ಹುಬ್ಬಳ್ಳಿ: ಅವಳಿ ನಗರದ ಸಮಸ್ಯೆಗಳ ಕುರಿತು ಹಾಗೂ ಸಂಚಾರ ಸುಧಾರಣೆ, ಅಭಿವೃದ್ಧಿಗೆ ಸಂಬಂಧಿಸಿ ಪೋಲಿಸ್ ಆಯುಕ್ತರು ಶನಿವಾರ ತಮ್ಮ ಕಚೇರಿಯಲ್ಲಿ ಎರಡನೇ ಫೋನ್-ಇನ್ ಕಾರ್ಯಕ್ರಮ ನಡೆಸಿದರು. ಈ ವೇಳೆ ಒಂದೂವರೆ ಗಂಟೆಗಳ ಕಾಲ ಸುಮಾರು 50ಕ್ಕೂ ಹೆಚ್ಚಿನ ಕರೆಗಳಲ್ಲಿ ಬಹುತೇಕವು ಟ್ರಾಫಿಕ್ ಜಾಮ್ ಸಮಸ್ಯೆ ಬಗ್ಗೆಯೇ ಇದ್ದವು.
ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ ಅವರು, ಇಂಗಳೇಶ್ವರ ನಗರದಲ್ಲಿ ಕುಡುಕರಿಂದ ತುಂಬಾ ಸಮಸ್ಯೆ ಎದುರಿಸುತ್ತಿದ್ದೇವೆ. ಅವರಿಂದ ಪ್ರತಿದಿನ ಕಿರಿಕಿರಿಯಾಗುತ್ತಿದ್ದು, ಗಸ್ತು ಹೆಚ್ಚಿಸಬೇಕೆಂದು ಮನವಿ ಮಾಡಿದರು. ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ನ್ನು ಭೇಟಿ ಮಾಡಿ ಅಲ್ಲಿನ ಸಮಸ್ಯೆ ತಿಳಿಸುವಂತೆ ಹೇಳಿದರು.
ಉಣಕಲ್ಲ ನಿವಾಸಿ ಸೋಮಲಿಂಗ ಅವರು, ಬಿಆರ್‌ಟಿಎಸ್ ಮೇಲ್ಸೇತುವೆ ಕಾರಣದಿಂದ ತುಂಬಾ ಅನಾನುಕೂಲತೆ ಆಗುತ್ತಿದೆ. ಭೈರಿದೇವರಕೊಪ್ಪದಲ್ಲಿ ಪ್ರತಿ ಶನಿವಾರ ಹೆಚ್ಚಿನ ಜನ ಸಂತೆಗೆ ಬರುತ್ತಿದ್ದು, ಈ ವೇಳೆ ಮಿಶ್ರ ವಾಹನಗಳ ಸಂಚಾರ ದಟ್ಟಣೆ ಹಾಗೂ ಬಿಆರ್‌ಟಿಎಸ್ ಬಸ್‌ಗಳು ವೇಗವಾಗಿ ಸಂಚರಿಸುವುದರಿಂದ ತುಂಬಾ ಸಮಸ್ಯೆ ಆಗುತ್ತಿದೆ. ಇದನ್ನು ನಿಯಂತ್ರಿಸಲು ಹೆಚ್ಚುವರಿ ಸಂಚಾರ ಪೇದೆ ನಿಯೋಜಿಸಬೇಕೆಂದು ಕೋರಿದರು.
ಕೇಶ್ವಾಪುರ ನಿವಾಸಿ ವಿನೋದ ಪಾಟಕರ ಅವರು, ಪೂರ್ವ ಸಂಚಾರ ಠಾಣೆ ವ್ಯಾಪ್ತಿಯ ಮಧುರಾ ಕಾಲೋನಿ ಸಮೀಪ ಸಂಚಾರ ದಟ್ಟಣೆ ನಿಯಂತ್ರಿಸಬೇಕೆಂದು ಮನವಿ ಮಾಡಿದರು. ಆಯುಕ್ತರು ಸ್ಪಂದಿಸಿ, ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಪೊಲೀಸರು ಎಲ್ಲ ಬಗೆಯ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಭರವಸೆ ನೀಡಿದರು.
ದುರ್ಗದ ಬಯಲು ಪ್ರದೇಶದಲ್ಲಿ ಅಕ್ರಮವಾಗಿ ಹಲವು ಅಂಗಡಿಗಳು ಸ್ಥಾಪನೆಯಾಗಿವೆ. ಅವನ್ನು ಆದಷ್ಟು ಬೇಗ ತೆರವುಗೊಳಿಸಬೇಕೆಂದು ನಗರದ ವ್ಯಕ್ತಿಯೊಬ್ಬರು ಕೋರಿದರು. ಆಯುಕ್ತರು ಸಂಬಂಧಪಟ್ಟ ಅಧಿಕಾರಿಯೊಂದಿಗೆ ಸಂಪರ್ಕಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.