ರಬಕವಿ-ಬನಹಟ್ಟಿ: ವಾಹನ ಚಲಾಯಿಸುವಾಗ ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸಿ, ವಾಹನ ಚಾಲಕರು ಕಡ್ಡಾಯವಾಗಿ ಲೈಸನ್ಸ್ ಪಡೆದುಕೊಳ್ಳಬೇಕು, ಜೊತೆಗೆ ವಾಹನಕ್ಕೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಹೊಂದಿರಬೇಕು ಎಂದು ರಬಕವಿ ಹೊಸೂರಿನ ಪದ್ಮಾವತಿ ಅಂತರರಾಷ್ಟ್ರೀಯ ಶಾಲೆಯ ಮಕ್ಕಳು ಸಾರ್ವಜನಿಕರಿಗೆ ತಿಳಿ ಹೇಳಿದರು.
ರಬಕವಿ ಹೊಸೂರಿನ ಪದ್ಮಾವತಿ ಅಂತರರಾಷ್ಟ್ರೀಯ ಶಾಲೆಯ ಮಕ್ಕಳು ಬುಧವಾರ ಸ್ಥಳೀಯ ಬಸ್ ನಿಲ್ದಾಣ, ಪೊಲೀಸ್ ಠಾಣೆ ಹಾಗೂ ನೂಲಿನ ಗಿರಣಿಯ ಮುಂಭಾಗದಲ್ಲಿ ಬನಹಟ್ಟಿ ಪೊಲೀಸರ ಸಹಕಾರದೊಂದಿಗೆ ರಸ್ತೆ ಸಂಚಾರ ನಿಮಯಗಳನ್ನು ಹೇಳಿದರು.
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಮೊಬೈಲ್ ನಲ್ಲಿ ಮಾತನಾಡುತ್ತ ವಾಹನ ಚಲಾಯಿಸಬೇಡಿ. ದ್ವಿಚಕ್ರ ವಾಹನದ ಮೇಲೆ ಕೇವಲ ಇಬ್ಬರು ಮಾತ್ರ ವಾಹನ ಸವಾರರು ಸಂಚರಿಸಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರಿಗೆ ವಾಹನ ಚಲಾಯಿಸಲು ಪಾಲಕರು ಕೊಡಬಾರದು ಎಂದು ವಿದ್ಯಾರ್ಥಿಗಳು ವಾಹನ ಸವಾರರಿಗೆ ತಿಳಿ ಹೇಳಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಪಿಎಸ್‌ಐ ಸುರೇಶ ಮಂಟೂರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆರಂಭದಿಂದಲೇ ರಸ್ತೆ ಸಂಚಾರ ಕುರಿತು ಜಾಗೃತಿಯನ್ನು ಮೂಡಿಸುವುದರಿಂದ ಅವರು ಮುಂದಿನ ದಿನಗಳಲ್ಲಿ ರಸ್ತೆ ನಿಯಮಗಳನ್ನು ಪಾಲಿಸುತ್ತಾರೆ. ವಿದ್ಯಾರ್ಥಿಗಳು ವಾಹನ ಸಂಚಾರರಿಗೆ ಪ್ರತಿಯೊಂದು ರಸ್ತೆ ನಿಯಮಗಳನ್ನು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಿದರು. ಸಾರ್ವಜನಿಕರು ವಿದ್ಯಾರ್ಥಿಗಳು ಹೇಳಿದ ರಸ್ತೆ ನಿಯಮಗಳನ್ನು ಪಾಲಿಸುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಪಿಎಸ್‌ಐ ಮಂಟೂರ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಬಸವರಾಜ ಕಲಾದಗಿ, ಎಎಸ್‌ಐ ಎಸ್.ಎಸ್.ಬಾಬಾನಗರ, ಧರೆಪ್ಪ ಕುಂಬಾರ ಸ್ಥಳೀಯ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು, ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಜೊತೆಗಿದ್ದರು.