Advertisement

ನಿಯಮ ಉಲ್ಲಂಘಿಸಿ ಸಂಚಾರ; ವಾಹನ ಸವಾರರಿಗೆ ಆತಂಕ

09:13 PM Sep 29, 2021 | Team Udayavani |

ಮಹಾನಗರ: ಮಂಗಳೂರು ನಗರ ಮತ್ತು ಸುತ್ತಲಿನ ಪ್ರದೇಶ ಸಹಿತ ದ.ಕ ಜಿಲ್ಲೆಯಲ್ಲಿ ಅನ್‌ಲಾಕ್‌ ಅನಂತರ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

Advertisement

ಅತೀ ವೇಗ, ನಿರ್ಲಕ್ಷ್ಯ ಸಹಿತ ರಸ್ತೆ ಸುರಕ್ಷೆ ನಿಯಮ ಗಳನ್ನು ಪಾಲಿಸದೆ ಇರುವುದು ಅಪಘಾತಗಳಿಗೆ ಪ್ರಮುಖ ಕಾರಣಗಳಾಗುತ್ತಿವೆ. ಇದರ ಜತೆಗೆ ಕೆಲವು ಕಡೆ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣಗೊಂಡ ರಸ್ತೆಗಳು, ಹೊಂಡಗಳಿಂದ ಕೂಡಿದ ರಸ್ತೆಗಳು, ಸೂಚನ ಫ‌ಲಕ, ದಾರಿದೀಪಗಳಿಲ್ಲದ ರಸ್ತೆಗಳು, ಸಂಚಾರ ಪೊಲೀಸರಿಲ್ಲದ ಜಂಕ್ಷನ್‌ಗಳು, ವನ್‌ವೇ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚಾರ, ಜಾಲಿ ರೈಡ್‌ ಕೂಡ ಅಪಘಾತಗಳಿಗೆ ಕಾರಣವಾಗುತ್ತಿವೆ. ಇದು ದ್ವಿಚಕ್ರ ವಾಹನ ಚಾಲಕರಲ್ಲಿ ಆತಂಕ ಮೂಡಿಸಿದೆ.

ದಿನದಿಂದ ದಿನಕ್ಕೆ ರಸ್ತೆಗಿಳಿಯುತ್ತಿರುವ ವಾಹನ ಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಸುರಕ್ಷಿತ ಚಾಲನೆಗೆ ಗಮನ ನೀಡುತ್ತಿಲ್ಲ.

ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆಯೂ ಅಪಘಾತಕ್ಕೆ ಕಾರಣವಾಗುತ್ತಿದೆ. ಹೆಲ್ಮೆಟ್‌ ಧರಿಸದಿರುವುದು, ಧರಿಸಿದರೂ ಅದರ ಲಾಕ್‌ ಅನ್ನು ಹಾಕದೇ ಇರುವುದು ಮೊದಲಾದ ನಿರ್ಲಕ್ಷ್ಯಗಳಿಂದಲೂ ದ್ವಿಚಕ್ರ ವಾಹನ ಸವಾರರು ಜೀವ ಕಳೆದುಕೊಳ್ಳುತ್ತಿದ್ದಾರೆ. ಮದ್ಯಸೇವನೆಯೂ ಹಲವಾರು ಅಪಘಾತಗಳಿಗೆ ಕಾರಣವಾಗುತ್ತಿವೆ.

ನಿರ್ಲಕ್ಷ್ಯ ತೋರಿದರೆ ಕ್ರಮ
ರಸ್ತೆ ಸುರಕ್ಷೆ ನಿಯಮಗಳನ್ನು ಪಾಲಿಸದೇ ಇರುವುದು ಅಪಘಾತಗಳಿಗೆ ಮುಖ್ಯ ಕಾರಣವಾಗುತ್ತಿದೆ. ಇದರ ಜತೆಗೆ ಹೆಲ್ಮೆಟ್‌ ಅನ್ನು ಸರಿಯಾಗಿ ಧರಿಸದೇ ಇರುವುದರಿಂದಲೂ ಕೆಲವು ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಪಘಾತಗಳನ್ನು ನಿಯಂತ್ರಿಸುವುದು ಕೂಡ ವಾಹನಗಳ ತಪಾಸಣೆಯ ಉದ್ದೇಶ. ನಿಯಮ ಉಲ್ಲಂ ಸಿ ವಾಹನ ಚಲಾಯಿಸುವವರ ಮೇಲೆ ನಿಗಾ ಇಡಲಾಗುತ್ತಿದ್ದು, ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
-ಎಂ.ಎ. ನಟರಾಜ್‌, ಎಸಿಪಿ ಸಂಚಾರ ಉಪವಿಭಾಗ, ಮಂಗಳೂರು

Advertisement

ಇದನ್ನೂ ಓದಿ:ಹಾನಗಲ್ ಉಪ ಚುನಾವಣೆ : ಮುಖಂಡರ ಜೊತೆ ಡಿಕೆಶಿ ಚರ್ಚೆ

2 ತಿಂಗಳುಗಳಲ್ಲಿ 9 ದ್ವಿಚಕ್ರ ವಾಹನ ಸವಾರರು ಸಾವು !
ಆಗಸ್ಟ್‌ ಮತ್ತು ಸೆಪ್ಟಂಬರ್‌ ತಿಂಗಳುಗಳಲ್ಲಿ ದ.ಕ. ಜಿಲ್ಲೆಯಲ್ಲಿ 40ಕ್ಕೂ ಅಧಿಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 9 ಮಂದಿ ದ್ವಿಚಕ್ರ ವಾಹನ ಸವಾರರು/ಸಹ ಸವಾರರು ಸಾವನ್ನಪ್ಪಿದ್ದಾರೆ. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲೇ 5 ಮಂದಿ ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಎಲ್ಲಿ ? ಎಷ್ಟು?
– ಆ. 8: ಗುರುಪುರದಲ್ಲಿ ಸ್ಕೂಟರ್‌ಗೆ ಕಾರು ಢಿಕ್ಕಿಯಾಗಿ ಸವಾರ ಮೃತಪಟ್ಟಿದ್ದರು.
– ಆ. 10: ಬಿಕರ್ನಕಟ್ಟೆಯಲ್ಲಿ ಲಾರಿ ಢಿಕ್ಕಿಯಾಗಿ ಸ್ಕೂಟರ್‌ ಸವಾರ ಮೃತಪಟ್ಟಿದ್ದರು.
– ಸೆ. 6: ಜಪ್ಪಿನಮೊಗರು ಮಹಾಕಾಳಿಪಡು³ ಜಂಕ್ಷನ್‌ ಬಳಿ ಬಸ್‌ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದರು.
– ಸೆ. 28ರಂದು ನಂತೂರು ಬಳಿ ಲಾರಿ ಢಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟಿದ್ದಾರೆ.
-ಆಗಸ್ಟ್‌ನಲ್ಲಿ ವಿಟ್ಲ ಬುಡೋಳಿಯಲ್ಲಿ ಲಾರಿ-ಸ್ಕೂಟರ್‌ ನಡುವೆ ಢಿಕ್ಕಿ ಸಂಭವಿಸಿ ಸವಾರ ಮೃತಪಟ್ಟಿದ್ದರು.
– ಬಂಟ್ವಾಳ ಮಣಿಹಳ್ಳ-ಸರಪಾಡಿ ರಸ್ತೆಯಲ್ಲಿ ಸೆ. 3ರಂದು ಜೀಪು-ದ್ವಿಚಕ್ರ ವಾಹನ ನಡುವೆ ನಡೆದ ಅಪಘಾತದಲ್ಲಿ ಸವಾರ ಮೃತಪಟ್ಟಿದ್ದರು.
– ಪುತ್ತೂರು ಸಮೀಪದ ಕುಂಬ್ರದಲ್ಲಿ ಟಿಪ್ಪರ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್‌ ಸವಾರ ಸೆ.4ರಂದು ಮೃತಪಟ್ಟಿದ್ದರು.
– ಸೆ. 6ರಂದು ಉಪ್ಪಿನಂಗಡಿ ಸಮೀಪ ಗಾಂಧಿಪಾರ್ಕ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ಯಾಂಕರ್‌-ಸ್ಕೂಟರ್‌ ನಡುವೆ ಢಿಕ್ಕಿ ಸಂಭವಿಸಿ ಸ್ಕೂಟರ್‌ನಲ್ಲಿದ್ದ ಬಾಲಕ ಮೃತಪಟ್ಟಿದ್ದರು.
– ಪುತ್ತೂರು ಸರ್ವೆ ಗ್ರಾಮದಲ್ಲಿ ಬೈಕ್‌ ಸ್ಕಿಡ್‌ ಆಗಿ ಓರ್ವ ಮೃತಪಟ್ಟಿದ್ದರು.

ಇರಲಿ ಎಚ್ಚರ
– ಅತೀ ವೇಗದ ಚಾಲನೆ ಸಲ್ಲದು.
– ಹೆದ್ದಾರಿಗಳಲ್ಲಿ ಸಂಚರಿಸುವಾಗ ವಿಶೇಷ ಎಚ್ಚರಿಕೆ ಅಗತ್ಯ.
– ವಾಹನಗಳು ತಿರುವು ಪಡೆಯುವಾಗ ಇಂಡಿಕೇಟರ್‌ಗಳನ್ನು ಸರಿಯಾಗಿ ಬಳಸಿ.
– ಗುಂಡಿ, ತಿರುವುಗಳಿಂದ ಕೂಡಿದ, ಅವೈಜ್ಞಾನಿಕ ರಸ್ತೆಗಳಲ್ಲಿ ಹೆಚ್ಚಿನ ಜಾಗರೂಕತೆ ಇರಲಿ.
– ಹೆಲ್ಮೆಟ್‌ ಧರಿಸುವುದು, ಸರಿಯಾಗಿ ಲಾಕ್‌ ಮಾಡುವುದನ್ನು ನಿರ್ಲಕ್ಷಿಸಬೇಡಿ.
– ಅಪಘಾತವಾದರೂ ತಮಗೆ ಏನೂ ಆಗದು ಎಂದು ಘನ ವಾಹನಗಳ ಚಾಲಕರು ನಿರ್ಲಕ್ಷ್ಯ ತೋರದಿರಿ.
– ವಾಹನಗಳ ದಾಖಲೆ ಪರಿಶೀಲನೆಗೆ ಮಾತ್ರ ಪೊಲೀಸ್‌ ತಪಾಸಣೆ ಸೀಮಿತವಾಗದೆ ರಸ್ತೆಯಲ್ಲಿ ಸಂಚರಿಸುವ ವಾಹನಗಳು ನಿಯಮ ಮೀರಿ ಓವರ್‌ಟೇಕ್‌ ಮಾಡುವುದು, ಅಪಾಯಕಾರಿಯಾಗಿ ಸಂಚರಿಸುವುದರ ಮೇಲೆ ನಿಗಾ ಇಟ್ಟು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.
– ಮಳೆ ನೀರು ನಿಂತಿರುವ ರಸ್ತೆಗಳಲ್ಲಿಯೂ ವಿಶೇಷ ಎಚ್ಚರಿಕೆ ವಹಿಸುವುದು ಅಗತ್ಯ.
– ಸಣ್ಣ ಸಣ್ಣ ಹೊಂಡಗಳು ಕೂಡ ದ್ವಿಚಕ್ರ ವಾಹನಗಳಿಗೆ ಅಪಾಯಕಾರಿಯಾಗಿದ್ದು ಕೂಡಲೇ ಹೊಂಡ ಮುಚ್ಚುವ ಕೆಲಸವನ್ನು ಸಂಬಂಧಿಸಿದ ಇಲಾಖೆಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next