Advertisement
ಬೆಳ್ತಂಗಡಿ: ಮಂಗಳೂರು, ಚಾರ್ಮಾಡಿ, ಧರ್ಮಸ್ಥಳವನ್ನು ಸಂಧಿಸುವ ಕೇಂದ್ರ ಸ್ಥಾನ ಉಜಿರೆ. ಇಲ್ಲಿನ ಜಂಕ್ಷನ್ ನಿಂದ ಕಾಲ್ನಡಿಗೆ ದೂರದಲ್ಲೇ ಶಿಕ್ಷಣ ಸಂಸ್ಥೆಗಳು, ಗ್ರಾ.ಪಂ., ದೇವಸ್ಥಾನ, ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಗಳ ಶಾಖೆಗಳು, ಸಹಕಾರಿ ಸಂಘಗಳು, ಗ್ರಾಮ ಕರಣಿಕರ ಕಚೇರಿ, ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಎಲ್ಲವೂ ಇರುವುದರಿಂದ ಜನಸಂದಣಿ ಮತ್ತು ವಾಹನ ಸಂದಣಿ ಎರಡೂ ಹೆಚ್ಚು.
ತಾಲೂಕಿನ 48 ಗ್ರಾಮ ಪಂಚಾಯತ್ ಗಳ ಪೈಕಿ ದೊಡ್ಡ ಗ್ರಾಮ ಪಂಚಾಯತ್ ಎಂಬ ಹೆಗ್ಗಳಿಕೆಗೆ ಉಜಿರೆ ಪಾತ್ರವಾಗಿದೆ. ಚಾರ್ಮಾಡಿ, ನೆರಿಯ, ಮುಂಡಾಜೆ, ದಿಡುಪೆ, ಕಡಿರುದ್ಯಾವರ, ಕಲ್ಮಂಜ, ಬೆಳಾಲು, ನಡ ಮೊದಲಾದ ಗ್ರಾಮದವರು ವಿವಿಧ ಕೆಲಸಗಳಿಗೆ ಅವಲಂಬಿಸಿರುವುದು ಇದನ್ನೇ. ಇಲ್ಲಿರುವ ರಸ್ತೆ ವಿಭಜಕವನ್ನು ತೆರವುಗೊಳಿಸಿ ವೃತ್ತವನ್ನು ರಚಿಸುವ ಬಗ್ಗೆ ಪ್ರತೀ ಗ್ರಾಮಸಭೆಯಲ್ಲೂ ಚರ್ಚೆಗೊಂಡು ನಿರ್ಣಯ ಕೈಗೊಳ್ಳಲಾಗುತ್ತಿದೆ. ಅದು ಅನುಷ್ಠಾನಗೊಳ್ಳಬೇಕೆಂಬ ಅಭಿಪ್ರಾಯ ಜನರದ್ದು. ಎಲ್ಲ ದಿಕ್ಕಿಗೂ ಬಸ್
ಉಜಿರೆ ಜಂಕ್ಷನ್ ನ ಮುಖಾಂತರ ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಮೊದಲಾದೆಡೆ ತೆರಳುವ ಬಸ್ ಗಳು ಚಾರ್ಮಾಡಿ ಮೂಲಕ ಸಾಗಿದರೆ, ಮಂಗಳೂರು ಕಡೆಗೆ ದಿನನಿತ್ಯ ನೂರಾರು ಬಸ್ ಗಳು ತೆರಳುತ್ತವೆ. ಕಾರ್ಕಳ, ಉಡುಪಿ, ಹುಬ್ಬಳ್ಳಿ, ಧಾರವಾಡ ಮೊದಲಾದೆಡೆ ತೆರಳುವ ಬಸ್, ಮಡಿಕೇರಿ, ಮೈಸೂರು ಕಡೆಗಳಿಗೆ ಹೋಗುವ ಬಸ್ ಗಳೂ ಕೂಡಾ ಉಜಿರೆ ಜಂಕ್ಷನ್ ಸಂಪರ್ಕಿಸಿಯೇ ತೆರಳಬೇಕಿದೆ. ಸ್ಥಳೀಯ ಹಲವು ಗ್ರಾಮಗಳನ್ನು ಸಂಪರ್ಕಿಸುವ ಬಸ್ ಗಳು ಉಜಿರೆಯನ್ನೇ ಬಳಸಿಯೇ ಹೋಗಬೇಕು.
Related Articles
ಸಹಸ್ರಾರು ಮಂದಿಯ ಪ್ರಯಾಣ
ಈ ಜಂಕ್ಷನ್ ನಿಂದ ನಿತ್ಯವೂ ಸಾವಿರಾರು ಮಂದಿ ವಿವಿಧ ಜಿಲ್ಲೆಗಳಿಗೆ ಪ್ರಯಾಣ ಬೆಳೆಸುತ್ತಾರೆ. ಬೆಳಗ್ಗೆ ಹಾಗೂ ಸಂಜೆ ವೇಳೆ ಸಾವಿರಾರು ಮಂದಿ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಾರೆ. ಸಾವಿರಾರು ವಾಹನಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ, ಸುರ್ಯ ದೇವಸ್ಥಾನ, ಉಜಿರೆ ದೇವಸ್ಥಾನ, ಕಟೀಲು, ಕೊಲ್ಲೂರು ಮೊದಲಾದ ಕ್ಷೇತ್ರಗಳಿಗೆ ತೆರಳುತ್ತಾರೆ. ನಿತ್ಯವೂ ಕಿಕ್ಕಿರಿದು ತುಂಬಿರುವ ಜಂಕ್ಷನ್‌ನಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಿದೆ. ಪಂಚಾಯತ್ ಆಡಳಿತ ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸುವ ಯೋಜನೆಯನ್ನು ಇನ್ನೂ ಜಾರಿಗೊಳಿಸಿಲ್ಲ. ಅದು ಅನುಷ್ಠಾನಕ್ಕೆ ಬಂದರೆ ಒಂದಿಷ್ಟು ಸಮಸ್ಯೆ ಬಗೆಹರಿಯುತ್ತದೆ. ಅದಕ್ಕೆ ಸಂಚಾರಿ ಪೊಲೀಸರು ಗಮನರಿಸಬೇಕೆಂಬುದು ಜನರ ಆಗ್ರಹ. ಇದಲ್ಲದೇ ಚಿಕ್ಕಮಗಳೂರು, ನೆರಿಯ, ಚಾರ್ಮಾಡಿ, ದಿಡುಪೆ, ಕೊಲ್ಲಿ ಮೊದಲಾದೆಡೆ ತೆರಳುವ ಬಸ್‌ಗಳು ರಸ್ತೆಯಲ್ಲೇ ನಿಲ್ಲುವುದರಿಂದಲೂ ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದೆ. ಇದರೊಂದಿಗೆ ಫುಟ್ ಪಾತ್ ಗಳು ಬೇಕು. ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವುದು ಹಾಗೂ ವಾಹನಗಳ ಓಡಾಟ ಹೆಚ್ಚಿರುವುದರಿಂದ ಪಾದಚಾರಿಗಳಿಗೆ ಸಾಗಲು ಸಮಸ್ಯೆ. ಇದನ್ನು ಆದ್ಯತೆಯ ಮೇರೆಗೆ ಬಗೆಹರಿದರೆ ಚೆನ್ನ.
Advertisement
ಸುಸಜ್ಜಿತ ಬಸ್ ತಂಗುದಾಣಜಂಕ್ಷನ್ ಬಳಿಯೇ ಮೂರು ಬಸ್ ತಂಗುದಾಣಗಳಿದ್ದರೂ ಉಪಯೋಗಕ್ಕಿರುವುದು ಎರಡು ಮಾತ್ರ. ಚಾರ್ಮಾಡಿ ಕಡೆಗೆ ತೆರಳುವ ಪ್ರಯಾಣಿಕರಿಗೆ ಇರುವ ತಂಗುದಾಣದ ಬಳಿ ಯಾವುದೇ ಬಸ್ ನಿಲ್ಲದು. ಬದಲಾಗಿ ಜಂಕ್ಷನ್ ಬದಿಯಲ್ಲೇ ನಿಲ್ಲುತ್ತದೆ. ಇಲ್ಲಿ ಯಾವುದೇ ತಂಗುದಾಣವಿಲ್ಲ. ಪಂಚಾಯತ್ ಇದಕ್ಕೆ ಸೂಕ್ತ ಕ್ರಮ ಕೈಗೊಂಡರೆ ಒಳ್ಳೆಯದು ಎಂಬ ಅಭಿಪ್ರಾಯ ಜನರದ್ದು. ಜತೆಗೆ ತಂಗುದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದರೆ ಚೆನ್ನ. ವೃತ್ತ ನಿರ್ಮಿಸಲು ಮನವಿ
ಗ್ರಾಮಸಭೆಗಳಲ್ಲಿ ರಸ್ತೆ ವಿಭಜಕವನ್ನು ತೆರವುಗೊಳಿಸುವಂತೆ ನಿರ್ಣಯಿಸಿ, ಒಂದು ವೃತ್ತ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರ ಬರೆಯಲಾಗಿದೆ. ಸಂಚಾರ ಪೊಲೀಸರಿಗೂ ಇಲ್ಲಿನ ಸಮಸ್ಯೆ ಕುರಿತು ತಿಳಿಸಲಾಗಿದೆ. ಚಾರ್ಮಾಡಿ ಕಡೆಗೆ ಹೋಗುವ ಪ್ರಯಾಣಿಕರಿಗೆ ಬಸ್ ತಂಗುದಾಣವನ್ನು ನಿರ್ಮಿಸಲಾಗುವುದು. ಪಾರ್ಕಿಂಗ್ ವ್ಯವಸ್ಥೆಗೆ ಶೀಘ್ರವೇ ಪರಿಹಾರ ಕೈಗೊಳ್ಳಲಾಗುವುದು.
– ಕೆ. ಶ್ರೀಧರ ಪೂಜಾರಿ, ಅಧ್ಯಕ್ಷರು, ಗ್ರಾ. ಪಂ.ಉಜಿರೆ ಡಿವೈಡರ್ ಸಮಸ್ಯೆ ಇದೆ
ಪ್ರಸ್ತುತ ಇರುವ ಡಿವೈಡರ್ ಗಳನ್ನು ತೆಗೆದು ವೃತ್ತ ಮಾಡಿದರೆ ಉತ್ತಮ. ಜತೆಗೆ ಇಲ್ಲಿನ ಪಾರ್ಕಿಂಗ್ ವ್ಯವಸ್ಥೆ ಸುಧಾರಣೆಯಾಗಬೇಕು. ಪ್ರಮುಖವಾಗಿ ರಿಕ್ಷಾಗಳಿಗೆ ಪಾರ್ಕಿಂಗ್‌ನಲ್ಲಿ ಸಾಲು ಪದ್ಧತಿ ಬಂದರೆ ಪಾರ್ಕಿಂಗ್ ಸಮಸ್ಯೆ ಸುಧಾರಣೆಯಾಗುತ್ತದೆ. ಈ ಕುರಿತು ಆಲೋಚಿಸಬೇಕಿದೆ.
– ಓಡಿಯಪ್ಪ ಗೌಡ ಸಬ್‌ಇನ್ಸ್‌ಪೆಕ್ಟರ್, ಸಂಚಾರ ಪೊಲೀಸ್ ಠಾಣೆ, ಬೆಳ್ತಂಗಡಿ — ಗುರು ಮುಂಡಾಜೆ