Advertisement

ರಸ್ತೆ ನಿಯಮ ಪಾಲಿಸಲು ತಾಕೀತು

04:09 PM Oct 05, 2018 | Team Udayavani |

ಬಳ್ಳಾರಿ: ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲ ಪಾಲುದಾರಿಕೆ ಇಲಾಖೆಗಳು ಸುಪ್ರೀಂ ಕೋರ್ಟ್‌ ನೀಡಿದ ರಸ್ತೆ ಸುರಕ್ಷತಾ ಸಮಿತಿಯ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಮಗ್ರ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಏರ್ಪಡಿಸಬೇಕು. ಜಿಲ್ಲೆಯ ರಸ್ತೆ ಸುರಕ್ಷತೆಯ ಸಮಗ್ರ ಮಾಹಿತಿ ಸಂಗ್ರಹಿಸಬೇಕು.

ಜಿಲ್ಲೆಯ ರಸ್ತೆಗಳಿಗೆ ಅವೈಜ್ಞಾನಿಕವಾಗಿ ಅಳವಡಿಸಿರುವ ಎಲ್ಲ ರಸ್ತೆ ಉಬ್ಬುಗಳನ್ನು ತೆರವುಗೊಳಿಸಬೇಕು. ಎಲ್ಲ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲ ಚಲನಚಿತ್ರಮಂದಿರಗಳಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಕಿರುಚಿತ್ರಗಳನ್ನು ಪ್ರದರ್ಶಿಸಬೇಕು. ವಾಹನ ಸಂಚಾರಕ್ಕೆ ಆಡಚಣೆ ಉಂಟು ಮಾಡುವ, ಅಪಘಾತಕ್ಕೆ ಕಾರಣವಾಗುವ, ಆತಂಕ ಉಂಟು ಮಾಡುವಂತಹ ರಸ್ತೆ ಬದಿಯಲ್ಲಿನ ಎಲ್ಲ ರೀತಿಯ ಆಡಚಣೆಗಳನ್ನು ತೆರವುಗೊಳಿಸಬೇಕು. ಬೆಂಗಳೂರು ರಸ್ತೆಯಲ್ಲಿರುವ ರೈಲ್ವೆ ಗೇಟ್‌ ಬಳಿ ನಿತ್ಯ ಟ್ರಾಫೀಕ್‌ ಜಾಮ್‌ ಉಂಟಾಗುತ್ತಿದೆ. ಅಲ್ಲಿ ದೊಡ್ಡ ತೆಗ್ಗುಗಳು ಬಿದ್ದಿದ್ದು, ಇದರಿಂದ ಬಹಳಷ್ಟು ಸಮಸ್ಯೆ ಉಂಟಾಗುತ್ತಿದೆ. ಅದನ್ನು ಸರಿಪಡಿಸಲು ಪೊಲೀಸ್‌ ಅಧಿಕಾರಿ ಕೋರಿದ್ದಕ್ಕೆ ತಕ್ಷಣ ಸ್ಪಂದಿಸಿ ವರದಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚನೆ ನೀಡಿದರು.

ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ಮಾತನಾಡಿ, ಬಳ್ಳಾರಿ-ಸಿರಗುಪ್ಪ ರಸ್ತೆ ಮಾರ್ಗದಲ್ಲಿ ವಾಹನಗಳಲ್ಲಿ ಸರಕು ಸಾಗಾಣಿಕಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ಅವುಗಳನ್ನು ಕೂಡಲೇ ನಿಯಂತ್ರಿಸಬೇಕು. ಅಲ್ಲದೇ, ಸರಕು ಸಾಗಾಣಿಕ ವಾಹನಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ
ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್‌ ಓಡಿಸುವಂತೆ ರಸ್ತೆ ಸುರಕ್ಷತಾ ಸಮಿತಿಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

Advertisement

ಸುಪ್ರೀಂ ಕೋರ್ಟ್‌ ರಸ್ತೆ ಸುರಕ್ಷತಾ ಸಮಿತಿಯು ರಸ್ತೆಗಳ ಒತ್ತುವರಿಯನ್ನು ಪರಿಣಾಮಕಾರಿಯಾಗಿ ತೆರವುಗೊಳೊಸುವಂತೆ ಸೂಚಿಸಿದ್ದು, ಇದರ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕೆಂದರು. ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ‌ವಾಗಿ ಚರ್ಚಿಸಲಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ಜಿಲ್ಲೆಯ ಎಲ್ಲ ಚಲನಚಿತ್ರಮಂದಿರಗಳಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಕಿರುಚಿತ್ರಗಳನ್ನು ಪ್ರದರ್ಶಿಸಬೇಕು. ವಾಹನ ಸಂಚಾರಕ್ಕೆ ಆಡಚಣೆ ಉಂಟು ಮಾಡುವ, ಅಪಘಾತಕ್ಕೆ ಕಾರಣವಾಗುವ, ಆತಂಕ ಉಂಟು ಮಾಡುವಂತಹ ರಸ್ತೆ ಬದಿಯಲ್ಲಿನ ಎಲ್ಲ ರೀತಿಯ ಆಡಚಣೆಗಳನ್ನು ತೆರವುಗೊಳಿಸಬೇಕು.  ಡಾ| ರಾಮ್‌ ಪ್ರಸಾತ್‌ ಮನೋಹರ್‌, ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next