ಬೆಂಗಳೂರು: ಇತ್ತೀಚೆಗೆ ಕೆ.ಆರ್.ಸರ್ಕಲ್ ಬಳಿ ಕಾರು ನೀರಿನಲ್ಲಿ ಮುಳುಗಿ ಮಹಿಳಾ ಟೆಕ್ಕಿ ಮೃತಪಟ್ಟ ಪ್ರಕರಣದಿಂದ ಎಚ್ಚೆತ್ತ ಸಂಚಾರ ಪೊಲೀಸರು ಬಿಬಿಎಂಪಿ ಅಥವಾ ಸ್ಥಳೀಯ ಸಂಸ್ಥೆಗಳಿಗಾಗಿ ಕಾಯದೆ, ತುರ್ತಾಗಿ ಸ್ಪಂದಿಸಲು ತಾವೇ ಅಗತ್ಯ ಸಲಕರಣೆಗಳನ್ನು ಖರೀದಿಸಿದ್ದಾರೆ.
ಈಗಾಗಲೇ ನಗರದಲ್ಲಿ ಮಳೆಗಾಲ ಆರಂಭವಾಗಿದ್ದು, ಕೆಲವಡೆ ಅದರಿಂದ ಹಾನಿ ಉಂಟಾಗಿದೆ. ರಸ್ತೆಯಲ್ಲಿ ನೀರು ಹೊಳೆಯಂತೆ ಹರಿದಿದೆ. ಹಲವೆಡೆ ಮರಗಳು ಹಾಗೂ ಮರದ ಟೊಂಗೆಗಳು ಬಿದ್ದಿವೆ. ಈ ಮಧ್ಯೆ ಜೂನ್ನಿಂದ ಮತ್ತೆ ಮಳೆ ಅಬ್ಬರ ಹೆಚ್ಚಾಗಲಿದ್ದು, ಮತ್ತೂಮ್ಮೆ ನಗರ ಮಳೆ ಮುಳುಗುವ ಭೀತಿಯಲ್ಲಿದೆ. ಅದರಿಂದ ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಉಂಟಾಗಲಿದೆ. ಹಾಗೆಯೇ ಹಸಿ ಮರದ ಕೊಂಬೆಗಳು ಬೀಳುವ ಸಾಧ್ಯತೆಯಿದೆ. ಅದರಿಂದ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಹೀಗಾಗಿ, ದಟ್ಟಣೆ ನಿಯಂತ್ರಿಸಲು ಹಾಗೂ ಮಳೆ ಹಾನಿಗೆ ಸ್ಪಂದಿಸಲು ಪೊಲೀಸರು ಸಲಕರಣೆಗಳನ್ನು ಬಳಕೆ ಮಾಡಲು ಮುಂದಾಗಿದ್ದಾರೆ.
ಸಂಚಾರ ಪೊಲೀಸ್ ಠಾಣಾಧಿಕಾರಿಗಳ ಜೀಪಿನಲ್ಲಿ ಹಾರೆ, ಸಲಾಕೆ, ಗುದ್ದಲಿ, ಮಚ್ಚುಗಳು, ಮೋಟಾರ್, ಪೈಪ್ಗ್ಳು, ತಂತಿಗಳು, ಬಕೆಟ್, ವುಡ್ ಕಟರ್, ಗರಗಸ, ಪಿಕಾಸಿ ಸೇರಿ ಅಗತ್ಯ ಸಲಕರಣೆಗಳನ್ನು ಇಟ್ಟುಕೊಂಡಿದ್ದಾರೆ. ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಯಾವುದಾದರೂ ಮಳೆ ಹಾನಿ ಸಂಬಂಧಿಸಿದಾಗ ಕೂಡಲೇ ಸಂಚಾರ ಪೊಲೀಸರು ತುರ್ತು ಕಾರ್ಯಾಚರಣೆಗೆ ಇಳಿಯುತ್ತಾರೆ. ಮಳೆ ಹಾನಿಗೆ ತ್ವರಿತವಾಗಿ ಸ್ಪಂದಿಸಲು ಸಲಕರಣೆ ಇಟ್ಟುಕೊಂಡು ಓಡಾಡುತ್ತಿದ್ದೇವೆ. ಅದರಿಂದ ದಟ್ಟಣೆ ತಡೆಯುವ ಉದ್ದೇಶ ನಮ್ಮದು. ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಸಾಕಷ್ಟು ಕಾರ್ಯಗಳು ನಮ್ಮ ಕಡೆಯಿಂದ ನಡೆದರೆ, ವೇಗವಾಗಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದು ಎಂದು ಸಂಚಾರ ವಿಭಾಗ ಪೊಲೀಸರು ಮಾಹಿತಿ ನೀಡಿದರು.