ನೆಲಮಂಗಲ: ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಒಂದೇ ದಿನ ಬಾಡೂಟದ ಊರ ಜಾತ್ರೆ ನಡೆದ ಪರಿಣಾಮ, ರಾಷ್ಟ್ರೀಯ ಹೆದ್ದಾರಿಗಳಲ್ಲಿ 15ಕ್ಕೂ ಹೆಚ್ಚು ಕಿ.ಮೀ. ಟ್ರಾಫಿಕ್‌ಜಾಮ್ ಉಂಟಾಗಿ ಸಾವಿರಾರು ವಾಹನಗಳು 4 ಗಂಟೆಗಳಷ್ಟು ಹೆದ್ದಾರಿಯಲ್ಲಿ ನಿಲ್ಲುವಂತಾಯಿತು.
ತಾಲೂಕಿನ ಬೂದಿಹಾಳ್ ಕರಗದ ಶ್ರೀ ಲಕ್ಷ್ಮೀ ದೇವರ ಅದ್ಧೂರಿ ಜಾತ್ರಾ ಮಹೋತ್ಸವ ಹಾಗೂ ವಿವಿಧ ಗ್ರಾಮಗಳ ಗ್ರಾಮದೇವತೆಗಳ ಮಹೋತ್ಸವ 2ವರ್ಷದ ನಂತರ ನಡೆದ ಪರಿಣಾಮ, ಮಂಗಳವಾರ ಏಕಕಾಲದಲ್ಲಿ ಸಾವಿರಾರು ವಾಹ ನಗಳು ಬೆಂಗಳೂರು, ತುಮಕೂರು ಹಾಗೂ ನೆಲಮಂಗಲ ನಗರ ಸೇರಿ ವಿವಿಧ ತಾಲೂಕುಗಳಿಂದ ಗ್ರಾಮಗಳಿಗೆ ಬಂದ ಪರಿಣಾಮ ಹೆದ್ದಾರಿ ರಸ್ತೆ ಸಂಪೂರ್ಣ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.
ಟ್ರಾಫಿಕ್ ಪೊಲೀಸರಾದ ಸಾರ್ವಜನಿಕರು: ಜಾತ್ರೆಗಳ ಪರಿಣಾಮ 15ಕ್ಕೂ ಹೆಚ್ಚು ಕಿ.ಮೀ. ಉಂಟಾಗಿದ್ದ ಟ್ರಾಫಿಕ್ ಜಾಮ್ ನಡುವೆ ಐದಕ್ಕೂ ಹೆಚ್ಚು ಆ್ಯಂಬುಲೆನ್ಸ್ ಸಿಲುಕಿಕೊಂಡು ಸೈರನ್ ಹಾಕಿದರೂ ಆ್ಯಂಬುಲೆನ್ಸ್‌ಗೆ ಸುಗಮ ಸಂಚಾರ ಮಾಡಲು ಸಾಧ್ಯವಾಗಲಿಲ್ಲ. ಕುಣಿಗಲ್ ಬೈಪಾಸ್ ಬಳಿ ಟ್ರಾಫಿಕ್ ಪೊಲೀಸರು ಇಲ್ಲದ ಪರಿಣಾಮ ಸಾರ್ವಜನಿಕರೇ ಟ್ರಾಫಿಕ್ ಪೊಲೀಸರಂತೆ ಕೆಲಸ ಮಾಡಿ ಆ್ಯಂಬುಲೆನ್ಸ್‌ಗೆ ಗಂಟೆಗಳ ನಂತರ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಡಕಮಾರನಹಳ್ಳಿಯಿಂದ ಟಿ.ಬೇಗೂರಿನವರೆಗೂ ಟ್ರಾಫಿಕ್ ಜಾಮ್ ಉಂಟಾದರೆ, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಯಂಟಗನಹಳ್ಳಿಯವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕುಣಿಗಲ್ ಬೈಪಾಸ್‌ಬಳಿ ಸರಾಗವಾಗಿ ವಾಹನ ಓಡಾಟ ಮಾಡದ ಪರಿಣಾಮ 4 ಗಂಟೆಗೂ ಹೆಚ್ಚು ಕಾಲ 15 ಕಿ.ಮೀ.ಗಳಷ್ಟು ದೂರ ಹೆದ್ದಾರಿ ಯಲ್ಲಿ ವಾಹನಗಳು ನಿಲ್ಲುವಂತಾಗಿತ್ತು.
ಪೊಲೀಸ್ ಸಿಬ್ಬಂದಿ ಕೊರತೆ: ಸಂಚಾರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಅನೇಕ ದೂರು, ಮನವಿ ಬಂದರೂ ಸಹ ಮೇಲಾಧಿಕಾರಿಗಳು ಬಗೆಹರಿಸದ ಪರಿಣಾಮ ಮಂಗಳವಾರ ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಯಿತು.
ಕುಣಿಗಲ್ ಬೈಪಾಸ್ ಬಳಿ ಇಬ್ಬರು ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸಿದ್ದು, ಸಿಬ್ಬಂದಿ ಕಷ್ಟವನ್ನು ನೋಡದೆ ಸಾರ್ವಜನಿಕರೇ ಟ್ರಾಫಿಕ್ ಪೊಲೀಸರಂತೆ ನಿಂತು ಸುಗಮ ಸಂಚಾರಕ್ಕೆ ಕೆಲಸ ಮಾಡಿದರು.
ನಾಲ್ಕು ಕಡೆ ಟ್ರಾಫಿಕ್ ಜಾಮ್: ತಾಲೂಕಿನಲ್ಲಿ ಬಹಳಷ್ಟು ಗ್ರಾಮದಲ್ಲಿ ಊರ ಜಾತ್ರೆಗಳ ಪರಿಣಾಮ ಹೆದ್ದಾರಿ ಎರಡು ಭಾಗದಲ್ಲಿ ವಾಹನಗಳು ಏಕಕಾಲದಲ್ಲಿ ಬಂದ ಪರಿಣಾಮ ನಾಲ್ಕು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಿಬ್ಬಂದಿ ಗಳ ಪರಿಶ್ರಮದಿಂದ ಟ್ರಾಫಿಕ್ ಜಾಮ್ ನಿಯಂತ್ರಣ ಮಾಡಿದ್ದೇವೆ ಎಂದು ನೆಲಮಂಗಲ ಸಂಚಾರ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ತಿಳಿಸಿದರು.