚಾರ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡಿರುವ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ನಿಯಮ ಉಲ್ಲಂಘಿಸುವ ವ್ಯಕ್ತಿಗಳ ಮನೆಗೆ ತೆರಳಿ ನೋಟಿಸ್ ಕೊಟ್ಟು ದಂಡ ವಸೂಲಿಗೆ ಮುಂದಾಗಿದ್ದಾರೆ.
ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ಇಂತಹದ್ದೊಂದು ಹೊಸ ಕಾರ್ಯಕ್ಕೆ ಕೈ ಹಾಕಿದ್ದು, ಪದೇ-ಪದೆ ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚಿ ಅವರ ಮನೆಗೆ ತೆರಳಿ ನೋಟಿಸ್ ಕೊಟ್ಟು ದಂಡ ಪಾವತಿಸುವಂತೆ ಸೂಚಿಸುತ್ತಿದ್ದಾರೆ.
ಸಾರಿಗೆ ಇಲಾಖೆ ಅಧಿಕಾರಿಗಳ ಸಹಕಾರ ಪಡೆದಿರುವ ಟ್ರಾಫಿಕ್ ಪೊಲೀಸರು, ವಾಹನಗಳ ನೋಂದಣಿ ಸಂಖ್ಯೆ ಮೂಲಕ ಮಾಲೀಕರ ಮನೆಯ ವಿಳಾಸ ಪತ್ತೆ ಹಚ್ಚುತ್ತಿದ್ದಾರೆ. ಈ ಕ್ರಮ ಬೆಂಗಳೂರಿನಲ್ಲಿ ಯಶಸ್ವಿಯಾದರೆ ಮುಂದೆ ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಹೇಗೆ ಕಾರ್ಯ ನಿರ್ವಹಿಸಲಿದೆ ?: ಸಿಗ್ನಲ್ ಜಂಪ್, ಅತೀ ವೇಗದ ಚಾಲನೆ, ರಾಂಗ್ ಸೈಡ್‌ನಲ್ಲಿ ಚಲಾಯಿಸುವುದು, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸದಿರುವುದು ಸೇರಿ ಇನ್ನಿತರ ಸಂಚಾರ ನಿಯಮ ಉಲ್ಲಂಘಿಸಿದರೆ ಸಿಗ್ನಲ್‌ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇನ್ನು ಕೆಲವೊಂದು ಬಾರಿ ಸಂಚಾರ ಪೊಲೀಸರೇ ನಿಯಮ ಉಲ್ಲಂ ಸುವ ವಾಹನದ ನಂಬರ್ ಅನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾರೆ.
ಈ ಪೈಕಿ ನಿರಂತರ ಸಂಚಾರ ನಿಯಮ ಉಲ್ಲಂಘಿಸುವ ವಾಹನ ನೋಂದಣಿ ಸಂಖ್ಯೆಯನ್ನುಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ (ಟಿಎಂಸಿ) ಸಿಬ್ಬಂದಿ ಪತ್ತೆಹಚ್ಚುತ್ತಾರೆ. ನಂತರ ಸಾರಿಗೆ ಇಲಾಖೆಅಧಿಕಾರಿಗಳಿಂದ ಮಾಲೀಕರ ಮನೆಯ ವಿಳಾಸಪಡೆದು ಆಯಾ ವ್ಯಾಪ್ತಿಯ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿಗೆ ವಾಹನ ಮಾಲೀಕರ ಮನೆಯ ವಿಳಾಸದ ಕುರಿತು ಮಾಹಿತಿ ನೀಡುತ್ತಾರೆ. ಈ ಮಾಹಿತಿ ಆಧರಿಸಿ ಠಾಣೆಯ ಬೀಟ್ ಪೊಲೀಸರು ತಮ್ಮ ಕರ್ತವ್ಯದ ಅವಧಿಯಲ್ಲಿ ವಾಹನ ಮಾಲೀಕರ ಮನೆಗೆ ತೆರಳಿ ನೋಟಿಸ್ ಕೊಡುತ್ತಾರೆ. ಮಾಲೀಕರಿಗೆ ದಂಡ ಪಾವತಿಸುವಂತೆ ಸೂಚಿಸಲಾಗುತ್ತದೆ. ಜತೆಗೆ ಸಂಚಾರ ನಿಯಮ ಉಲ್ಲಂಘನೆಯಿಂದ ಸಂಭವಿಸಬಹುದಾದ ಅಪಘಾತಗಳ ಬಗ್ಗೆ ಮಾಹಿತಿ ನೀಡಿ ಎಚ್ಚರಿಕೆ ಕೊಡುವ ಕೆಲಸವನ್ನೂ ಸಂಚಾರ ಪೊಲೀಸರು ಮಾಡುತ್ತಿದ್ದಾರೆ.
ಸಾರ್ವಜನಿಕರಿಂದ ಆಕ್ಷೇಪ: ಸಾರ್ವಜನಿಕ ವಲಯದಲ್ಲಿ ಪೊಲೀಸರ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ. ಪೊಲೀಸರು ಮನೆಗೇ ಬಂದು ದಂಡ ಸಂಗ್ರಹಿಸುವುದರಿಂದ ಅಕ್ಕ-ಪಕ್ಕದ ಮನೆಯವರಿಗೆ ಗೊತ್ತಾಗಿ ಮುಜುಗರ ಉಂಟಾಗುತ್ತದೆ. ಅದರ ಬದಲು ಸಂಚಾರ ನಿಯಮ ಉಲ್ಲಂಘನೆಗಳ ಬಗ್ಗೆ ವಾಹನ ಮಾಲೀಕರ ಮೊಬೈಲ್‌ಗೆ ಸಂದೇಶ ಕಳುಹಿಸಿದರೆ ಸಾಕು ಎಂಬ ಮಾತು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬಂದಿದೆ. ಕಾನ್‌ಸ್ಟೆàಬಲ್, ಹೆಡ್ ಕಾನ್‌ಸ್ಟೇಬಲ್, ಎಎಸ್‌ಐ, ಪಿಎಸ್‌ಐ ಹುದ್ದೆಯ ಸಿಬ್ಬಂದಿಯೇ ವಾಹನ ಮಾಲೀಕರ ಮನೆಗೆ ತೆರಳಬೇಕಾಗಿದ್ದು, ಪ್ರತಿ ಬಾರಿ ಸಾರ್ವಜನಿಕರ ಬೈಗುಳ ಕೇಳಿ ಪೊಲೀಸ್ ಸಿಬ್ಬಂದಿ ರೋಸಿ ಹೋಗಿದ್ದಾರೆ ಎಂದು ಸಂಚಾರ ಠಾಣೆಯೊಂದರ ಇನ್‌ಸ್ಪೆಕ್ಟರ್ “ಉದಯವಾಣಿ’ಗೆ ತಿಳಿಸಿದ್ದಾರೆ.
7 ತಿಂಗಳಲ್ಲಿ 105 ಕೋಟಿ ದಂಡ ಸಂಗ್ರಹ :
ಟ್ರಾಫಿಕ್ ಪೊಲೀಸರ ಈ ಹೊಸ ಕ್ರಮದಿಂದ ದಂಡ ಸಂಗ್ರಹದಲ್ಲೂ ಏರಿಕೆ ಕಂಡು ಬಂದಿದೆ. 2019ರಲ್ಲಿ ಸಂಗ್ರಹಿಸಿದ್ದ 89.18 ಕೋಟಿ ರೂ. 2022ಕ್ಕೆ ಕೇವಲ 7 ತಿಂಗಳಲ್ಲಿ 105.7 ಕೋಟಿ ರೂ.ಗೆ ಏರಿಕೆಯಾಗಿದೆ. ಜತೆಗೆ ಆನ್‌ಲೈನ್‌ನಲ್ಲೇ ದಂಡ ಪಾವತಿಸುವವರ ಸಂಖ್ಯೆ ಹೆಚ್ಚಾಗಿದೆ.2019ರಲ್ಲಿ 39,45,831 ವಾಹನ ಸವಾರರುಆನ್‌ಲೈನ್‌ನಲ್ಲಿ ದಂಡ ಪಾವತಿಸಿದ್ದರೆ, 2022ರಲ್ಲಿ7 ತಿಂಗಳಲ್ಲಿ (ಜುಲೈ) ಇದರ ಪ್ರಮಾಣ 49,81,677ಕ್ಕೆ ಹೆಚ್ಚಳವಾಗಿದೆ.
-ಅವಿನಾಶ್ ಮೂಡಂಬಿಕಾನ