ಬೆಂಗಳೂರು: ಬೆಂಗಳೂರಿನಲ್ಲಿ ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸಿ 50 ಸಾವಿರ ರೂ.ಗಿಂತ ಹೆಚ್ಚಿನ ದಂಡ ಪಾವತಿ ಬಾಕಿ ಉಳಿಸಿಕೊಂಡಿರುವವರ ಮನೆ ಬಾಗಿಲಿಗೆ ತೆರಳಿ ದಂಡ ವಸೂಲಿ ಮಾಡಲು ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರಿನ ವಿವಿಧೆಡೆ ಕಳೆದ 10 ದಿನಗಳಿಂದ ಸಂಚಾರ ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. 2,681ಕ್ಕೂ ಹೆಚ್ಚಿನ ವಾಹನಗಳು 50 ಸಾವಿರಕ್ಕೂ ಅಧಿಕ ದಂಡ ಪಾವತಿಗೆ ಬಾಕಿ ಉಳಿಸಿಕೊಂಡಿವೆ ಎಂದು ತಿಳಿದು ಬಂದಿದೆ. ಈಗಾಗಲೇ ಹಲವು ವಾಹನ ಸವಾರರ ಮನೆಗೆ ಸಂಚಾರ ಪೊಲೀಸರು ತೆರಳಿ ದಂಡ ವಸೂಲಿ ಮಾಡಿದ್ದಾರೆ. ಕೆಲವು ಕಡೆಗಳಲ್ಲಿ ದಂಡ ವಸೂಲಾತಿಗೆ ತೆರಳಿದಾಗ ವಾಹನ ಮಾಲೀಕರು ದಂಡ ಪಾವತಿಸದೇ ತಮ್ಮ ವಾಹನಗಳನ್ನು ಮಾರಾಟ ಮಾಡಿರುವುದು ಗೊತ್ತಾಗಿದೆ.
ಇಂತಹ ವಾಹನ ಮಾಲೀಕರಿಗೆ ದಂಡ ಪಾವತಿಗೆ ಕಾಲವಕಾಶ ನೀಡಲಾಗಿದೆ. ದಂಡ ಪಾವತಿಸದೇ ಇದ್ದರೆ ಕಾನೂನಾತ್ಮಕವಾಗಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಲು ಸಂಚಾರ ವಿಭಾಗದ ಪೊಲೀಸರು ನಿರ್ಧರಿಸಿದ್ದಾರೆ.
ಮಿತಿ ಮೀರಿ ಜನರನ್ನು ಕರೆದೊಯ್ಯುಬೇಡಿ: ಆರು ವರ್ಷಗಳಿಗಿಂತ ಕೆಳಪಟ್ಟ ಮಕ್ಕಳಿಗೆ ಹೆಲ್ಮೆಟ್ ಧರಿಸುವ ಅಗತ್ಯವಿಲ್ಲ. ಆದರೆ, ಶಾಲೆಗೆ ಕರೆದೊಯ್ಯುವ ವೇಳೆ ಒಂದೇ ಸ್ಕೂಟರ್‌ನಲ್ಲಿ ಎರಡು ಮೂರು ಜನರನ್ನು ಕರೆದುಕೊಂಡು ಹೋಗುವುದು ಸೂಕ್ತವಲ್ಲ. ಶಾಲಾ ವಾಹನಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಾಗಲೂ ಸಹ ಒಂದೊಂದು ವಾಹನದಲ್ಲೂ ಮಿತಿ ಮೀರಿ ಮಕ್ಕಳನ್ನು ಕೊಂಡೊಯ್ಯುವುದು ಪತ್ತೆಯಾಗಿತ್ತು ಎಂದು ಸಂಚಾರ ವಿಭಾಗದ ಮೂಲಗಳು ತಿಳಿಸಿವೆ.