ಚಿಕ್ಕಮಗಳೂರು: ರಾಜ್ಯದ ಎತ್ತರದ ಗಿರಿಶ್ರೇಣಿ ಎಂಬ ಖ್ಯಾತಿ ಪಡೆದಿರುವ ಮುಳ್ಳಯ್ಯಗಿರಿ ಗಿರಿಶ್ರೇಣಿಗೆ ಸಾಗುವ ಮಾರ್ಗದ ಅಲ್ಲಲ್ಲಿ ಪ್ರವಾಸಿಗರು ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವುದರಿಂದ ಪ್ರವಾಸಿಗರು ಗಿರಿಶ್ರೇಣಿಗೆ ಸಾಗಲು ಹರಸಾಹಸ ಪಡುವಂತಾಗಿದೆ.
ಮುಳ್ಳಯ್ಯನಗಿರಿ ಶ್ರೇಣಿಗೆ ಸಾಗುವ ಮಾರ್ಗದಲ್ಲಿ ಅತ್ಯಂತ ಕಡಿದಾದ ತಿರುವುಗಳಿವೆ. ಕೆಲವು ಕಡೆಗಳಲ್ಲಿ ರಸ್ತೆಯು ಭಾರೀ ಕಿರಿದಾಗಿದೆ. ದೊಡ್ಡ ಪ್ರಪಾತಗಳಿದ್ದು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ದುರಂತ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಮುಳ್ಳಯ್ಯಗಿರಿ ಶ್ರೇಣಿ ವೀಕ್ಷಣೆಗೆ ರಾಜ್ಯ ಸೇರಿದಂತೆ ದೇಶದ ನಾನಾ ಭಾಗಗಳಿಂದ ಸಾವಿರಾರು ಪ್ರವಾಸಿಗರು ವಾರಾಂತ್ಯ ಸೇರಿದಂತೆ ರಜೆ ದಿನಗಳಲ್ಲಿ ಇಲ್ಲಿಯ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು ಬರುತ್ತಾರೆ. ಆದರೆ ಇಲ್ಲಿಗೆ ಬರುವ ಪ್ರವಾಸಿ ವಾಹನಗಳನ್ನು ತಮ್ಮ ಮನಬಂದಂತೆ ಕಿರಿದಾದ ರಸ್ತೆ ಮಾರ್ಗದ ಬೀದಿಗಳಲ್ಲಿ ನಿಲ್ಲಿಸುವುದರಿಂದ ಗಿರಿಶ್ರೇಣಿಗೆ ತೆರಳುವ ಪ್ರವಾಸಿಗರಿಗೆ ಅನಾನುಕೂಲ ಉಂಟಾಗುತ್ತಿದೆ.
ಈ ಹಿಂದೆ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಸಾಗುವ ದಾರಿಯುದ್ದಕ್ಕೂ ದೊಡ್ಡ ಗುಂಡಿ, ಕಲ್ಲು, ಕೊರಕಲು ರಸ್ತೆಯಿಂದ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯುವುದಕ್ಕಿಂತ ಕಲ್ಲು ಮಣ್ಣಿನ ರಸ್ತೆಯಲ್ಲಿ ಸಾಗುವುದೇ ಒಂದು ಚಾಲೆಂಜ್ ಆಗಿತ್ತು. ರಸ್ತೆಯು ಹೊಂಡ- ಗುಂಡಿಯಿಂದ ಕೂಡಿರುವ ಬಗ್ಗೆ ಅನೇಕ ದೂರುಗಳು ಬಂದ ನಂತರ ಸದ್ಯ ಡಾಂಬರು ರಸ್ತೆ ನಿರ್ಮಾಣ ಮಾಡಲಾಗಿದೆ. ಗಿರಿಶ್ರೇಣಿಗೆ ಸಾಗುವ ರಸ್ತೆ ಕಿರಿದಾಗಿದ್ದರೂ ಡಾಂಬರು ರಸ್ತೆ ನಿರ್ಮಾಣ ಮಾಡಿರುವುದರಿಂದ ಪ್ರವಾಸಿಗರ ಸುಗಮ ಸಂಚಾರಕ್ಕೆ ಸಾಧ್ಯವಾಗಿದೆ. ಆದರೆ, ರಸ್ತೆಯುದ್ದಕ್ಕೂ ಒಂದು ಬಂದಿಯಲ್ಲಿ ಪ್ರವಾಸಿ ವಾಹನಗಳನ್ನು ಸಾಲುಗಟ್ಟಿ ನಿಲ್ಲಿಸುವುದರಿಂದ ಮೊದಲೇ ಕಿರಿದಾದ ರಸ್ತೆಯಲ್ಲಿ ದೊಡ್ಡ ವಾಹನ ಚಾಲಕರು ಪರದಾಡುವಂತಾಗಿದ್ದು, ಪ್ರವಾಸಿಗರು ಸರಿಯಾದ ಸಮಯಕ್ಕೆ ಗಿರಿಶ್ರೇಣಿಗೆ ತೆರಳು ಸಾಧ್ಯವಾದಂತಾಗಿದೆ.
ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳಿಂದ ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಅದರಲ್ಲೂ ವಾರಾಂತ್ಯ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಭಾರೀ ಪ್ರಮಾಣದ ಪ್ರವಾಸಿಗರು ದತ್ತಪೀಠ ಮತ್ತು ಮುಳ್ಳಯ್ಯನಗಿರಿ ಪ್ರದೇಶಕ್ಕೆ ಬರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ರಸ್ತೆಯಲ್ಲಿ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲಬೇಕಾಗಿದ್ದು, ಇದು ಕೆಲ ಸಂದರ್ಭದಲ್ಲಿ ಪ್ರವಾಸಿಗರ ನಡುವೆ ಮಾತಿನ ಚಕಮಕಿಗೂ ಕಾರಣವಾಗುತ್ತಿದೆ.
ಮುಳ್ಳಯ್ಯನಗಿರಿ ಶ್ರೇಣಿಗೆ ಸಾಗುವ ರಸ್ತೆ ಕಿರಿದಾಗಿದೆ. ಅತ್ಯಂತ ಕಡಿದಾದ ತಿರುವುಗಳಿವೆ. ಇತ್ತೀಚೆಗಿನ ಮಳೆಗೆ ರಸ್ತೆಯ ಕೆಲವು ಕಡೆಗಳಲ್ಲಿ ಕೊಚ್ಚಿಹೋಗಿ ಹೊಂಡ ಬಿದ್ದಿದೆ. ಅಲ್ಲಲ್ಲಿ ಧರೆ ಕುಸಿದ ಮಣ್ಣು ಬಿದ್ದಿದೆ. ಇದರಿಂದ ಗಿರಿಶ್ರೇಣಿಗೆ ಬರುವ ಮತ್ತು ಗಿರಿಶ್ರೇಣಿಗೆ ಹೋಗುವ ವಾಹನ ಸವಾರರು ಪರದಾಡುವಂತಿದೆ. ಇದರ ನಡುವೆ ಭಾರೀ ತಿರುವು ಮತ್ತು ರಸ್ತೆಯ ಒಂದು ಬದಿಯಲ್ಲಿ ವಾಹನಗಳನ್ನು ಸಾಲಾಗಿ ನಿಲ್ಲಿಸುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸಂಬಂಧಪಟ್ಟ ಇಲಾಖೆಯವರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಲು ಅವಕಾಶ ನೀಡದೆ ಸೂಕ್ತ ಜಾಗ ನಿಗದಿಪಡಿಸಬೇಕೆಂಬುದು ಪ್ರವಾಸಿಗರ ಒತ್ತಾಯವಾಗಿದೆ.
ನವರಾತ್ರಿ ಹಬ್ಬದ ರಜೆಗೆ ಮುಳ್ಳಯ್ಯನಗಿರಿ ಶ್ರೇಣಿಗೆ ಪ್ರವಾಸ ಬಂದಿದ್ದೇವೆ. ಪ್ರವಾಸಿಗರು ವಾಹನಗಳನ್ನು ಸರಿಯಾಗಿ ಪಾರ್ಕಿಂಗ್ ಮಾಡಿದೆ ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿದ್ದು, ಇದರಿಂದ ಹೋಗಿ ಬರಲಿಕ್ಕೆ ತೊಂದರೆಯಾಗಿದೆ. ದೊಡ್ಡ ಪ್ರಪಾತ ಕೂಡ ಇದೆ. ಎರಡು ವಾಹನ ಒಮ್ಮಗೆ ಹೋಗಿ ಬರಲು ಸಾಧ್ಯವಾಗದ ರೀತಿಯಲ್ಲಿ ಪಾರ್ಕಿಂಗ್ ಮಾಡಲಾಗಿದ್ದು, ಬಹಳಷ್ಟು ಸಮಯ ತಗೆದುಕೊಳ್ಳುತ್ತಿದೆ. ಸಂಬಂಧಪಟ್ಟವರು ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಸಿಬ್ಬಂದಿ ನಿಯೋಜಿಸಿ ನಿರ್ವಹಣೆ ಮಾಡಿದಲ್ಲಿ ಸಮಸ್ಯೆ ಉಂಟಾಗುವುದಿಲ್ಲ.
–ಕೆ.ವಿಜಯ್, ಬೆಂಗಳೂರು ಐಟಿ ಉದ್ಯೋಗಿ