Advertisement

ಅವಳಿ ನಗರದಲ್ಲಿ ತಗ್ಗದ ಟ್ರಾಫಿಕ್‌ ಕಿರಿಕಿರಿ

05:01 PM Jul 18, 2022 | Team Udayavani |

ಗದಗ: ನೋ-ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲುವ ಹಾಗೂ ರಸ್ತೆಯಲ್ಲಿ ಅಡ್ಡಲಾಗಿ ನುಗ್ಗುವ ವಾಹನಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಾಗಾಗಿ, ಸಾರ್ವಜನಿಕರು ಹಾಗೂ ಬೈಕ್‌ ಸವಾರರ ಗೋಳಾಟಕ್ಕೆ ಮುಕ್ತಿ ದೊರೆಯದಂತಾಗಿದೆ.

Advertisement

ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದೆ. ಕೈಗಾರಿಕೀರಣದ ಬೆಳವಣಿಗೆ ಹಂತ ಹಂತವಾಗಿ ಅಭಿವೃದ್ಧಿ ಕಡೆಗೆ ಸಾಗುತ್ತಿದ್ದು, ವ್ಯಾಪಾರ ವಹಿವಾಟು ಸಹ ವೃದ್ಧಿಸಿದೆ. ಶಿಕ್ಷಣ ಕ್ಷೇತ್ರ ಕೂಡ ಉನ್ನತಿಯತ್ತ ಸಾಗಿದ್ದರಿಂದ ವಾಹನಗಳ ಸಂಖ್ಯೆಯೂ ಸಹಜವಾಗಿಯೇ ದ್ವಿಗುಣಗೊಂಡಿದೆ. ಇದರಿಂದ ದಿನೇ ದಿನೆ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತಲೆನೋವುಂಟು ಮಾಡಿದೆ.

ಗದಗ ನಗರದಲ್ಲಿ ನಾಲ್ಕು ಟ್ರಾಫಿಕ್‌ ಸಿಗ್ನಲ್‌ ಗಳಿದ್ದು, ಮುಳಗುಂದ ನಾಕಾ, ಟಿಪ್ಪು ಸರ್ಕಲ್‌ ಹಾಗೂ ಭೂಮರಡ್ಡಿ ವೃತ್ತದಲ್ಲಿ ಮಾತ್ರ ಸಿಗ್ನಲ್‌ಗ‌ಳು ಕಾರ್ಯನಿರ್ವಹಿಸುತ್ತಿವೆ. ಮಹಾತ್ಮ ಗಾಂಧಿ ವೃತ್ತದ ಬಳಿಯ ಸಿಗ್ನಲ್‌ಗ‌ಳನ್ನು ತಾಂತ್ರಿಕ ಕಾರಣಗಳಿಂದ ತೆಗೆಯಲಾಗಿದೆ. ನಗರದ ಪ್ರಮುಖವಾದ ಮಹಾತ್ಮ ಗಾಂಧಿ ವೃತ್ತದ ಮೂಲಕ ಜಿಲ್ಲೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಮಾರುಕಟ್ಟೆಗೆ ಸಾರ್ವಜನಿಕರು ಆಗಮಿಸುತ್ತಾರೆ. ಈ ವೇಳೆ ಅಡ್ಡಲಾಗಿ ನುಗ್ಗುವ ವಾಹನಗಳಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ನಗರದ ಕಿತ್ತೂರು ಚೆನ್ನಮ್ಮ ವೃತ್ತದಿಂದ ಭೂಮರಡ್ಡಿ ವೃತ್ತದವರೆಗೆ ಚತುಷ್ಪಥ ರಸ್ತೆ ಇರುವುದರಿಂದ ವಾಹನಗಳು ವೇಗವಾಗಿ ಚಲಿಸುತ್ತವೆ. ಇದೇ ರಸ್ತೆಯ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿಯ ಹಾಗೂ ಬನ್ನಿಕಟ್ಟೆ ಬಳಿಯ ಕೂಡುವ ರಸ್ತೆಗಳು ಅಪಘಾತಕ್ಕೆ ಆಹ್ವಾನಿಸುವಂತಿವೆ. ವಾಹನಗಳ ವೇಗದ ಮಿತಿ ತಗ್ಗಿಸಲು ಹಾಗೂ ಅಡ್ಡಲಾಗಿ ನುಗ್ಗುವ ವಾಹನಗಳನ್ನು ನಿಯಂತ್ರಿಸಲು ಸಿಗ್ನಲ್‌ ಅವಶ್ಯಕವಿದ್ದರೂ ಪೊಲೀಸ್‌ ಇಲಾಖೆ ಹಾಗೂ ನಗರಸಭೆ ಸಿಗ್ನಲ್‌ ಅಳವಡಿಕೆಗೆ ಮುಂದಾಗಿಲ್ಲ. ಇದರಿಂದ ಹಳೆ ಜಿಲ್ಲಾ ಧಿಕಾರಿ ಕಚೇರಿ ಬಳಿ ವಾಹನ ಸಂಚಾರ ದಟ್ಟಣೆಯಿಂದ ಅನೇಕ ಅಪಘಾತಗಳು ಸಂಭವಿಸಿದ ಉದಾಹರಣೆಗಳಿವೆ.

ಏಕಮುಖೀ ಸಂಚಾರ ಅವ್ಯವಸ್ಥೆ: ನಗರದ ರೋಟರಿ ವೃತ್ತದಿಂದ ಹಳೆ ಬಸ್‌ ನಿಲ್ದಾಣಕ್ಕೆ ಸಾಗುವ ರಸ್ತೆ ಏಕಮುಖೀ ಸಂಚಾರ ವ್ಯವಸ್ಥೆ ಹೊಂದಿದ್ದರೂ ಆಟೋ, ಟಂಟಂ ಹಾಗೂ ಬೈಕ್‌ ಸವಾರರು ವಿರುದ್ಧ ದಿಕ್ಕಿನಿಂದ ನುಗ್ಗುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಜತೆಗೆ ಆ ರಸ್ತೆಯಲ್ಲಿ ಏಕಮುಖೀ ಸಂಚಾರ ಬಿಂಬಿಸುವಂತೆ ಯಾವುದೇ ಸೂಚನಾ ಫಲಕಗಳಿಲ್ಲ. ಇದರಿಂದ ನಗರಕ್ಕೆ ಆಗಮಿಸುವ ಗ್ರಾಮೀಣ ಭಾಗದ ಜನರು ಮಾಹಿತಿ ಕೊರತೆಯಿಂದ ನುಗ್ಗಿದಾಗ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ.

Advertisement

ತಪ್ಪದ ಸಂಚಾರ ದಟ್ಟಣೆ ಕಿರಿಕಿರಿ: ನಗರದಲ್ಲಿ ಜನದಟ್ಟಣೆಯ ಪ್ರದೇಶಗಳಾದ ಗ್ರೇನ್‌ ಮಾರುಕಟ್ಟೆ, ಮಹಾತ್ಮ ಗಾಂಧಿ ವೃತ್ತ, ಹಳೆ ಬಸ್‌ ನಿಲ್ದಾಣ, ಜೆಟಿ ಮಠದ ರಸ್ತೆ, ರೋಟರಿ ವೃತ್ತದಲ್ಲಿ ಭಾರೀ ಗಾತ್ರದ ವಾಹನಗಳಿಂದ ಸಂಚಾರಕ್ಕೆ ಸಾಕಷ್ಟು ಪ್ರಮಾಣದ ತೊಂದರೆಯಾಗುತ್ತಿದೆ. ನಗರದ ಪ್ರಮುಖ ಹೋಟೆಲ್‌ಗ‌ಳು, ದೊಡ್ಡ ದೊಡ್ಡ ಅಂಗಡಿಗಳ ಮುಂದೆ ವಾಹನ ನಿಲುಗಡೆ ಇಲ್ಲದ ಕಾರಣ ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದು ಮಾಮೂಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ.

ಗದಗ ನಗರದಲ್ಲಿ ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಹಾಗೂ ಮಾರುಕಟ್ಟೆಯಲ್ಲಿ ರಸ್ತೆ ಇಕ್ಕಟ್ಟಾಗಿರುವುದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿರುತ್ತದೆ. ರೋಟರಿ ಸರ್ಕಲ್‌, ಗ್ರೇನ್‌ ಮಾರುಕಟ್ಟೆ ಪ್ರದೇಶ ಸೇರಿದಂತೆ ಇತರೆಡೆ ಸಂಚಾರ ಹಾಗೂ ಶಹರ ಠಾಣೆ ಪೊಲೀಸರು ಟ್ರಾಫಿಕ್‌ ಸಮಸ್ಯೆ ತಗ್ಗಿಸಲು ನಿರಂತರವಾಗಿ ಶ್ರಮಿಸುತ್ತಾರೆ. ವಾಹನ ಸವಾರರು, ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು. ಪಿ.ವಿ. ಸಾಲಿಮಠ, ಸಿಪಿಐ, ಗದಗ ಶಹರ ಠಾಣೆ

ಗದಗ-ಬೆಟಗೇರಿ ಅವಳಿ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದುಮ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸಂಚಾರ ಕಷ್ಟಕರವಾಗಿದೆ. ಸ್ವಲ್ಪ ಜಾಗೃತಿ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ, ಪೊಲೀಸ್‌ ಇಲಾಖೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸಿಬ್ಬಂದಿ ನೇಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಶಂಕರ ಹೊಸಮನಿ, ಗದಗ ನಿವಾಸಿ

-ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next