Advertisement

ಶಿಥಿಲಗೊಂಡ ಸೇತುವೆಯಲ್ಲಿ ಸಂಚಾರವೇ ದುಸ್ತರ!

06:00 AM Jul 26, 2018 | |

ಸಿದ್ದಾಪುರ: ಹಳ್ಳಿ-ಪೇಟೆಗಳ ನಡುವಿನ ಸಂಪರ್ಕ ಕೊಂಡಿ ಕಳಚಿದರೆ ಹಳ್ಳಿ ನಿವಾಸಿಗಳ ಗೋಳು ಹೇಳತೀರದು. ಅಂತಹದರಲ್ಲಿ ನಾಡಿನಿಂದ ಬಹು ದೂರ ಪಶ್ಚಿಮ ಘಟ್ಟದ ತಪ್ಪಲಿನ ಕಾಡಿನ ಅಂಚಿನಲ್ಲಿ ವಾಸಿಸುವರ ಊರಿನ ಸಂಪರ್ಕಕೊಂಡಿ ಕಳಚಿದರೆ ಅವರ ಬದುಕು ಹೇಗಿರಬೇಡ? ಅಂತಹದೊಂದು ಪರಿಸ್ಥಿತಿ ಅಮಾಸೆಬೈಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟಿನ ಇರ್ಕಿಗದ್ದೆ ಕಬ್ಬಿನಾಲೆ ನಿವಾಸಿಗಳದ್ದು. ಇಲ್ಲಿಯ ನಿವಾಸಿಗಳು ಮೂಲಸೌಕರ್ಯಗಳಿಲ್ಲದೆ ಕಷ್ಟ ಅನುಭವಿಸುತ್ತಿದ್ದರೂ ಅವರ ಗೋಳು ಕೇಳುವವರೇ ಇಲ್ಲದಂತಾಗಿದೆ.

Advertisement

ತೊಂಬಟ್ಟುನಿಂದ ಇರ್ಕಿಗದ್ದೆ, ಕಬ್ಬಿನಾಲೆ ಸಂಪರ್ಕಕ್ಕಿರುವ ಏಕೈಕ ಕಿರಿದಾದ ಸೇತುವೆ ನಿರ್ಮಾಣಗೊಂಡು ನಾಲ್ಕು ದಶಕಗಳು ಕಳೆದಿದೆ. ಆ ಭಾಗದ ಪ್ರತಿಯೊಂದು ಮನೆಗಳ ಸಂಪರ್ಕಕ್ಕಿರುವ ಏಕೈಕ ಮಾರ್ಗವಿದು. 1979ರಲ್ಲಿ ತೊಂಬಟ್ಟು ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಕಿರಿದಾದ ಸೇತುವೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ದ್ವಿಚಕ್ರ ವಾಹನ ಹೊರತು ಪಡಿಸಿ ಬೇರೆ ಯಾವುದೇ ವಾಹನ ಸಂಚಾರ ಈ ಸೇತುವೆ ಮೇಲೆ ಸಾಧ್ಯವಿಲ್ಲ. ನಾಲ್ಕು ದಶಕ ಕಳೆದ ಸೇತುವೆಯ ಮೇಲೆ ನಡೆದುಕೊಂಡು ಹೋಗುವುದೆಂದರೆ ಭೀತಿ ಮೂಡಿಸುತ್ತದೆ. 

ಸಂಪರ್ಕ ರಸ್ತೆಯಲ್ಲಿಯೂ ನೀರಿನ ರಭಸ 
ತೊಂಬಟ್ಟು ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು ಕೆಲವೊಮ್ಮೆ ಸೇತುವೆಯ ಮೇಲೆ ಹರಿಯುತ್ತದೆ. ಕಿರಿದಾದ ಶಿಥಿಲಗೊಂಡ ಸೇತುವೆಗೆ ಹಿಡಿಗಂಬವಿದ್ದರೂ ಮಳೆ ನೀರಿನ ರಭಸಕ್ಕೆ ಕಿತ್ತುಹೋಗುತ್ತದೆಯೊ ಎನ್ನುವ ಆತಂಕ. ರಸ್ತೆಯಿಂದ ಸೇತುವೆ ಸ್ವಲ್ಪ ಎತ್ತರದಲ್ಲಿರುವುದರಿಂದ ಸೇತುವೆ ಸಂಪರ್ಕಿಸುವ ರಸ್ತೆಯಲ್ಲಿಯೂ ನೀರಿನ ರಭಸ ಅಧಿಕವಾಗಿರುತ್ತದೆ. ಶಾಲೆಗೆ ತೆರಳುವ ಮಕ್ಕಳನ್ನು ಮಳೆಗಾಲದಲ್ಲಿ ಹೆತ್ತವರು ಕರೆತಂದು ಸೇತುವೆ ದಾಟಿಸಬೇಕಾದ ಅನಿವಾರ್ಯತೆ ಹಾಗೂ ಆ ಭಾಗದ ಜನರ ಪ್ರತಿನಿತ್ಯದ ಕಾಯಕವಾಗಿದೆ.

ಬಲ ಕಳೆದುಕೊಂಡ ಸೇತುವೆ ಪಿಲ್ಲರ್‌ಗಳು
ನಾಲ್ಕು ದಶಕಗಳು ಕಳೆದಿರುವ ಸೇತುವೆಯ ಪಿಲ್ಲರ್‌ಗಳು ಮಳೆಯ ರಭಸಕ್ಕೆ ಬಲ ಕಳೆದುಕೊಂಡಿವೆ. ಸೇತುವೆ ಕೆಳ ಭಾಗದಲ್ಲಿನ ಸಿಮೆಂಟ್‌, ಕಲ್ಲು ಕಿತ್ತುಹೋಗಿ ಕಬ್ಬಿಣ ಸರಳುಗಳು ಮತ್ತು ಕೆಲವು ಭಾಗದಲ್ಲಿ ಕುಸಿತಗೊಂಡಿರುವುದು ಕಾಣುತ್ತಿದೆ. ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ನಡೆದಾಡುವ ಈ ಸೇತುವೆಯಲ್ಲಿ ನಿತ್ಯವೂ ಜೀವಭಯದೊಂದಿಗೆ ಸಾಗಬೇಕಾಗಿದೆ. ಅನಿವಾರ್ಯ ಎಂಬ ಕಾರಣಕ್ಕೆ  ದ್ವಿಚಕ್ರ ಸವಾರರು ಮಾತ್ರ ಇದರಲ್ಲಿ ಸಂಚರಿಸುತ್ತಾರೆ. ತೊಂಬಟ್ಟು ಪೇಟೆಗೆ ಬಸ್ಸಿನ ಸಂಪರ್ಕವಿರುವುದರಿಂದ ಜನಸಂಖ್ಯೆ ಓಡಾಟವಿರುತ್ತದೆ. ಬೇಸಗೆಯಲ್ಲಿ ಮಳೆನೀರಿನ ರಭಸ ಕಡಿಮೆಯಿರುವುದರಿಂದ ಗ್ರಾಮಸ್ಥರು ಹೊಳೆಯನ್ನಿಳಿದು ಹೋಗುತ್ತಾರೆ. 

ತೊಂಬಟ್ಟು, ಕಬ್ಬಿನಾಲೆ, ಇರ್ಕಿಗದ್ದೆ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು  ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಕ್ಸಲ್‌ ಪೀಡಿತ ಪ್ರದೇಶವೆನ್ನುವ ಹಣೆಪಟ್ಟಿ ಹೊಂದಿದ್ದರೂ ಮೂಲಸೌಕರ್ಯಗಳಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎನ್ನುವುದು ಗ್ರಾಮಸ್ಥರ ಅಳಲು. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

ಜೀವಭಯ
ಶಿಥಿಲಗೊಂಡಿರುವ ತೊಂಬಟ್ಟು, ಇರ್ಕಿಗದ್ದೆ, ಕಬ್ಬಿನಾಲೆ ಸಂಪರ್ಕ ಸೇತುವೆಯಲ್ಲಿ ನಡೆದಾಡುವುದೇ ಕಷ್ಟ. ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯರು ಜೀವಭಯದಲ್ಲಿಯೇ ಓಡಾಡುವಂತಾಗಿದೆ.
– ಹರ್ಷ ಶೆಟ್ಟಿ,ಸ್ಥಳೀಯ ನಿವಾಸಿ

ಹೊಸ ಸೇತುವೆ ಅಗತ್ಯ
ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಅವರಲ್ಲಿ ಸೇತುವೆ ಅವ್ಯವಸ್ಥೆ ಕುರಿತು ಗಮನಕ್ಕೆ ತಂದಾಗ ಎಂಜಿನಿಯರ್‌ ಅವರನ್ನು ಕಳುಹಿಸಿ ಹೊಸದಾಗಿ ಸೇತುವೆ ನಿರ್ಮಿಸುವ ಕುರಿತು ಯೋಜನೆ ರೂಪಿಸುವಂತೆ ತಿಳಿಸಿದ್ದರು. ಆದರೆ ಅದು ಅನುಷ್ಠಾನಕ್ಕೆ ಬರದೆ ಶಿಥಿಲ ಸೇತುವೆಯಲ್ಲಿ ಓಡಾಡುವಂತಾಗಿದೆ.
– ಶ್ರೀನಿವಾಸ ಪೂಜಾರಿ,ಸದಸ್ಯರು ಗ್ರಾ. ಪಂ. ಅಮಾಸೆಬೈಲು

ಹಣ ಬಿಡುಗಡೆಗೆ ಮನವಿ
ತೊಂಬಟ್ಟು ರಸ್ತೆ ಹಾಗೂ ಸೇತುವೆ ಹಾಳಾದ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಇಲಾಖೆಗೆ ವರದಿ  ಕಳುಹಿಸಿದ್ದೇವೆ. ರಸ್ತೆಯ ತುರ್ತು ಕಾಮಗಾರಿಗೆ ಜಿಲ್ಲಾಧಿಕಾರಿ ಅವರ ಹತ್ತಿರ ಹಣ ಬಿಡುಗಡೆಗೆ ಮನವಿ ಮಾಡಿದ್ದೇವೆ.  
– ಶ್ರೀಧರ್‌ ಪಾಲೇಕರ್‌, ಅಭಿಯಂತರು
ಜಿಲ್ಲಾ ಪಂಚಾಯತ್‌ ಉಡುಪಿ

ನಿರ್ಮಾಣಕ್ಕಾಗಿ ಪ್ರಸ್ತಾವನೆ 
ಅಮಾಸೆಬೈಲು- ತೊಂಬಟ್ಟು ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಮತ್ತು ತೊಂಬಟ್ಟುನಿಂದ ಇರ್ಕಿಗದ್ದೆ, ಕಬ್ಬಿನಾಲೆ ಸಂಪರ್ಕ ಸೇತುವೆ ನಿರ್ಮಾಣಕ್ಕಾಗಿ ಪ್ರಸ್ತಾವನೆ ನೀಡಿದ್ದೇನೆ. ಜಿಲ್ಲಾ ಪಂಚಾಯತ್‌ ಎಂಜಿನಿಯರಿಗೆ ಕೂಡಲೆ ಹೊಸದಾಗಿ ಸೇತುವೆ ನಿರ್ಮಿಸುವ ಕುರಿತು ಯೋಜನೆ ರೂಪಿಸುವಂತೆ ತಿಳಿಸುತ್ತೇನೆ.
– ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು
ವಿಧಾನ ಸಭಾ ಕ್ಷೇತ್ರ ಬೈಂದೂರು

– ಸತೀಶ್‌ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next