Advertisement
ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವಂತೆ ಆಗ್ರಹಿಸಿ ಸಾವಿರಾರು ಮಹಿಳೆಯರು ನಡೆಸಿದ ಪಾದಯಾತ್ರೆ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ಬುಧವಾರ ಮೆಜಿಸ್ಟಿಕ್ ಸುತ್ತಮುತ್ತಲ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಬೆಳಗ್ಗೆ ಮಲ್ಲೇಶ್ವರ ಆಟದ ಮೈದಾನದಿಂದ ಹೊರಟ ಪಾದಯಾತ್ರೆ ಮಧ್ಯಾಹ್ನದ ವೇಳೆಗೆ ಶೇಷಾದ್ರಿ ರಸ್ತೆ ತಲುಪಿತು. ಪಾದಯಾತ್ರೆ ಬಂದ ಮಾರ್ಗದ ಉದ್ದಕ್ಕೂ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.
Related Articles
Advertisement
ಬೆಳಗ್ಗೆ ಮಹಿಳಾ ಮುಖಂಡರು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ರಂಗಕರ್ಮಿ ಪ್ರಸನ್ನ ಹಾಗೂ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರವಿಕೃಷ್ಣಾ ರೆಡ್ಡಿ ಜತೆ ಚರ್ಚೆ ನಡೆಸಿದರು.
ರಾಜಕಾರಣಿಗಳು ಕರ್ತವ್ಯ ಭ್ರಷ್ಟರು: ಈ ವೇಳೆ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ರಾಜ್ಯಸರ್ಕಾರ ಮದ್ಯ ವಹಿವಾಟನ್ನೇ ಬಹುದೊಡ್ಡ ಆದಾಯವನ್ನಾಗಿ ಪರಿಗಣಿಸಿ ಮದ್ಯಪಾನಕ್ಕೆ ಉತ್ತೇಜಿಸುವುದು ಸರಿಯಲ್ಲ. ಇಂದು ಕುಡಿತದಿಂದ ಸಾವಿರಾರು ಕುಟುಂಬ, ಲಕ್ಷಾಂತರ ಮಹಿಳೆಯರ ಜೀವನ ಬೀದಿಪಾಲಾಗುತ್ತಿದೆ. ಸರ್ಕಾರವು ಮಹಿಳೆಯರ ಜೀವನ ಮುಖ್ಯವೋ ಅಥವಾ ತಮ್ಮ ಆದಾಯ ಮುಖ್ಯವೋ ಎಂದು ಆಲೋಚಿಸಬೇಕು ಎಂದು ಪ್ರಶ್ನಿಸಿದರು.
ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಕಾಲ್ನಡಿಗೆಯಲ್ಲಿ ಬಂದಿರುವ ಹೆಣ್ಣುಮಕ್ಕಳನ್ನು ಸಂಬಂಧಪಟ್ಟ ಜನಪ್ರತಿನಿಧಿಗಳು ಭೇಟಿ ಮಾಡಿಲ್ಲ. ಸರ್ಕಾರ ಉಳಿಸಿಕೊಳ್ಳಲು, ಬೀಳಿಸುವ ಸಲುವಾಗಿ ಜಗಳ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು ಯಾವೊಬ್ಬ ಸಚಿವರು ಈ ಮಹಿಳೆಯರನ್ನು ಕಾಣಲು ಬಂದಿಲ್ಲ. ದಾರಿಮಧ್ಯೆ ಹೆಣ್ಣು ಮಗಳು ಸಾವನ್ನಪ್ಪಿದ್ದರೂ ಸಹ ಸ್ಪಂದಿಸಿಲ್ಲ. ಈ ರಾಜಕಾರಣಿಗಳು ಕರ್ತವ್ಯ ಭ್ರಷ್ಟರು ಎಂದು ಕಿಡಿಕಾರಿದರು. ಈ ಕುರಿತು ಮಂಗಳವಾರ ದೇವೇಗೌಡರಿಗೆ ಪತ್ರ ಬರೆದಿದ್ದೇನೆ. ಗಾಂಧೀಜಿ ಕನಸು ಮದ್ಯಪಾನ ಮುಕ್ತ ಭಾರತ. ಅದಕ್ಕಾಗಿ ಹುತಾತ್ಮರ ದಿನದಂದೆ ಹೋರಾಟ ಮಾಡುತ್ತಿದ್ದು, ಸಾವಿರಾರು ಮಹಿಳೆಯರು ಹೋರಾಟಕ್ಕೆ ಬೀದಿಗಿಳಿದಿ ದ್ದಾರೆ. ಸರ್ಕಾರ ಅಕ್ಟೋಬರ್ 2 ಒಳಗೆ ಮದ್ಯ ನಿಷೇದಿಸಿ ಆದೇಶ ಹೊರಡಿಸಬೇಕು. ಇದು ಸರ್ಕಾರಕ್ಕೆ ನಾವು ಕೊಡುತ್ತಿರುವ ಅಂತಿಮಗಡುವು ಎಂದರು.
ದಾರಿಯುದ್ದಕ್ಕೂ ದಾನಿಗಳ ಸಹಾಯ ಹಸ್ತಮದ್ಯಪಾನ ನಿಷೇಧಿಸುವಂತೆ ಆಗ್ರಹಿಸಿ ‘ಬೆಂಗಳೂರು ಚಲೋ’ ನಡೆಸಲು ತೀರ್ಮಾನಿಸಿ ರಾಜ್ಯದ 28 ಜಿಲ್ಲೆಯ ಸಾವಿರಾರು ಮಹಿಳೆಯರು ಧೀರ ಮಹಿಳೆ ಒನಕೆ ಓಬವ್ವ ಜಿಲ್ಲೆಯಲ್ಲಿ ಒಗ್ಗೂಡಿದೆವು. ಮದ್ಯಪಾನದಿಂದ ನಮಗಾಗುತ್ತಿರುವ ನೋವನ್ನು ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ ಮುಟ್ಟಿಸಲೇಬೇಕು ಎಂಬ ಕಿಚ್ಚಿನಿಂದ ಪಾದಯಾತ್ರೆ ಹೊರಟ ನಾವು ಊಟ ವಸತಿ ಬಗ್ಗೆ ಚಿಂತೆ ಮಾಡಲಿಲ್ಲ. ಆದರೆ, ನಮಗೆ ದಾರಿಯುದ್ದಕ್ಕೂ ಊರುಗಳ ಗ್ರಾಮಸ್ಥರು, ಸಾಣೇಹಳ್ಳಿ ಮಠ, ಸಿದ್ಧಗಂಗಾ ಮಠ, ಆದಿಚುಂಚನಗಿರಿಮಠ, ಶಿರಾ, ತುಮಕೂರಿನ ಸಂಘ ಸಂಸ್ಥೆಗಳು ಊಟ ವಸತಿಯ ಅವಕಾಶ ಮಾಡಿದರು. ನಡಿಗೆಯಿಂದ ಧಣಿದ ನಮಗೆ ಸಾಕಷ್ಟು ಜನ ನೆರವಾದರು, ಗಾಯವಾಗಿದ್ದ ಕಾಲುಗಳಿಗೆ ಔಷದೋಪಚಾರ ಮಾಡಿದರು ಅವರೆಲ್ಲರಿಗೂ ನಾವು ಋಣಿ ಎನ್ನುತ್ತಾರೆ ರಾಯಚೂರಿನ ಮಹಿಳಾ ಸದಸ್ಯೆ ವಿದ್ಯಾ. ಸಿಎಂಗೆ ಕಿಂಚಿತ್ತೂ ಕಾಳಜಿ ಇಲ್ಲವೆ?
ಪಾದಯಾತ್ರಿ ರೇಣುಕಮ್ಮ ಅಪಘಾತದಲ್ಲಿ ನಿಧನರಾಗಿ ಮೂರು ದಿನಗಳಾಯಿತು. ಆದರೆ, ರಾಜ್ಯದ ಮುಖ್ಯಮಂತ್ರಿಗಳು ಈ ಕುರಿತು ವಿಚಾರಿಸುವಷ್ಟು ಸಮಯವಿಲ್ಲ. ಮೃತರ ಮನೆಯವರ ಕಷ್ಟ ಅವರೊಳಗೆ ಕೇಳಿಸುತ್ತಿಲ್ಲ. ತಮ್ಮ ಮಗನ ಸಿನಿಮಾ ನೋಡಲು ಅದನ್ನು ಇತರರಿಗೆ ರಾಜಕಾರಣಿಗಳಿಗೆ ತೋರಿಸಲು ಸಮಯವಿರುತ್ತದೆ. ಆದರೆ, ಬಡಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ?ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು ಬಳ್ಳಾರಿಯ ಹೋರಾಟಗಾರ್ತಿ ಶಾರದಮ್ಮ. ಪಾದಯಾತ್ರಿ ಸಂಗಾತಿ ಕಳೆದುಕೊಂಡೆವು
ಚಿತ್ರದುರ್ಗದಲ್ಲಿ ಪಾದಯಾತ್ರೆ ಆರಂಭಸಿದಾಗ ಇದ್ದ ರಾಯಚೂರಿನ ನಮ್ಮ ಸಂಗಾತಿ ರೇಣುಕಮ್ಮ(70) ಈಗ ನಮ್ಮೊಂದಿಗಿಲ್ಲ. ತಮ್ಮ ಮನೆಯಲ್ಲಿ ಯಾರೂ ಮದ್ಯಪಾನಿಗಳಿಲ್ಲದಿದ್ದರೂ ಅಕ್ಕ ಪಕ್ಕದ ಮನೆಯಲ್ಲಿ ಮದ್ಯಪಾನ ಮಾಡಿ ಬಂದ ಪುರುಷರಿಂದ ಆ ಮನೆಯವರ ಮೇಲೆ ಆಗುತ್ತಿದ್ದ ದೌರ್ಜನ್ಯ, ಹಿಂಸೆಗಳನ್ನು ಕಂಡು ಈ ಪಾದಯಾತ್ರೆಗೆ ತಮ್ಮ ಸೊಸೆಯೊಂದಿಗೆ ಅವರು ಬಂದಿದ್ದರು. ಆದರೆ, ರಸ್ತೆ ಮಧ್ಯೆ ನಮಗೆ ಸೂಕ್ತ ಬಂದೋಬಸ್ತ್, ವಾಹನಗಳಿಂದ ಸುರಕ್ಷತೆ ಇಲ್ಲದೇ ಸಂಭವಿಸಿದ ಅಪಘಾತದಲ್ಲಿ ಅವರನ್ನು ಕಳೆದು ಕೊಂಡಿಡೆವು. ಅವರ ಕುಟುಂಬದ ಆಕ್ರಂದನ ಮುಗಿಲು ಮಟ್ಟಿತ್ತು. ಪತಿಯೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದ ರೇಣುಕಮ್ಮಳಿಗೆ 3 ಹೆಣ್ಣುಮಕ್ಕಳಿದ್ದು, ಅದರಲ್ಲಿ ಕಿರಿಯ ಮಗಳು ಅಂಗವಿಕಲೆ ಎಂದು ಕಣ್ಣೀರು ಹಾಕಿದರು ಹೋರಾಟಗಾರ್ತಿ ವಿರೂಪಮ್ಮ. ಕಾನೂನು ಭಂಗ ಆರೋಪ ಹಿನ್ನೆಲೆಯಲ್ಲಿ ಪ್ರತಿಭಟನಾಕಾರನ್ನು ವಶಕ್ಕೆ ಪಡೆದಿದ್ದು, ಬಿಡುಗಡೆ ಗೊಳಿಸಲಾಗಿದೆ.
●ಬಿ.ಕೆ ಸಿಂಗ್, ಹೆಚ್ಚುವರಿ ಪೊಲೀಸ್ ಆಯುಕ್ತ, ಪಶ್ಚಿಮ ವಿಭಾಗ ಪ್ರತಿಭಟನಾಕಾರನನ್ನು ಚದುರಿಸುವ ನಿಟ್ಟಿನಲ್ಲಿ ಪೊಲೀಸರು ಬಂಧಿಸಿ ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದರು ಒಂದು ಗಂಟೆ ನಂತರ ಬಿಡುಗಡೆಗೊಳಿಸಿ ಮನೆಗೆ ತೆರಳುವಂತೆ ಸೂಚಿಸಿದರು. ಮದ್ಯ ನಿಷೇಧ ಮುಂದಿನ ಹೋರಾಟದ ಬಗ್ಗೆ ಎರಡು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.
●ರವಿಕೃಷ್ಣಾರೆಡ್ಡಿ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಮದ್ಯಪಾನ ನಿಷೇಧ ಹೋರಾಟಕ್ಕೆ ಬಂದ ಎಲ್ಲ ಮಹಿಳೆಯರನ್ನು ವಾಪಸ್ ಕಳುಹಿಸಲಾಗಿದೆ. ಬಂಧಿಸಿದ ಮುಖಂಡರೆಲ್ಲರನ್ನೂ ಬಿಡುಗಡೆ ಮಾಡಿದ್ದು ಪ್ರತಿಭಟನೆ ಸರ್ಕಾರಕ್ಕೆ ಬಿಸಿಮುಟ್ಟಿಸಿದೆ. ಲೋಕಸಭಾ ಚುನಾವಣೆ ವೇಳೆ ನಮ್ಮ ನಡೆ ಏನು ಎಂಬುದನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
●ಸ್ವರ್ಣಾ ಭಟ್, ರಾಜ್ಯ ಸಂಚಾಲಕಿ, ಮದ್ಯಪಾನ ನಿಷೇಧ ಆಂದೋಲನಾ ಸಮಿತಿ