Advertisement

ಸಂಚಾರ ಪೊಲೀಸರ ಮೇಲೆ ಹಲ್ಲೆ: ಇಬ್ಬರ ಸೆರೆ

12:44 AM May 06, 2019 | Lakshmi GovindaRaj |

ಬೆಂಗಳೂರು: ಡ್ರಿಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆ ವೇಳೆ ಇಬ್ಬರು ಸಂಚಾರ ಪೊಲೀಸ್‌ ಸಿಬ್ಬಂದಿ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಇಬ್ಬರು ಯುವಕರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

Advertisement

ಪಶ್ಚಿಮ ಬಂಗಾಳ ಮೂಲದ ಆದಿತ್ಯಾ ಶ್ರುತ್ರಿಯ(24) ಮತ್ತು ಹರಿಯಾಣ ಮೂಲದ ರಾಹುಲ್‌ ತ್ರಿಪಾಠಿ(22) ಬಂಧಿತರು. ಆರೋಪಿಗಳ ಹಲ್ಲೆಯಿಂದ ಎಚ್‌ಎಸ್‌ಆರ್‌ ಲೇಔಟ್‌ ಸಂಚಾರ ಠಾಣೆಯ ಸಿಬ್ಬಂದಿ ಅಶೋಕ್‌ ಮತ್ತು ನಂಜೇಗೌಡ ಎಂಬುವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ಖಾಸಗಿ ಕಂಪನಿಯಲ್ಲಿ ಇಂಟರ್ನರ್‌ಶಿಪ್‌ ಪಡೆಯಲು ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಇಬ್ಬರು ಆರೋಪಿಗಳು ಮಾರತಹಳ್ಳಿಯ ಪಿಜಿಯಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ಹಲ್ಲೆಗೊಳಗಾದ ಸಿಬ್ಬಂದಿ ಮೇ 3ರಂದು ತಡರಾತ್ರಿ ಒಂದು ಗಂಟೆ ಸುಮಾರಿಗೆ ಎಎಸ್‌ಐ ನಾರಾಯಣಪ್ಪ ಅವರ ಜತೆ ಠಾಣೆ ಮುಂಭಾಗದ ಸರ್ವೀಸ್‌ ರಸ್ತೆಯಲ್ಲಿ ಡ್ರಿಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆ ನಡೆಸುತ್ತಿದ್ದರು.

ಇದೇ ವೇಳೆ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ನಲ್ಲಿ ವೇಗವಾಗಿ ಬರುತ್ತಿದ್ದ ಆರೋಪಿಗಳನ್ನು ತಡೆದ ಸಂಚಾರ ಪೊಲೀಸರು, ಚಾಲನಾ ಪರವಾನಿಗೆ ಹಾಗೂ ಇತರೆ ದಾಖಲೆಗಳನ್ನು ಕೇಳಿದ್ದಾರೆ. ಅಲ್ಲದೆ, ಮದ್ಯ ಸೇವಿಸಿರುವ ಬಗ್ಗೆ ಪರೀಕ್ಷಿಸಿದಾಗ ಇಬ್ಬರು ಕಂಠಪೂರ್ತಿ ಮದ್ಯ ಸೇವಿಸಿರುವುದು ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಬುಲೆಟ್‌ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಎಎಸ್‌ಐ ಹಾಗೂ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹೆಲ್ಮೆಟ್‌ನಿಂದ ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಜತೆಗೆ ಅಲ್ಲೇ ಇದ್ದ ಮರದ ಕೋಲಿನಿಂದಲೂ ಹೊಡೆದಿದ್ದಾರೆ.

ಕೂಡಲೇ ಪೊಲೀಸರ ನೆರವಿಗೆ ಧಾವಿಸಿದ ಸ್ಥಳೀಯರು ಆರೋಪಿಗಳನ್ನು ಹಿಡಿದು ಥಳಿಸಿ, ಠಾಣೆಗೆ ಕರೆದೊಯ್ದಿದ್ದಾರೆ. ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಠಾಣೆ ಪಿಠೋಪಕರಣಗಳು ಧ್ವಂಸ: ಠಾಣೆಯಲ್ಲಿ ಪೂರ್ವಪರ ವಿಚಾರ ಮಾಡುವಾಗ ಕುಪಿತಗೊಂಡು ಆರೋಪಿಗಳು, ಠಾಣೆಯಲ್ಲಿದ್ದ ಪಿಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಕಂಪ್ಯೂಟರ್‌ಗೆ ಅಳವಡಿಸಿದ್ದ ವೈಯರ್‌ಗಳನ್ನು ಕಿತ್ತುಹಾಕಿ ಅನುಚಿತ ವರ್ತನೆ ತೋರಿದ್ದಾರೆ. ಇದನ್ನು ಪ್ರಶ್ನಿಸಿದ ಠಾಣಾ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ಸಂಚಾರ ಪೊಲೀಸ್‌ ಸಿಬ್ಬಂದಿ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಸಾರ್ವಜನಿಕ ಆಸ್ತಿ ನಾಶ, ಸರ್ಕಾರಿ ಕೆಲಸಕ್ಕೆ ಅಡ್ಡಿ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next