Advertisement

ಸಂಚಾರಿ ನಿಯಮ ಪಾಲಿಸಿ

11:08 AM Sep 13, 2019 | Suhan S |

ಗದಗ: ಕಾನೂನನ್ನು ಗೌರವಿಸಿ ಪಾಲಿಸುವವರಿಗೆ ಯಾವುದೇ ತೊಂದರೆಗಳು ಎದುರಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳು ರಸ್ತೆಗಳಲ್ಲಿ ಸಂಚರಿಸುವಾಗ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ಪ್ರಯಾಣವು ಸುರಕ್ಷಿತವಾಗಿರಲಿದ್ದು, ದಂಡ ತೆರವು ಪ್ರಸಂಗವೂ ಬಾರದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ ಜೋಶಿ ಕಿವಿಮಾತು ಹೇಳಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜೈಭೀಮ ಆಟೋ ರಿಕ್ಷಾ ಮಾಲಕರ, ಚಾಲಕರ ಸಂಘ ಹಾಗೂ ಜಿಲ್ಲಾ ಆಟೋ ರಿಕ್ಷಾ ಮಾಲಕರ, ಚಾಲಕರ ಸಂಘದ ಆಶ್ರಯದಲ್ಲಿ ನಗರದ ತೋಂಟದಾರ್ಯ ಸಿದ್ಧಲಿಂಗ ಕಲ್ಯಾಣ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಆಟೋ ಚಾಲಕರಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಾಹನ ಸವಾರರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಎಲ್ಲರೂ ಕಟ್ಟುನಿಟ್ಟಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಸಂಭವಿಸಬಹುದಾದ ಅಪಘಾತಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಕೇಂದ್ರ ಮತ್ತು ಸರಕಾರ ಇತ್ತೀಚೆಗೆ ದಂಡದ ಮೌಲ್ಯವನ್ನು ಹೆಚ್ಚಿಸಿದೆಯೇ ಹೊರತು, ಆದಾಯ ಗಳಿಸುವ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿನ್ನೆಲೆಯಲ್ಲಿ ಆಟೋ ಚಾಲಕರು ಕಟ್ಟುನಿಟ್ಟಾಗಿ ಸಂಚಾರಿ ನಿಯಮ ಪಾಲಿಸಬೇಕು. ಕಡ್ಡಾಯವಾಗಿ ಖಾಕಿ ಸಮವಸ್ತ್ರ ಧರಿಸಬೇಕು. ಆ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಆಟೋ ಚಾಲಕರಿಗೆ ನಗರದ ಗಲ್ಲಿಗಲ್ಲಿಯ ಸಂಪೂರ್ಣ ಮಾಹಿತಿ ಇರುತ್ತದೆ. ಆ ಪೈಕಿ ಜೂಜಾಟ, ಗುಂಪು ಗಲಾಟೆ, ವೇಶ್ಯಾವಾಟಿಕೆ ಸೇರಿದಂತೆ ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿದ್ದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಸಾಮಾಜಿಕ ಕರ್ತವ್ಯವನ್ನು ನಿರ್ವಹಿಸಬೇಕು. ಆ ಮೂಲಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು ಪೊಲೀಸ್‌ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

Advertisement

ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಜಿ. ಸಲಗರೆ ಮಾತನಾಡಿ, ಭೂಮಿಯಲ್ಲಿರುವ ಸಕಲ ಜೀವರಾಶಿಗಳಿಗಿಂತ ಮಾನವನ ಬದುಕು ಅತ್ಯಂತ ಮಹತ್ವದ್ದಾಗಿದೆ. ಇಡೀ ಕುಟುಂಬ ನಮ್ಮನ್ನೇ ಅವಲಂಬಿಸಿರುತ್ತದೆ. ಹೀಗಾಗಿ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತವಾಗಿ ಪ್ರಯಾಣಿಸಬೇಕು ಎಂದು ಹೇಳಿದರು.

ಜಿಲ್ಲಾ ಆಟೋ ಮಾಲಕರ ಸಂಘದ ಗೌರವ ಅಧ್ಯಕ್ಷ ಎಸ್‌.ಎನ್‌. ಬಳ್ಳಾರಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿರುವ ಹಲವಾರು ಯೋಜನೆಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಸರಕಾರದ ಹಲವಾರು ಯೋಜನೆಗಳನ್ನು ಆಟೋ ರಿಕ್ಷಾದವರು ಪಡೆದುಕೊಳ್ಳಬೇಕು. ಕಾನೂನುಗಳನ್ನು ನಾವುಗಳ ಪಾಲನೆ ಮಾಡಬೇಕು ಎಂದರು.

ಸಾರಿಗೆ ಅಧಿಕಾರಿ ಬಾಲಕೃಷ್ಣ ಮಾತನಾಡಿ, ದೇಶದಲ್ಲಿ ನೂತನ ಮೋಟಾರು ಕಾಯ್ದೆ ಜಾರಿಗೆ ತರಲಾಗಿದ್ದು, ದಂಡದ ಮೊತ್ತ ದುಪ್ಪಟ್ಟಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಿ ದಂಡದಿಂದ ಮುಕ್ತರಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆಟೋ ಮಾಲೀಕರ ಸಂಘದ ಅಧ್ಯಕ್ಷ ವಿಜಯ ಕಲ್ಮನಿ, ಜೈ ಭೀಮ ಆಟೋ ರಿಕ್ಷಾ ಮಾಲಕರ ಸಂಘದ ಅಧ್ಯಕ್ಷ ಪರಶುರಾಮ ಪೂಜಾರ, ಮಾರುತಿ ಗುಡಿಮನಿ, ಮಂಜುನಾಥ ಅಗಸಿಮನಿ, ಎಂ.ಎ. ಧಾರವಾಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next