Advertisement

ಬೆಳ್ತಂಗಡಿಯಲ್ಲಿ ಟ್ರಾಫಿಕ್‌ ಬಿಸಿ

08:45 AM Apr 30, 2018 | Team Udayavani |

ಬೆಳ್ತಂಗಡಿ: ಸಾಲುಗಟ್ಟಿ ನಿಂತ ವಾಹನಗಳು, ಸಿಕ್ಕ ಜಾಗಗಳಲ್ಲಿ ಮುನ್ನುಗ್ಗಿದ ಬೈಕ್‌ಗಳು, ಬೆಳಗ್ಗಿನಿಂದ ಸಂಜೆಯವರೆಗೂ ಎಲ್ಲಿ ನೋಡಿದರೂ ಜಾಮ್‌, ಜಾಮ್‌, ಜಾಮ್‌… ಇದು ಬೆಳ್ತಂಗಡಿಯಲ್ಲಿ ರವಿವಾರ ನಡೆದ ಕಥೆ, ವ್ಯಥೆ… ವಿವಿಧ ಕಾರ್ಯಕ್ರಮಗಳಿಗೆ, ಸಭೆ ಸಮಾರಂಭಗಳಿಗೆ ತೆರಳುವವರು, ಖಾಸಗಿ ಪ್ರಯಾಣಿಕರು, ಸಾರ್ವಜನಿಕರು ಟ್ರಾಫಿಕ್‌ ಜಾಮ್‌ ನ ಬಿಸಿ ಅನುಭವಿಸುವಂತಾಯಿತು. ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್‌ ಜಾಮ್‌ ತಾಲೂಕಿನಲ್ಲಿ ಕಂಡು ಬಂತು.

Advertisement

ಸಂಚಾರ ನಿಯಮ ಉಲ್ಲಂಘನೆ
ಬೆಳಗ್ಗೆ 11ರಿಂದ ಗುರುವಾಯನಕೆರೆ ಮೊದಲಾದೆಡೆ ವಾಹನ ದಟ್ಟಣೆ ಕಂಡು ಬಂತು. ಕೆಲವು ವಾಹನ ಸವಾರರು ಅನಗತ್ಯ ಗೊಂದಲ ಸೃಷ್ಟಿ, ಸಂಚಾರ ನಿಯಮದ ಉಲ್ಲಂಘನೆಯಿಂದ ಸಾರ್ವಜನಿಕರು ಪರ ದಾಡುವಂತಾಯಿತು. ಅಗಲ ಕಿರಿದಾದ ರಸ್ತೆಗಳಲ್ಲೂ ಸವಾರರು ವಾಹನ ನುಗ್ಗಿಸುತ್ತಿದ್ದರಿಂದ ಜಾಮ್‌ ಹೆಚ್ಚಾಯಿತು.

ಗುರುವಾಯನಕೆರೆಯಲ್ಲಿ
ರಾ.ಹೆ.ಯಾಗಿದ್ದರೂ ಅಗಲ ಕಿರಿದಾಗಿರುವುದರಿಂದ ಸಮಸ್ಯೆ ಎದುರಾಗುವುದು ಸಾಮಾನ್ಯವಾಗಿದೆ. ರವಿವಾರ ಇದರ ಪ್ರಮಾಣ ಹೆಚ್ಚಾಗಿತ್ತು.  ಗುರುವಾಯನಕೆರೆಯಲ್ಲಿ ಉಡುಪಿ, ಕಾರ್ಕಳ, ಮೂಡಬಿದಿರೆ, ಮಂಗಳೂರು, ಉಪ್ಪಿನಂಗಡಿ ಮತ್ತು ಪುತ್ತೂರು ತೆರಳುವ ವಾಹನಗಳು ಮಾರ್ಗ ಬದಲಾವಣೆ ಮಾಡುವುದರಿಂದ ಹೆಚ್ಚಿನ ಟ್ರಾಫಿಕ್‌ ಜಾಮ್‌ ಉಂಟಾಯಿತು. ಬಸ್‌ ನಿಲ್ದಾಣವೂ ಇರುವುದರಿಂದ ಇತರ ವಾಹನಗಳೂ ಪರದಾಡಬೇಕಾಯಿತು.

ಖಾಸಗಿ ಕಾರ್ಯಕ್ರಮ
ರವಿವಾರ ರಜಾದಿನ ಹಾಗೂ ಖಾಸಗಿ ಕಾರ್ಯಕ್ರಮಗಳು ಇದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ತೆರಳುತ್ತಿದ್ದರು. ಗುರುವಾಯನಕೆರೆ ಜೈನ್‌ ಪೇಟೆ ಮೊದಲಾದೆಡೆ ಸಭಾಮಂಟಪಗಳಲ್ಲಿ ಖಾಸಗಿ ಕಾರ್ಯಕ್ರಮಗಳಿದ್ದಿದ್ದರಿಂದ ಟ್ರಾಫಿಕ್‌ ಬಿಸಿ ಹೆಚ್ಚಾಯಿತು. ತಾ| ಕೇಂದ್ರದಲ್ಲೂ  ಅಪರಾಹ್ನ 3.30-5ರ ವರೆಗೆ ಜಾಮ್‌ ಉಂಟಾಗಿತ್ತು.

ಚಾರ್ಮಾಡಿಯಲ್ಲಿ ವಾಹನ ದಟ್ಟಣೆ
ವಾರಾಂತ್ಯವಾದ್ದರಿಂದ ಶನಿವಾರ ರಾತ್ರಿಯೂ ಚಾರ್ಮಾಡಿ ಘಾಟಿಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿತ್ತು. ಶಿರಾಡಿ ಘಾಟಿಗೆ ನಿರ್ಬಂಧ ಹೇರಲಾಗಿರುವುದರಿಂದ ಹಾಗೂ ಕಾರ್ಯಕ್ರಮಗಳು ಹೆಚ್ಚಾಗಿದ್ದರಿಂದ ಉಡುಪಿ, ಮಂಗಳೂರಿಗೆ ತೆರಳುವವರ ಸಂಖ್ಯೆ ಹಾಗೂ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ರಸ್ತೆಯೂ ಕಿರಿದಾಗಿದ್ದು, ವಾಹನಗಳ ತರಾತುರಿಯಿಂದ ಜಾಮ್‌ ಸಂಭವಿಸುತ್ತಿದೆ.

Advertisement

ಸಿಬಂದಿ ಕೊರತೆ
ಬೆಳ್ತಂಗಡಿ ಸಂಚಾರ ಠಾಣೆ ಮೊದಲೇ ಸಿಬಂದಿ ಕೊರತೆ ಎದುರಿಸುತ್ತಿದ್ದು ಇರುವ ಬೆರಳೆಣಿಕೆ ಸಿಬಂದಿ ಜತೆ ತಾಲೂಕಿನ ಸಂಚಾರ ನಿಯಂತ್ರಣ ಮಾಡಬೇಕಿದೆ. ಉಡುಪಿಯಲ್ಲಿ ನಡೆಯುವ ಪ್ರಧಾನಿ ಕಾರ್ಯಕ್ರಮ ಹಾಗೂ ಧರ್ಮಸ್ಥಳದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಎಸ್‌.ಐ. ಹಾಗೂ ಸಿಬಂದಿ ತೆರಳಿದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next