ಭಾಲ್ಕಿ: ಪಟ್ಟಣದ ಹಲವು ರಸ್ತೆಗಳಲ್ಲಿ ಸೋಮವಾರ ಪೊಲೀಸ್ ಸಿಬ್ಬಂದಿ ವಾಹನ ಸವಾರರಿಗೆ ಜಾಗೃತಿ ಮೂಡಿಸುವುದರೊಂದಿಗೆ ಅನಧಿಕೃತ ವಾಹನವಾಗಿ ಚಲಾಯಿಸುವವರಿಂದ ದಂಡ ವಸೂಲಿ ಮಾಡಿದರು.
ದಂಡ ವಸೂಲಿ ಜಾಗೃತಿ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಠಾಣೆಯ ಸಿಪಿಐ ಬಿ.ಅಮರೇಶ ಮಾತನಾಡಿ, ಮೋಟಾರು ವಾಹನ ಕಾಯ್ದೆ ತಿದ್ದುಪಡಿ 2019ರಂತೆ ಸಂಚಾರ ನಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರಿಗೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಕಾರಣ ವಾಹನ ಚಾಲಕರು ಸಂಚಾರಿ ನಿಯಮ ಪಾಲಿಸಿ, ಹಣ ಉಳಿಸಿ ಮತ್ತು ಜೀವ ರಕ್ಷಿಸಿ ಎಂದು ಹೇಳಿದರು.
ಪಿಎಸ್‌ಐ ಎಸ್.ಎಂ.ಮೇಟಿ ಮಾತನಾಡಿ, ಸಂಚಾರಿ ನಿಯಮ ಉಲ್ಲಂಘನೆಯಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದರೆ ಮೊದಲು 100 ದಂಡವಿತ್ತು, ಈಗ 1000 ರೂ. ಮಾಡಲಾಗಿದೆ. ಹಾಗೆಯೇ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಿದರೆ ಮೊದಲ ಅಪರಾಧಕ್ಕೆ 5000 ರೂ. ಮತ್ತು ಎರಡನೇ ಅಪರಾಧಕ್ಕೆ 10,000 ರೂ. ದಂಡ ವಸೂಲಿ ಮಾಡಲಾಗುವುದು. ಅದರಂತೆ ಡ್ರೈವಿಂಗ್ ಲೈಸನ್ಸ್ ಇಲ್ಲದೇ ನಡೆಸಿದರೆ 2000 ಮತ್ತು 4000 ರೂ., ದ್ವಿಚಕ್ರ ವಾಹನದಲ್ಲಿ ಮೂರುಜನ ಪ್ರಯಾಣಿಸಿದರೆ 1000 ರೂ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ 10 ಸಾವಿರ ರೂ., ನಿಷೇಧಿತ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ 1000 ರೂ., ಸೀಟ್ ಬೆಲ್r ಧರಿಸದೇ ವಾಹನ ಚಾಲನೆ ಮಾಡಿದರೆ 1000 ರೂ., ಅತಿವೇಗದ ಚಾಲನೆಗೆ 1000 ಮತ್ತು 2000 ರೂ., ಸಿಗ್ನಲ್ ಜಂಪ್ ಮಾಡಿದರೆ 1000ರೂ., ಅಪ್ರಾಪ್ತ ವಾಹನ ಚಾಲನೆಗೆ 25 ಸಾವಿರ ರೂ. ದಂಡ ಹಾಗು ಪೋಷಕರಿಗೆ 3 ವರ್ಷ ಜೈಲು ಮತ್ತು 12 ತಿಂಗಳು ಆರ್‌ಸಿ ರದ್ದು ಮಾಡಲಾಗುವುದು. ಸೈಡ್ ಮಿರರ್ ಇಲ್ಲದ ವಾಹನ ಚಾಲನೆಗೆ 500 ರೂ., ತುರ್ತು ವಾಹನಗಳಿಗೆ ದಾರಿಬಿಡದಿದ್ದರೆ 10 ಸಾವಿರ ರೂ., ಅಜಾಗರೂಕತೆಯಿಂದ ವಾಹನ ಚಲಾಯಿಸಿದರೆ 5000 ರೂ. ದಂಡ ವಸೂಲಿ ಮಾಡಲಾಗುವುದು. ಹೀಗಾಗಿ ಎಲ್ಲರೂ ಈ ಎಲ್ಲಾ ಕಾನೂನುಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಲಹೆ ನೀಡಿದರು.