Advertisement

ಸಾಕಪ್ಪಾ ಸಾಕು ಈ ಬಿಡಾಡಿ ದನಗಳ ಕಾಟ: ಸಂಚಾರಕ್ಕೆ ಸಂಚಕಾರ

04:04 PM Jul 19, 2022 | Team Udayavani |

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವ್ಯಾಪಾರಸ್ಥರು, ಪಾದಚಾರಿಗಳು ಸೇರಿದಂತೆ ವಾಹನ ಸವಾರರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರು ರಸ್ತೆಯಲ್ಲಿ ಸಂಚರಿಸದಂತಾಗಿದೆ.

Advertisement

ಈ ದನಗಳು ವ್ಯಾಪಾರಸ್ಥರ ಅಂಗಡಿಗಳ ಮುಂದೆ ಗುಂಪು ಗುಂಪಾಗಿ ಮಲಗುತ್ತವೆ. ಅಲ್ಲದೇ ರಸ್ತೆಯ ಮಧ್ಯ ಭಾಗದಲ್ಲಿಯೇ ಒಂದಕ್ಕೊಂದು ಕಾದಾಡುವುತ್ತಿರುವುದರಿಂದ ರಸ್ತೆ ಸಂಚಾರಕ್ಕೂ ಸಂಚಕಾರ ಉಂಟಾಗುತ್ತಿದೆ.

ಬೆಳಗಿನ ಜಾವವೇ ರಸ್ತೆಗೆ ದಾಂಗುಡಿಯಿಡುವ ಬಿಡಾಡಿ ದನಗಳು ರಸ್ತೆಗೆ ಅಡ್ಡಲಾಗಿ ನಿಂತು ಟ್ರಾಫಿಕ್‌ ಸಮಸ್ಯೆ ಉಂಟು ಮಾಡುತ್ತವೆ. ವಾಹನಗಳ ಧ್ವನಿ ಕೇಳಿಯೂ ಕೇಳದಂತೆ ನಿಂತಿರುತ್ತವೆ. ಕೆಲವೊಮ್ಮೆ ಬೈಕ್‌ ಗುದ್ದಿಕೊಂಡು ಹೋದ ಘಟನೆಗಳು ಸಂಭವಿಸಿವೆ.

ಎಲ್ಲೆಡೆಯೂ ಇದೆ ಈ ಸಮಸ್ಯೆ: ಈ ಸಮಸ್ಯೆ ಕೇವಲ ಒಂದು ಪ್ರದೇಶದಲ್ಲಲ್ಲ. ಬೆಟಗೇರಿ ಬಸ್‌ ನಿಲ್ದಾಣ, ಕಾಯಿಪಲ್ಲೆ ಮಾರ್ಕೆಟ್‌, ಟರ್ನಲ್‌ ಪೇಟೆ, ಹೆಲ್ತ್‌ಕ್ಯಾಂಪ್‌, ರೈಲು ನಿಲ್ದಾಣ, ಮಹಾತ್ಮಾ ಗಾಂಧಿ ವೃತ್ತ, ಮಹೇಂದ್ರಕರ್‌ ಸರ್ಕಲ್‌, ಹುಯಿಲಗೋಳ ನಾರಾಯಣ ವೃತ್ತ, ಮುಳಗುಂದ ನಾಕಾ, ಭೂಮರಡ್ಡಿ ಸರ್ಕಲ್‌ ಮುಂತಾದ ಪ್ರಮುಖ ಭಾಗಗಳಲ್ಲಿ ಬಿಡಾಡಿ ದನಗಳು ಹೆಚ್ಚಾಗಿದ್ದು, ಇಲ್ಲಿ ವಾಹನ ಸವಾರರು ಸಂಚರಿಸುವುದೇ ದುಸ್ತರವಾಗಿದೆ.

ಈ ದನಗಳ ಮಾಲೀಕರಾರು?: ಕಳೆದ ಕೆಲ ವರ್ಷಗಳ ಹಿಂದೆ ನಗರಸಭೆ ವತಿಯಿಂದ ಬಿಡಾಡಿ ದನಗಳ ಹಾವಳಿ ತಪ್ಪಿಸಲು ಗೋಶಾಲೆ ತೆರೆಯಲಾಗಿತ್ತು. ಬಿಡಾಡಿ ದನಗಳನ್ನು ಗೋಶಾಲೆಗೆ ಹಾಕುವ ಸಂದರ್ಭದಲ್ಲಿ ಕೆಲವರು ದನಗಳು ತಮಗೆ ಸೇರಿದ್ದವು ಎಂದು ತೆಗೆದುಕೊಂಡು ಹೋಗಿದ್ದರು. ನಿಜವಾದ ಬಿಡಾಡಿ ದನಗಳು ಯಾವವು, ಬಿಡಾಡಿ ದನಗಳ ಮಾಲೀಕರಾರು?ಎಂಬ ಪ್ರಶ್ನೆ ಮೂಡುತ್ತಿದೆ. ಬಿಡಾಡಿ ದನಗಳ ಮಾಲೀಕರಿದ್ದರೆ ಕೂಡಲೇ ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ನಗರಸಭೆಯಿಂದ ಸೂಚಿಸಲಾಗಿದೆ.

Advertisement

ಪೊಲೀಸರ ಪರದಾಟ: ಬಿಡಾಡಿ ದನಗಳ ಹಾವಳಿಯಿಂದ ರಸ್ತೆ ಸಂಚಾರ ಸುಗಮಗೊಳಿಸಲು ಪೊಲೀಸರು ಹೆಣಗಾಡುವಂತಾಗಿದೆ. ಸಿಗ್ನಲ್‌ನಲ್ಲೂ ದಾಳಿಯಿಡುವ ಬಿಡಾಡಿ ದನಗಳನ್ನು ಓಡಿಸುವ ಕೆಲಸ ನಿರ್ವಹಿಸುವಂತಹ ಪರಿಸ್ಥಿತಿ ಪೊಲೀಸರದ್ದಾಗಿದೆ.

ಇಷ್ಟಿದ್ದರೂ ಬಿಡಾಡಿ ದನಗಳ ಹಾವಳಿ ನಿಯಂತ್ರಿಸಲು ನಗರಸಭೆ ಮುಂದಾಗುತ್ತಿಲ್ಲ. ಬಿಡಾಡಿ ದನಗಳ ನಿಯಂತ್ರಣಕ್ಕೆ ಈವರೆಗೂ ಸ್ಥಳ ನಿಗದಿ ಮಾಡದಿರುವುದರಿಂದ ಅವಳಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಇತ್ತೀಚೆಗಂತೂ ತರಕಾರಿ-ದಿನಸಿ ತರಲು ಮಾರುಕಟ್ಟೆಗೆ ಹೋಗಲು ಭಯವಾಗುತ್ತಿದೆ. ಖರೀದಿಸಿದ ಕಾಯಿಪಲ್ಲೆ ಹಾಗೂ ದಿನಸಿ ಎಷ್ಟೋ ಸಲ ದನಗಳ ಪಾಲಾಗಿವೆ. ಬೈಕ್‌ನಲ್ಲಿ ಇರಿಸಲಾಗಿದ್ದ ದಿನಸಿಯ ಬ್ಯಾಗ್‌ನ್ನು ಹರಿದು ಚೆಲ್ಲಾಪಿಲ್ಲಿ ಮಾಡುತ್ತಿವೆ. ನಗರಸಭೆ ಇನ್ನಾದರೂ ಎಚ್ಚೆತ್ತು ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗಬೇಕು. -ಚಂದ್ರಶೇಖರ ನಾಯಕ, ಶಿಕ್ಷಕ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಇರುವುದು ಗಮನಕ್ಕಿದೆ. ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಆಗುತ್ತಿರುವುದು ನಿಜ. ಮಾಲೀಕರು ಜಾನುವಾರುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಗೋಶಾಲೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು. ಮುಂಬರುವ ದಿನಗಳಲ್ಲಿ ಬಿಡಾಡಿ ದನಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. –ಉಷಾ ದಾಸರ, ಅಧ್ಯಕ್ಷರು, ಗದಗ-ಬೆಟಗೇರಿ ನಗರಸಭೆ

-ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next