Advertisement

ಬಿ.ಸಿ.ರೋಡ್‌-ಜಕ್ರಿಬೆಟ್ಟು ಹೆದ್ದಾರಿಯಲ್ಲಿ ಸಂಚಾರ ದುಸ್ತರ

12:44 AM Jun 14, 2020 | Sriram |

ವಿಶೇಷ ವರದಿ -ಬಂಟ್ವಾಳ: ಜೂನ್‌ ಮೊದಲ ವಾರದಲ್ಲೇ ಮುಂಗಾರು ಚುರುಕುಗೊಂಡ ಪರಿಣಾಮ ಬಿ.ಸಿ.ರೋಡ್‌-ಜಕ್ರಿಬೆಟ್ಟು ಹೆದ್ದಾರಿ ಕಾಮಗಾರಿಗೆ ತೊಂದರೆಯಾಗಿದ್ದು, ಕೆಸರಿನಿಂದ ಆವೃತವಾದ ರಸ್ತೆಯಲ್ಲಿ ವಾಹನಗಳು ಎದ್ದು ಬಿದ್ದು ಸಾಗಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೆದ್ದಾರಿಯ ಕಾಮಗಾರಿ ಒಂದೂವರೆ ತಿಂಗಳು ವಿಳಂಬ ಗೊಂಡಿತ್ತು. ಪರಿಣಾಮ ಇದೀಗ ಮಳೆಯಲ್ಲೇ ಕಾಮಗಾರಿ ಸಾಗುವ ಜತೆಗೆ ಕೆಸರಿನಲ್ಲಿ ವಾಹನಗಳು ಸಾಗಬೇಕಾದ ಸ್ಥಿತಿ ಇದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಂದಾಜಿನ ಪ್ರಕಾರ ಮೇ ಅಂತ್ಯಕ್ಕೆ ಒಂದು ಹಂತದ ಕಾಮಗಾರಿ ಮುಗಿಯಬೇಕಿತ್ತು. ಆದರೆ ಲಾಕ್‌ಡೌನ್‌ನಿಂದ ಜೂನ್‌ ಅಂತ್ಯಕ್ಕೆ ಮುಗಿಸುವ ಆಲೋಚನೆಯಲ್ಲಿದೆ.

ಬಿ.ಸಿ.ರೋಡ್‌ನಿಂದ ಜಕ್ರಿಬೆಟ್ಟುವರೆಗೆ ಕಾಂಕ್ರೀಟ್‌ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆಯನ್ನು ಸಂಪೂರ್ಣ ಅಗೆದು ಮಣ್ಣು ತುಂಬಿಸುವ ಹಾಗೂ ತೆರವುಗೊಳಿಸುವ ಕಾಮಗಾರಿ ನಡೆಸಲಾಗಿದೆ. ಹೆದ್ದಾರಿಯ ಬಹುತೇಕ ಕಡೆ ಕಾಂಕ್ರೀಟ್‌ ಬೆಡ್‌ ಹಾಕಿ, ಕೆಲವೆಡೆ ಕಾಂಕ್ರೀಟ್‌ ಕಾಮಗಾರಿಯೂ ನಡೆಸಲಾಗಿದೆ. ಬಿ.ಸಿ.ರೋಡ್‌ನಿಂದ ಭಂಡಾರಿ ಬೆಟ್ಟುವರೆಗೆ ಪ್ರಸ್ತುತ ಹೆದ್ದಾರಿ ಒಂದು ಬದಿ ಸಂಪೂರ್ಣ ಕೆಸರಿನಿಂದ ಕೂಡಿದೆ. ಹೀಗಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಕಾಂಕ್ರೀಟ್‌ ಕಾಮಗಾರಿ ಅಂತ್ಯಗೊಳ್ಳುವ ಜಕ್ರಿ ಬೆಟ್ಟುನಲ್ಲೂ ಪ್ರಸ್ತುತ ಮಣ್ಣು ಹಾಕಿರುವ ಪ್ರದೇಶಗಳಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿವೆ.

ನೀರು ಹರಿಯುವುದಕ್ಕೂ ಅಡ್ಡಿ
ಹೆದ್ದಾರಿಯ ಹಿಂದಿನ ಚಿತ್ರಣ ವನ್ನೇ ಬದಲಿಸಿ ಕಾಮಗಾರಿ ಸಾಗುತ್ತಿರುವುದರಿಂದ ಹಿಂದಿನ ಚರಂಡಿ ಗಳು ಮುಚ್ಚಿ ನೀರು ಹರಿಯುವುದಕ್ಕೂ ತೊಂದರೆ ಯುಂಟಾಗುತ್ತಿದೆ.

ಬಂಟ್ವಾಳ ವೆಂದರೆ ಮೊದಲೇ ನೆರೆಬಾಧಿತ ಪ್ರದೇಶವಾಗಿದ್ದು, ಸ್ಥಳೀಯರು ಕೃತಕ ನೆರೆಯ ಆತಂಕ ದಲ್ಲಿದ್ದಾರೆ. ಹೆದ್ದಾರಿಯ ಕೆಸರು ಕೆಲವೊಂದೆಡೆ ಮನೆಗೆ ತೆರಳುವುದಕ್ಕೂ ಅಡ್ಡಿಯಾಗಿದೆ. ವಾಹನಗಳನ್ನು ಮನೆಗೆ ಕೊಂಡು ಹೋಗಲಾಗದೆ ಬೇರೆಡೆ ನಿಲ್ಲಿಸುವ ಪರಿಸ್ಥಿತಿ ಇದೆ. ಹೀಗಾಗಿ ಒಂದು ಹಂತದ ಕಾಮಗಾರಿ ಮುಗಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಜತೆಗೆ ಸಮಸ್ಯೆಗಳಿಗೂ ಮುಕ್ತಿ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

7 ಮೀ. ಮುಗಿಯಬೇಕಿತ್ತು
ಬಿ.ಸಿ.ರೋಡ್‌ನಿಂದ ಜಕ್ರಿಬೆಟ್ಟುವರೆಗಿನ 3.85 ಕಿ.ಮೀ.ಅಂತರದಲ್ಲಿ ಚತುಷ್ಪಥ ಕಾಂಕ್ರೀಟ್‌ ಹೆದ್ದಾರಿ ನಿರ್ಮಾಣಗೊಳ್ಳಲಿದ್ದು, ಅದರ ಅಗಲ 14 ಮೀ. ಹೆದ್ದಾರಿ ಇಲಾಖೆಯು ಮಳೆಗಾಲಕ್ಕೆ ಮುಂಚಿತವಾಗಿ 7 ಮೀ. ಹೆದ್ದಾರಿಯ ಕಾಮಗಾರಿಯನ್ನು ಮುಗಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಕುರಿತು ಗುತ್ತಿಗೆದಾರರಿಗೆ ಸೂಚನೆಯನ್ನೂ ನೀಡಿತ್ತು. ಆದರೆ ಲಾಕ್‌ಡೌನ್‌ ಪರಿಣಾಮದಿಂದ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಸಾಗಲಿಲ್ಲ. ಮತ್ತೂಂದೆಡೆ ಜೂನ್‌ ಪ್ರಾರಂಭದಲ್ಲೇ ಮುಂಗಾರು ಆಗಮಿಸಿದೆ. ಹೀಗಾಗಿ ಜೂನ್‌ ಅಂತ್ಯದೊಳಗೆ 7 ಮೀ. ಅಗಲದ ಕಾಂಕ್ರೀಟ್‌ ಕಾಮಗಾರಿಯನ್ನು ಮುಗಿಸುವ ನಿಟ್ಟಿನಲ್ಲಿ ಕಾಮಗಾರಿ ಸಾಗುತ್ತಿದೆ ಎಂದು ರಾ.ಹೆ.ಅಧಿಕಾರಿಗಳು ಹೇಳುತ್ತಾರೆ.

ವಾಹನ ಸಂಚಾರಕ್ಕೆ ಅವಕಾಶ
ಲಾಕ್‌ಡೌನ್‌ನಿಂದ ಒಂದಷ್ಟು ಸಮಯ ಕಾಮಗಾರಿ ನಿಂತು ಹೋದ ಪರಿಣಾಮ ತೊಂದರೆಯುಂಟಾಗಿದೆ. ಜಕ್ರಿಬೆಟ್ಟುವರೆಗಿನ ಚತುಷ್ಪಥ ಹೆದ್ದಾರಿಯ ಒಂದು ಬದಿಯ 7 ಮೀ. ರಸ್ತೆಯನ್ನು ಮಾಸಾಂತ್ಯ ದೊಳಗೆ ಮುಗಿಸಿ, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದ್ದೇವೆ. ಬಳಿಕ ಮತ್ತೊಂದು ಬದಿಯ ಕಾಮಗಾರಿ ಮುಂದುವರಿಸುತ್ತೇವೆ.
– ರಮೇಶ್‌, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next