Advertisement
ನಗರದಲ್ಲಿ ಇಷ್ಟು ದಿನಗಳ ಕಾಲ ರಸ್ತೆಗಳು ಸರಿಯಿಲ್ಲ. ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ರೋದನೆ ವ್ಯಕ್ತಪಡಿಸುತ್ತಿದ್ದ ಜನತೆಗೆ ಈಗ ರಸ್ತೆಗಳು ಸರಿಯಿದ್ದರೂ ವಾಹನ ಸವಾರರು ಸರಿಯಾದ ನಿಯಮ ಪಾಲಿಸುತ್ತಿಲ್ಲವೆಂದು ಅಸಮಾಧಾನಗೊಂಡಿದ್ದಾರೆ.
Related Articles
Advertisement
ಪಾದಚಾರಿಗಳಿಗೆ ಸಂಚಾರ ಕಷ್ಟ : ಇಲ್ಲಿನ ಡಿಸಿ ಕಚೇರಿಯಿಂದ ಮಳೆ ಮಲ್ಲೇಶ್ವರ ದೇವಸ್ಥಾನ ರಸ್ತೆವರೆಗೂ ಸುಸಜ್ಜಿತ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ ಎಲ್ಲಿಯೂ ಹಂಪ್ಸ್‌ಗಳನ್ನು ಹಾಕಿಲ್ಲ. ಇದರಿಂದ ವಾಹನ ಸವಾರರು ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳು ರಸ್ತೆ ಅಕ್ಕಪಕ್ಕ ಸಂಚರಿಸದಂತಹ ಸ್ಥಿತಿ ಎದುರಾಗಿವೆ. ಫುಟ್ಪಾತ್ ಮೇಲೆಯಾದರೂ ಸಂಚರಿಸೋಣವೆಂದರೆ ಹೆದ್ದಾರಿಯುದ್ದಕ್ಕೂ ಫುಟ್ಪಾತ್ ಎಡ-ಬಲ ಭಾಗದಲ್ಲಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಅಲ್ಲಿ ತಮ್ಮ ಅಂಗಡಿ ಸಾಮಗ್ರಿ ಇಟ್ಟಿರುತ್ತಾರೆ. ಚಹದಂಗಡಿ ಸೇರಿದಂತೆ ಹಣ್ಣಿನ ಅಂಗಡಿಗಳನ್ನು ಹಾಕಿದ್ದು ಈ ಬಗ್ಗೆ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ನಗರಸಭೆಯಂತೂ ತೆರಿಗೆಯಷ್ಟೆ, ತೆರವು ಲೆಕ್ಕಕ್ಕಿಲ್ಲ ಎನ್ನುವಂತೆ ವರ್ತಿಸುತ್ತಿದೆ. ದ್ವಿಚಕ್ರ ವಾಹನ ಸವಾರರು ಹೆದ್ದಾರಿ ಪಕ್ಕದಲ್ಲೇ ಯದ್ವಾ ತ್ವದಾ ವಾಹನ ಬಿಟ್ಟು ತಮ್ಮ ಕೆಲಸಕ್ಕೆ ತೆರಳುತ್ತಾರೆ. ಇದರಿಂದ ಲಾರಿ, ಬಸ್ ಸೇರಿದಂತೆ ಬೃಹದಾಕಾರದ ವಾಹನ ಬಂದರೆ ಪ್ರಯಾಣಕ್ಕೆ ಅವಕಾಶವೇ ಇಲ್ಲದಂತಾಗುತ್ತಿದೆ.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ : ನಗರದ ಹೆದ್ದಾರಿ ಅಕ್ಕಪಕ್ಕದಲ್ಲೇ ಶಾಲಾ-ಕಾಲೇಜುಗಳು ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ನಿತ್ಯ ನಗರಕ್ಕೆ ಆಗಮಿಸುತ್ತಾರೆ. ಈ ವೇಳೆ ಅವರು ಚರಂಡಿ ಮೇಲ್ಭಾಗದ ಫುಟ್ಪಾತ್‌ನಲ್ಲೇ ಸಂಚರಿಸಬೇಕಿದೆ. ರಸ್ತೆ ಅಕ್ಕ ಪಕ್ಕ ನಡೆದರೂ ವಾಹನಗಳ ಹಾವಳಿ ಮಿತಿ ಮೀರಿದೆ. ಪೊಲೀಸ್ ಇಲಾಖೆಯಂತೂ ಸಂಚಾರಿ ನಿಯಮ ಪಾಲನೆಗೆ ಖಡಕ್ ಸೂಚನೆ ನೀಡುತ್ತಿಲ್ಲ ಎನ್ನುವ ಆಪಾದನೆ ಜನರಿಂದಲೇ ಕೇಳಿ ಬಂದಿದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಚಾಲಕರಿಗೆ ದಂಡ ಹಾಕುವುದು ಕಡಿಮೆಯಾಗುತ್ತಿದೆ.
ಜವಾಹರ ರಸ್ತೆ ಒನ್‌ವೇ ಏನಾಯ್ತು?: ಈ ಹಿಂದೆ ಜವಾಹರ ರಸ್ತೆಯಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುತ್ತಿರುವುದರಿಂದ ಸ್ವತಃ ಪೊಲೀಸ್ ಇಲಾಖೆಯೇ ಒನ್‌ವೇ ನಿಯಮ ಜಾರಿಗೆ ತಂದಿತ್ತು. ಆದರೆ ಕೆಲವೇ ದಿನ ಆ ನಿಯಮ ಪಾಲಿಸಿ ಮತ್ತೆ ಬಂದ್ ಮಾಡಲಾಗಿದೆ. ಮುಖ್ಯ ಬಜಾರದಲ್ಲಿ ಬೆಳಗ್ಗೆ, ಮಧ್ಯಾಹ್ನದ ಸಮಯವೇ ಅಂಗಡಿ ವ್ಯಾಪಾರಿಗಳು ಲೋಡ್‌ಗಳನ್ನು ಇಳಿಸಿಕೊಳ್ಳುತ್ತಾರೆ. ಹಾಗಾಗಿ ಲಾರಿಗಳು ರಸ್ತೆ ಅಕ್ಕಪಕ್ಕ ನಿಂತು ಸಣ್ಣ ಪುಟ್ಟ ವಾಹನಗಳಿಗೆ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತವೆ. ಇನ್ನೂ ಆಟೋಗಳಂತೂ ಕೇಳುವವರೇ ಇಲ್ಲದಂತಾಗಿದೆ. ಪೊಲೀಸ್ ಇಲಾಖೆ ಇದಕ್ಕೆಲ್ಲ ಬ್ರೇಕ್ ಹಾಕಬೇಕಿದೆ.
•ದತ್ತು ಕಮ್ಮಾರ