Advertisement

ಮದ್ಯಪ್ರಿಯ ಚಾಲಕರಿಗೆ ಟ್ರಾಫಿಕ್‌ ಪೊಲೀಸ್‌ ಶಾಕ್‌

02:27 PM Jan 02, 2018 | Team Udayavani |

ಮಹಾನಗರ: ಹೊಸ ವರ್ಷ ಬಂತೆಂದರೆ, ಮೋಜು, ಮಸ್ತಿ, ನೃತ್ಯ ಸಾಮಾನ್ಯ. ಅದೇ ರೀತಿ ಮಂಗಳೂರಿನ ಅನೇಕ ಕಡೆಗಳಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಅದರಂತೆಯೇ ಈ ಬಾರಿ ಮದ್ಯಪಾನ ಸೇವಿಸಿ ವಾಹನ ಚಲಾವಣೆ ಮಾಡುತ್ತಿದ್ದ ಮಂದಿಗೆ ಮಂಗಳೂರು ಸಂಚಾರಿ ಪೊಲೀ ಸರು ನಡುರಾತ್ರಿ ಶಾಕ್‌ ನೀಡಿದ್ದಾರೆ.  

Advertisement

ಒಂದೂವರೆ ಗಂಟೆ:  85 ಕೇಸ್‌!
ರವಿವಾರ ತಡರಾತ್ರಿ 12 ಗಂಟೆಯಿಂದ ಸಂಚಾರಿ ಪೊಲೀಸರು ನಗರದಲ್ಲಿನ ನಾನಾ ಕಡೆಗಳಲ್ಲಿ ನಾಕಾಬಂದಿ ಹಾಕಿದ್ದರು. 
ಕೂಳೂರು, ಕೊಟ್ಟಾರ ಚೌಕಿ, ಲಾಲ್‌ಬಾಗ್‌, ನಂತೂರು, ಕೆ.ಪಿ.ಟಿ., ಸ್ಟೇಟ್‌ಬ್ಯಾಂಕ್‌, ಪಂಪ್‌ವೆಲ್‌, ತೊಕ್ಕೊಟ್ಟು ಸಹಿತ ವಿವಿಧೆಡೆ ರಾತ್ರಿ 12 ಗಂಟೆಯಿಂದ ಒಂದೂವರೆ ಗಂಟೆಯವರೆಗೆ ಕಾರು, ಬೈಕ್‌, ಜೀಪು ಸಹಿತ ಎಲ್ಲ  ವಾಹನಗಳನ್ನು ತಪಾಸಣೆ ನಡೆಸಿ, ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುತ್ತಿದ್ದ 85 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಸುಮಾರು 50 ಸಾವಿರ ರೂ. ಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ. ಇದರಲ್ಲಿ ಕೆಲವು ಮಂದಿ ದಂಡ ಕಟ್ಟಲು ನಿರಾಕರಿಸಿದಾಗ ವಾಹನಗಳನ್ನು ಜಪ್ತಿ ಮಾಡಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿತ್ತು.

ಪ್ರಕರಣ ಏರಿಕೆ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಹೊಸ ವರ್ಷದ ಹಿನ್ನೆಲೆಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿ ಸಿದ ಸಂಖ್ಯೆ ಹೆಚ್ಚಿದೆ. ಕಳೆದ ವರ್ಷ ಸುಮಾರು 55 ಪ್ರಕರಣಗಳನ್ನು, ಈ ಬಾರಿ ಕೇವಲ ಒಂದೂವರೆ ಗಂಟೆಯಲ್ಲಿಯೇ 85 ಪ್ರಕರಣ ದಾಖಲಾಗಿದೆ. ಇವಿಷ್ಟೇ ಅಲ್ಲದೆ, ಇತ್ತೀಚೆಗೆ ಹೊಸ ವರ್ಷದ ಹಿನ್ನೆಲೆಯಲ್ಲಿ ಕುಡಿತದ ಅಮಲಿನಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ವಾಹನ ತಪಾಸಣೆ ನಡೆಸುತ್ತಿದ್ದ ಸಂಚಾರ ಪೂರ್ವ ಪೊಲೀಸ್‌ ಠಾಣೆಯ ಸಿಬಂದಿ ಪುಟ್ಟರಾಮ ಮೇಲೆ ಕಾಂಗ್ರೆಸ್‌ ನಾಯಕರೊಬ್ಬರು ಹಲ್ಲೆ ನಡೆಸಿದ್ದು, ಕುಡಿದು ವಾಹನ ಚಲಾಯಿ ಸಿದ ಬಗ್ಗೆ ನೀಡಿದ್ದ ನೋಟಿಸನ್ನು ಸ್ವೀಕರಿಸದೆ ಕಾರು ಚಲಾಯಿಸಿದ್ದರು. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರ ಕೆಲಸ ಶ್ಲಾಘನೀಯ
ಹೊಸ ವರ್ಷದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಮಂಗಳೂರು ನಗರದ ತುಂಬ ಕಣ್ಣಿಟ್ಟಿದ್ದರು. 1,100 ಪೊಲೀಸರನ್ನು ನಿಯೋಜಿಸಲಾಗಿತ್ತು. 650ಕ್ಕೂ ಅಧಿಕ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬಂದಿ, 120 ಗೃಹರಕ್ಷಕ ದಳದ ಸಿಬಂದಿ, 9 ಕೆ.ಎಸ್‌.ಆರ್‌.ಪಿ. ತುಕಡಿ ಮತ್ತು 15 ಸಿ.ಎ.ಆರ್‌. ತುಕಡಿಗಳ ಸಹಿತ ಒಟ್ಟು  11ಒಒ ಪೊಲೀಸರನ್ನು ಬಂದೋಬಸ್ತು ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಇವಿಷ್ಟೇ ಅಲ್ಲದೆ ಬೀಚ್‌ಗಳಿಗೆ ರಾತ್ರಿ ತೆರಳಲು ಅನುಮತಿ ನೀಡಿರಲಿಲ್ಲ. ಅನುಮತಿ ಪಡೆದು ಆಯೋಜನೆ ಮಾಡಿದ ಕಾರ್ಯಕ್ರಮಗಳನ್ನು ರಾತ್ರಿ 12 ಗಂಟೆಯ ಒಳಗಾಗಿ ಮುಗಿಸಬೇಕು ಎಂಬ ಶರತ್ತು ಹಾಕಲಾಗಿತ್ತು. ಅಲ್ಲದೆ, ಅಶ್ಲೀಲ, ಅರೆಬೆತ್ತಲೆ ನೃತ್ಯ, ಜೂಜಾಟವನ್ನು ನಿಷೇಧಿಸಲಾಗಿತ್ತು.

ಪ್ರತಿ ದಿನ ತಪಾಸಣೆ
ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದವರ ವಿರುದ್ಧ ಪೊಲೀಸರು ಈ ಬಾರಿ ಹೆಚ್ಚು ಪ್ರಕರಣ ದಾಖಲಿಸಿದ್ದಾರೆ. ನಗರದ ಎಲ್ಲ  ಕಡೆಗಳಲ್ಲಿಯೂ ಹೆಚ್ಚಿನ ಪೊಲೀಸ್‌ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುವವರ ವಿರುದ್ಧ ಪ್ರತಿದಿನವೂ ತಪಾಸಣೆ ನಡೆಸುತ್ತೇವೆ.
ಹನುಮಂತರಾಯ, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ

Advertisement

ಪ್ರಕರಣ ಹೆಚ್ಚುತ್ತಿದೆ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಹೊಸ ವರ್ಷದ ಹಿನ್ನೆಲೆಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದವರ ವಿರುದ್ಧ ದಾಖಲಾದ ಪ್ರಕರಣ ಹೆಚ್ಚಿದೆ. ಈ ಬಾರಿ 85 ಪ್ರಕರಣಗಳು ದಾಖಲಾಗಿವೆ. ಕಳೆದ ಬಾರಿ 55 ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ತಿಳಿವಳಿಕೆ ನೀಡುತ್ತಿದ್ದರೂ ಪ್ರಕರಣ ಜಾಸ್ತಿಯಾಗುತ್ತಿದೆ. 
ಮಂಜುನಾಥ ಶೆಟ್ಟಿ, ಎಸಿಪಿ ಟ್ರಾಫಿಕ್‌, ಮಂಗಳೂರು

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next