Advertisement
ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮತದಾನದ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿತ್ತು. ಮತ ಹಾಕಲು ಬೆಂಗಳೂರಿನ ಲಕ್ಷಾಂತರ ಉದ್ಯೋಗಿಗಳು ಖಾಸಗಿ ವಾಹನಗಳಲ್ಲಿ ತಮ್ಮ ತಮ್ಮ ಊರಿಗಳಿಗೆ ಶುಕ್ರವಾರ ಮುಂಜಾನೆಯೇ ತೆರಳಿದರು. ಶುಕ್ರವಾರ ಮತದಾನಕ್ಕಾಗಿ ರಜೆಯಿದ್ದರೆ, ಏ.27ರಂದು 4ನೇ ಶನಿವಾರವಾಗಿದ್ದು, ಅಂದೂ ಸರ್ಕಾರಿ ರಜೆ ಇದೆ. ಇನ್ನು ಭಾನುವಾರ ಎಂದಿನಂತೆ ರಜೆ ಇದ್ದೇ ಇರುತ್ತದೆ. ಒಟ್ಟಾರೆ 3 ದಿನ ಸಾಲು-ಸಾಲು ರಜೆಯಿರುವ ಹಿನ್ನೆಲೆಯಲ್ಲಿ ಅಂದಾಜು ಬೆಂಗಳೂರಿನ ಶೇ.25ರಷ್ಟು ಮಂದಿ ಊರುಗಳಿಗೆ ತೆರಳಿದ್ದಾರೆ ಇನ್ನು ಬೆಂಗಳೂರಿನಲ್ಲೇ ನೆಲೆಸಿರುವ ಬಹುತೇಕ ಜನ ತಾವು ಮೊದಲೇ ಪ್ಲ್ರಾನ್ ಮಾಡಿದ್ದಂತೆ ಬೆಳಗ್ಗೆಯೇ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಅಲ್ಲಿಂದ ನೇರವಾಗಿ ಊರುಗಳತ್ತ ಸಾಗಿದರು. ಈ ಪೈಕಿ ಕೆಲವರು ಮತ ಚಲಾಯಿಸದೇ ಬೇರೆ ಜಿಲ್ಲೆಗಳಲ್ಲಿರುವ ತಮ್ಮ ಮನೆಗಳಿಗೆ ಕಾರು, ಬೈಕ್‌ಗಳಲ್ಲಿ ಸಾಗುತ್ತಿರುವುದೂ ಕಂಡು ಬಂತು.
Related Articles
Advertisement
ಅಲ್ಲಲ್ಲಿ ಟ್ರಾಫಿಕ್ ನಿರ್ವಹಣೆ: ಸಂಚಾರ ದಟ್ಟಣೆ ನಿರ್ವಹಿಸುವ ಬೆಂಗಳೂರಿನ ಸಂಚಾರ ವಿಭಾಗದ ಬಹುತೇಕ ಪೊಲೀಸರು ಚುನಾವಣಾ ಕರ್ತವ್ಯಕ್ಕೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿರ್ವಹಿಸಲು ಸಿಬ್ಬಂದಿ ಕೊರತೆ ಎದುರಾಯಿತು. ಇಷ್ಟಾದರೂ, ಉತ್ತರ ಸಂಚಾರ ವಿಭಾಗದ ಎಸಿಪಿ ನೇತೃತ್ವದ ಪೊಲೀಸರ ತಂಡವು ಪೀಣ್ಯ ಮೇಲ್ಸೇತುವೆ, ಜಾಲಹಳ್ಳಿ, ಯಶವಂತಪುರ, ನೆಲಮಂಗಲದವರೆಗೂ ಉಂಟಾಗಿದ್ದ ಅತೀಯಾದ ಸಂಚಾರ ದಟ್ಟಣೆ ನಿರ್ವಹಿಸಿ, ಸುಗಮ ಸಂಚಾರಕ್ಕೆ ಎಡೆಮಾಡಿಕೊಟ್ಟರು. ಮೈಸೂರು, ತುಮಕೂರು ರಸ್ತೆಗಳಲ್ಲಿ ಟ್ರಾμಕ್ ಜಾಮ್ ಆಗುವ ಬಗ್ಗೆ ಮೊದಲೇ ಮುನ್ಸೂಚನೆ ಸಿಕ್ಕಿದ್ದರಿಂದ ಲಕ್ಷಾಂತರ ವಾಹನಗಳು ಸಾಗಲು ಸೂಕ್ತ ಕ್ರಮ ಕೈಗೊಂಡಿದ್ದೆವು ಎಂದು ಉತ್ತರ ಸಂಚಾರ ವಿಭಾಗದ ಎಸಿಪಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಎರಡು ವಾಹನಗಳು ಡಿಕ್ಕಿ:
ಪೀಣ್ಯ ಮೇಲ್ಸೇತುವೆ ಬಳಿ ಶುಕ್ರವಾರ ಬೆಳಗ್ಗೆ 2 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿತ್ತು. ಎರಡೂ ವಾಹನ ಚಾಲಕರೂ ರಸ್ತೆ ಮಧ್ಯೆಯೇ ವಾಹನಗಳನ್ನು ನಿಲುಗಡೆ ಮಾಡಿ ಕೆಲ ಕಾಲ ವಾಗ್ವಾದ ನಡೆಸಿದರು. ನಂತರ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ಸುಖಾಂತ್ಯಗೊಳಿಸಿ ಸುಗಮ ಸಂಚಾರಕ್ಕೆ ಎಡೆಮಾಡಿಕೊಟ್ಟರು. ತುಮಕೂರು ರಸ್ತೆಯಲ್ಲಿ ಬೆಳಗ್ಗೆ ಟ್ರಾಫಿಕ್ ಜಾಮ್ ಮತ್ತಷ್ಟು ಹೆಚ್ಚಲು ಈ ಪ್ರಕರಣವೂ ಕಾರಣವಾಯಿತು.
ಬಿಕೋ ಎನುತ್ತಿದ್ದ ರಸ್ತೆಗಳು : ಬೆಂಗಳೂರಿನಲ್ಲಿ ಬಹುತೇಕ ಅಂಗಡಿ- ಮುಂಗಟ್ಟುಗಳು ಶುಕ್ರವಾರ ಮುಚ್ಚಿದ್ದವು. ಮತದಾನದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಅಂಗಡಿ ತೆರೆದಿರಲಿಲ್ಲ. ಇನ್ನೀತರ ವಾಣಿಜ್ಯ ಚಟುವಟಿಕೆಗಳೂ ಸ್ತಬ್ಧವಾಗಿತ್ತು. ಪರಿಣಾಮ ಬೆಂಗಳೂರು ನಗರದೊಳಗಿನ ರಸ್ತೆಗಳೆಲ್ಲವೂ ಖಾಲಿ-ಖಾಲಿಯಾಗಿ ಬಿಕೋ ಎನ್ನುತ್ತಿದ್ದವು. ಸಾಮಾನ್ಯ ದಿನಕ್ಕಿಂತ ಕಡಿಮೆ ವಾಹನ ಸಂಚಾರವಿತ್ತು. ಕೆ.ಆರ್.ಮಾರುಕಟ್ಟೆ, ಯಶ ವಂತಪುರ, ಮಡಿವಾಳ ಮಾರುಕಟ್ಟೆಗಳಲ್ಲಿ ಜನರ ಓಡಾಟ ವಿರಳವಾಗಿತ್ತು. ಆದರೆ, ಮೆಜೆಸ್ಟಿಕ್, ಸೆಟಲೈಟ್, ಶಾಂತಿನಗರದಿಂದ ಬೇರೆ ಜಿಲ್ಲೆಗಳಿಗೆ ಸಾಗುವ ಸರ್ಕಾರಿ ಬಸ್ಸುಗಳೆಲ್ಲಾ ತುಂಬಿ ತುಳುಕುತ್ತಿದ್ದವು. ಖಾಸಗಿ ಬಸ್‌ಗಳಲ್ಲೂ ಹೆಚ್ಚಿನ ರಶ್ ಇರುವುದು ಕಂಡು ಬಂತು.