ಹೆದ್ದಾರಿಯುದ್ದಕ್ಕೂ ಹೊಂಡ ಗುಂಡಿಗಳ ಜತೆಗೆ ಸಾಕಷ್ಟು ಭಾಗಗಳಲ್ಲಿ ರಸ್ತೆ ಅಗೆದು ಹಾಕಿರುವುದರಿಂದ ಮಣ್ಣು ಸವೆದು ಕೇವಲ ಕಲ್ಲುಗಳು ಉಳಿದುಕೊಂಡಿದೆ. ಇದರಿಂದ ಕಾರು, ಆಟೋ ರಿಕ್ಷಾ ಸೇರಿದಂತೆ ಸಣ್ಣಪುಟ್ಟ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ವಾಹನಗಳ ಓಡಾಟ ಹೆಚ್ಚಿದ್ದಾಗ ವಾಹನಗಳ ಸರತಿ ಕಂಡುಬರುತ್ತಿದೆ.
ಮೆಲ್ಕಾರಿನ ಬೋಳಂಗಡಿಯಿಂದ ನರಹರಿ ಪರ್ವತ-ಕಲ್ಲಡ್ಕ ಮಧ್ಯೆ ವಾಹನಗಳು ತೀರಾ ನಿಧಾನಗತಿಯಲ್ಲಿ ಸಾಗುತ್ತಿರುವ ಕಾರಣ ಹೆಚ್ಚಿನ ಹೊತ್ತು ಸಂಚಾರದೊತ್ತಡ ಕಂಡುರುತ್ತಿದೆ. ಕಲ್ಲಡ್ಕದ ಬಳಿಕ ಕುದ್ರೆಬೆಟ್ಟಿನಿಂದ ಹೆಚ್ಚಿನ ಕಡೆ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದ್ದು, ಅಲ್ಲಿ ಯಾವುದೇ ಆತಂಕವಿಲ್ಲ.
ಬಿ.ಸಿ.ರೋಡಿನಿಂದ ಹೆದ್ದಾರಿಯಲ್ಲಿ ಸಾಗಿದ ವಾಹನಗಳು ಮಾಣಿಯ ಬಳಿಕ ಪುತ್ತೂರು ಕಡೆಗೂ ಸಾಗುವುದರಿಂದ ಹೆದ್ದಾರಿಯಲ್ಲಿ ಯಾವುದೇ ರೀತಿಯ ಸಂಚಾರದೊತ್ತಡ ಇರುವುದಿಲ್ಲ. ಆದರೆ ಬಿ.ಸಿ.ರೋಡು-ಕಲ್ಲಡ್ಕ ಮಧ್ಯೆ ಹೆದ್ದಾರಿ ಅವ್ಯವಸ್ಥೆಯಿಂದ ವಾಹನಗಳು ಬಹಳ ನಿಧಾನವಾಗಿ ಚಲಿಸಿ ತೊಂದರೆಯಾಗುತ್ತಿದೆ ಎಂದು ಬಂಟ್ವಾಳ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬಿ.ಸಿ.ರೋಡು ಸರ್ಕಲ್: ಸಂಚಾರ ಪಥ ಬದಲಾವಣೆ
ಕಾಮಗಾರಿಯ ಹಿನ್ನೆಲೆಯಲ್ಲಿ ಬಿ.ಸಿ.ರೋಡು ಸರ್ಕಲ್‌ನಲ್ಲಿ ಪದೇ ಪದೇ ಸಂಚಾರದ ಪಥ ಬದಲಾಗುವುದರಿಂದ ವಾಹನ ಚಾಲಕರು/ಸವಾರರು ಗೊಂದಲಕ್ಕೆ ಒಳಗಾಗುತ್ತಿದ್ದು, ಜತೆಗೆ ಕಾಮಗಾರಿಗಾಗಿ ರಸ್ತೆಯನ್ನು ಕಿರಿದಾಗಿಸಿರುವುದರಿಂದ ಬಸ್ ಸೇರಿದಂತೆ ಘನ ವಾಹನ ತಿರುಗಲು ಕಷ್ಟವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಮಳೆಗೆ ಹೊಂಡಗಳು ಸೃಷ್ಟಿಯಾಗಿ ಹೊಂಡ, ನೀರು ನಿಂತಿರುವುದನ್ನು ತಪ್ಪಿಸಲು ವಾಹನದವರು ಅಡ್ಡಾದಿಡ್ಡಿ ತಿರುಗಿಸುವುದರಿಂದಲೂ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.
Advertisement