Advertisement

ಸಾರಿಗೆ ಸೌಲಭ್ಯ ಕಲ್ಪಿಸಲು ತಾಕೀತು

10:13 AM Jan 01, 2019 | Team Udayavani |

ಸುರಪುರ: ತಾಲೂಕಿನ ವಿವಿಧ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲ ಎಂಬ ಆರೋಪ ಎಲ್ಲಡೆ ಕೇಳಿ ಬರುತ್ತಿದೆ. ಮೇಲಾಗಿ ಅವಧಿ ಮುಗಿದಿರುವ ಹಳೇ ಬಸ್‌ಗಳನ್ನು ಓಡಿಸುತ್ತಿದ್ದೀರಿ. ಇದರಿಂದ ಸಾರಿಗೆ ಸಂಚಾರದಲ್ಲಿ ತೊಂದರೆ ಆಗುತ್ತಿರುವ ಬಗ್ಗೆ ಆರೋಪ ಕೇಳಿ ಬರುತ್ತಿವೆ ಎಂದು ಶಾಸಕ
ರಾಜುಗೌಡ ಸಾರಿಗೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ನಗರದ ಬಸ್‌ ಘಟಕ್ಕೆ ಸೋಮವಾರ ಭೇಟಿ ನೀಡಿದ ಅವರು, ಸಾರಿಗೆ ಸಂಚಾರದಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ಚರ್ಚಿಸಿದರು. ಬಸ್‌ ಘಟಕದಲ್ಲಿ ಬಹುತೇಕ ಅವಧಿ ಮುಗಿದಿರುವ ಬಸ್‌ ಓಡಿಸುತ್ತಿದ್ದೀರಿ, ಮೊದಲೆ ಗುಡ್ಡಗಾಡು ಪ್ರದೇಶ ಆಗಿರುವುದರಿಂದ ಬಸ್‌ ಬೆಟ್ಟ ಹತ್ತದೆ ಎಲ್ಲೆಂದರಲ್ಲಿ ನಿಂತು ಬಿಡುತ್ತಿವೆ ಎಂದು ಘಟಕದ ವ್ಯವಸ್ಥಾಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟಕ ವ್ಯಸ್ಥಾಪಕರಿಂದ ಸಮಗ್ರ ಮಾಹಿತಿ ಪಡೆದ ಅವರು, ಘಟಕದಲ್ಲಿ ಒಟ್ಟು 100 ಬಸ್‌ಗಳಿದ್ದು, ಆ ಪೈಕಿ 13 ಹೊಸ ಬಸ್‌ ಬಿಟ್ಟರೆ ಉಳಿದೆಲ್ಲ ಹಳೆಯ ಬಸ್‌ಗಳೆ, ಅದರಲ್ಲಿ ವಿಶೇಷವಾಗಿ 32 ಬಸ್‌ಗಳು 9ರಿಂದ 11 ಲಕ್ಷ ಕಿ.ಮೀಟರ್‌ವರೆಗೆ ಓಡಿವೆ. ಅವುಗಳ ಅವಧಿ ಮುಗಿದು ಹೋಗಿವೆ.

ಇಂತಹ ಬಸ್‌ ಓಡಿಸುತ್ತಿರುವುದು ಆಶ್ಚರ್ಯದ ಸಂಗತಿ ಎಂದು ಅಚ್ಚರಿ ವ್ಯಕ್ತಪಡಿಸಿದ ಅವರು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ರವಿಕುಮಾರ ಅವರನ್ನು ತರಾಟೆಗೆ ತೆಗೆದುಕೊಂಡರು. ಕುಪಿತಗೊಂಡ ಶಾಸಕರು ಸಾರಿಗೆ ಇಲಾಖೆ ಜಿಲ್ಲಾಧಿಕಾರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಹೊಸ ಬಸ್‌ ಕೊಡುವಲ್ಲಿ ಯಾಕೆ ತಾರತಮ್ಯ, ಏಕೆ ಅವಧಿ ಮುಗಿದಿರುವ ಬಸ್‌ ಗಳನ್ನು ಓಡಿಸದಂತೆ ನಿರ್ದೇಶನ ನೀಡಿ. ಅವಘಡ ನಡೆದರೆ ಯಾರು ಹೊಣೆ ಅವಧಿ ಮುಗಿದಿರುವ ಎಲ್ಲಾ ಬಸ್‌ಗಳನ್ನು ವಾಪಸ್‌ ಕಳುಹಿಸಿ ಹೊಸ ಬಸ್‌ ಕೊಡಿ ಎಂದು ಸೂಚಿಸಿದರು. ಈ ಬಗ್ಗೆ ಇಲಾಖೆ ಗಮನಕ್ಕೆ ತಂದಿದ್ದೇನೆ. ಎರಡು ದಿನಗಳ ಒಳಗಾಗಿ ನಾಲ್ಕು ಹೊಸ ಬಸ್‌ ಕಳುಹಿಸುವುದಾಗಿ ಜಿಲ್ಲಾಧಿಕಾರಿ ದೂರವಾಣಿಯಲ್ಲಿ ಭರವಸೆ ನೀಡಿದರು.

ನಂತರ ಸಿಬ್ಬಂದಿಗಳೊಂದಿಗೆ ಹಲವಾರು ಸಮಸ್ಯೆ ಕುರಿತು ಚರ್ಚಿಸಿದರು. ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿರುವ ನೀರಿಕ್ಷಕ ಗಿರೀಶ ಅವರನ್ನು ವರ್ಗಾಹಿಸಿ ದೀರ್ಘ‌ ರಜೆ ಮೇಲೆ ಬಿಡುಗಡೆಗೊಳಸುವಂತೆ ಘಟಕ ವ್ಯವಸ್ಥಾಕ ದಿಲೀಪಸಿಂಗ್‌ ಠಾಕೂರ ಅವರಿಗೆ ಸೂಚಿಸಿದರು. ಗಿರೀಶ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಚಿವರು ಮತ್ತು ಸಾರಿಗೆ ಇಲಾಖೆ ವ್ಯವಸ್ಥಾಪಕರಿಗೆ ತಾವು ದೂರು ಸಲ್ಲಿಸುವುದಾಗಿ ತಿಳಿಸಿದರು. ಬಸ್‌ಗಳ ಸಮಸ್ಯೆ ಬಗ್ಗೆ ಗಮನಕ್ಕೆ ತಂದರೆ ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಹೊಸ ಬಸ್‌ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಶಾಲಾ ಕಾಲೇಜುಗಳ
ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ತಾಲೂಕಿನ ಪ್ರತಿ ಗ್ರಾಮಕ್ಕೂ ಕಡ್ಡಾಯವಾಗಿ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಘಟಕ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಅಮರಣ್ಣ ಹುಡೇದ ಮುಖಂಡರಾದ ಸಿದ್ದನಗೌಡ ಕರಿಭಾವಿ, ಗುರುರಾಜ ಗುತೇದಾರ, ರಂಗನಗೌಡ ದೇವಿಕೇರಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next