Advertisement

ಮಕ್ಕಳ ಸ್ಮರಣೆಗೆ ಗ್ರಹಣ ಹಿಡಿಸಿದ “ಟ್ರಾಫಿಕ್‌ ಧೂಳು’!

09:40 AM May 06, 2019 | Team Udayavani |

ಉಸಿರಾಡುವಾಗ ದೇಹ ಸೇರುವ ಧೂಳಿನ ಕಣ “ಪಿಎಂ-2.5′ ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೂ ಹಾಗೂ ಸಾಮಾನ್ಯ ಪ್ರದೇಶಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೂ ಹೋಲಿಕೆ ಮಾಡಿ, ಇತ್ತೀಚೆಗೆ ಅಧ್ಯಯನ ನಡೆಸಲಾಗಿದೆ. ಅದರಂತೆ ಧೂಳು ಹೆಚ್ಚಿರುವ ಭಾಗಗಳಲ್ಲಿ ಅನುತ್ತೀರ್ಣತೆ ಪ್ರಮಾಣ ಅಧಿಕವಾಗಿರುವುದು ಕಂಡುಬಂದಿದೆ.

Advertisement

ಬೆಂಗಳೂರು:
ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಮಕ್ಕಳ ಪ್ರಮಾಣ ಏರಿಕೆ ಹಾಗೂ ಸಂಚಾರದಟ್ಟಣೆ ಹೆಚ್ಚಳ ಇವೆರಡೂ ಎತ್ತಣ ಮಾಮರ ಎತ್ತಣ ಕೋಗಿಲೆ? ಆದರೂ ಇವುಗಳಿಗೆ ಒಂದಕ್ಕೊಂದು ಸಂಬಂಧ ಇದೆಯಾ? “ನಿಕಟ ಸಂಬಂಧ ಇದೆ ಹಾಗೂ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಅಧ್ಯಯನವೊಂದರಲ್ಲಿ ಸಾಬೀತು ಕೂಡ ಆಗಿದೆ’ ಎನ್ನುತ್ತಾರೆ ತಜ್ಞರು!

ಉಸಿರಾಡುವಾಗ ದೇಹವನ್ನು ಸೇರುವ ಧೂಳಿನ ಕಣ “ಪಿಎಂ-2.5′ ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೂ ಹಾಗೂ ಸಾಮಾನ್ಯ ಪ್ರದೇಶಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೂ ಹೋಲಿಕೆ ಮಾಡಿ, ಇತ್ತೀಚೆಗೆ ಅಧ್ಯಯನ ನಡೆಸಲಾಗಿದೆ. ಅದರಂತೆ ಧೂಳು ಹೆಚ್ಚಿರುವ ಭಾಗಗಳಲ್ಲಿ ಅನುತ್ತೀರ್ಣ ಪ್ರಮಾಣ ಅಧಿಕವಾಗಿರುವುದು ಕಂಡುಬಂದಿದೆ.

ಧೂಳಿನ ಕಣ ಪಿಎಂ-10 ಸಾಮಾನ್ಯವಾಗಿ ಮೂಗು ಮತ್ತು ಗಂಟಲಿನಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ಆದರೆ, ಪಿಎಂ-2.5 ಶ್ವಾಸಕೋಶದಿಂದ ರಕ್ತ ಸೇರಿಕೊಳ್ಳುತ್ತದೆ. ಆ ಮೂಲಕ ಮೆದುಳಿಗೆ ಹೋಗಿ, ಬೇಡದ ರಾಸಾಯನಿಕ ಅಂಶಗಳನ್ನು ಉತ್ಪತ್ತಿ ಮಾಡುತ್ತವೆ. ಅದರಿಂದ ಸ್ಮರಣಶಕ್ತಿ ಕಡಿಮೆ ಆಗುವುದು ಸೇರಿದಂತೆ ಹಲವು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ.

ಹಾಗಾಗಿ, ಮಕ್ಕಳ ಅನುತ್ತೀರ್ಣ ಪ್ರಮಾಣ ಹೆಚ್ಚಾಗಲು ಈ ಧೂಳಿನ ಕಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟೇ ಅಲ್ಲ, ಈ ಪಿಎಂ-2.5 ಮನುಷ್ಯನ ವರ್ತನೆ ತೀವ್ರವಾಗಿ ಬದಲಾವಣೆಗೂ ಕಾರಣವಾಗುತ್ತದೆ. ಇದರಿಂದ ಅಪರಾಧ ಚಟುವಟಿಕೆಗಳು, ಹೆಚ್ಚು ಸಿಟ್ಟು ಬರುವುದು ಮತ್ತಿತರ ರೂಪದಲ್ಲಿ ಪರಿಣಮಿಸುತ್ತದೆ ಎಂದು ನಗರದ ಖ್ಯಾತ ಶ್ವಾಸಕೋಶ ತಜ್ಞ ಡಾ.ಪರಮೇಶ್‌ ಸ್ಪಷ್ಟಪಡಿಸುತ್ತಾರೆ.

Advertisement

ನಗರದಲ್ಲೂ ಆಗಲಿ ಅಧ್ಯಯನ: ಬೆಂಗಳೂರಿನಲ್ಲೂ ಇಂತಹ ವೈಜ್ಞಾನಿಕ ಅಧ್ಯಯನದ ತುರ್ತು ಅವಶ್ಯಕತೆ ಇದೆ. ಏಕೆಂದರೆ, ಹೃದಯಾಘಾತಗಳು, ಮಧುಮೇಹ, ಅಸ್ತಮಾದಂತಹ ಗಂಭೀರ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಅದಕ್ಕೆಲ್ಲ ಸಂಚಾರದಟ್ಟಣೆಯಿಂದ ಉಂಟಾಗುತ್ತಿರುವ ಧೂಳು ಕಾರಣವಾಗಿದೆ. ಜತೆಗೆ ಹೆಚ್ಚುತ್ತಿರುವ ಕ್ರಿಮಿನಲ್‌ ಚಟುವಟಿಕೆಗಳು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರಿರುವ ಸಾಧ್ಯತೆಗಳಿವೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಇದಕ್ಕೆ ಪೂರಕವಾಗಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಾನದಂಡದ ಪ್ರಕಾರ ಪಿಎಂ-2.5 ಪ್ರತಿ ಕ್ಯುಬಿಕ್‌ ಮಿ.ಮೀ.ಗೆ 10 ಮೈಕ್ರಾನ್‌ ಇರಬಹುದು ಎಂದು ಸೂಚಿಸಿದೆ. ಆದರೆ, ಈ ಪ್ರಮಾಣದ ಒಳಗಿರುವ ವಾತಾವರಣದಲ್ಲಿ ದೇಶದಲ್ಲಿ ವಾಸ ಮಾಡುತ್ತಿರುವವರ ಸಂಖ್ಯೆ ಶೇ.0.01ರಷ್ಟಿದೆ!

“ನಗರದಲ್ಲಿ ಕಳೆದ ವಾರ ಮಾಲಿನ್ಯ ನಿಯಂತ್ರಣ ಮಂಡಳಿ ಅಳವಡಿಸಿದ ಮಾಪನ ಕೇಂದ್ರಗಳಲ್ಲಿ 117ರಿಂದ 120 ಮೈಕ್ರಾನ್‌ ತಲುಪಿರುವುದನ್ನು ಸ್ವತಃ ನಾನು ನೋಡಿದ್ದೇನೆ. ಸಾರಿಗೆ ಇಲಾಖೆಯಲ್ಲಿ ವಾಹನಗಳ ನೋಂದಣಿ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಏರಿಕೆ ಕ್ರಮದಲ್ಲಿ ಸಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಯನದ ಅವಶ್ಯಕತೆ ಇದೆ,’ ಎಂದು ಡಾ.ಪರಮೇಶ್‌ ಪ್ರತಿಪಾದಿಸುತ್ತಾರೆ.

ನಿತ್ಯ 400 ಸಾವು: ಜಾಗತಿಕ ಮಟ್ಟದಲ್ಲಿ ಸಂಭವಿಸುತ್ತಿರುವ ಅಕಾಲಿಕ ಸಾವುಗಳಿಗೆ ಕಾರಣವಾಗುತ್ತಿರುವ ಹಲವು ಅಂಶಗಳಲ್ಲಿ ಪಿಎಂ-2.5 ಧೂಳಿನ ಕಣಗಳು 6ನೇ ಪ್ರಮುಖ ಅಂಶಗಳಾಗಿವೆ ಎಂದು ಸ್ಟೇಟ್‌ ಆಫ್ ಗ್ಲೋಬಲ್‌ ಏರ್‌ ಸಂಸ್ಥೆಯು 2018ರಲ್ಲಿ ಹೊರತಂದ ವರದಿಯೊಂದರಲ್ಲಿ ಉಲ್ಲೇಖೀಸಿದೆ. ಆರೋಗ್ಯ ಮಾತ್ರವಲ್ಲ; ಅಪಘಾತಗಳ ಮೂಲಕವೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಂಚಾರದಟ್ಟಣೆ ಬಲಿ ಪಡೆಯುತ್ತಿದೆ.

ಭಾರತೀಯ ರಸ್ತೆಗಳಲ್ಲಿ ಪ್ರತಿ ದಿನ 400 ಜನ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ವಿಶ್ವದಲ್ಲಿ ಹೀಗೆ ರಸ್ತೆ ಅಪಘಾತಗಳಲ್ಲಿ ಗಾಯಗೊಂಡು ಸಾವನ್ನಪ್ಪುವವರ ಪೈಕಿ ಎರಡನೇ ಅತಿ ಹೆಚ್ಚು 5-29 ವರ್ಷದ ಒಳಗಿನವರಾಗಿರುತ್ತಾರೆ (2002ರ ಪ್ರಕಾರ) ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಆಶಿಶ್‌ ವರ್ಮ ತಿಳಿಸುತ್ತಾರೆ.

ಹೃದಯಾಘಾತ, ಅವಧಿಗೆ ಮುನ್ನ ಹೆರಿಗೆ ಹೆಚ್ಚಳ: ಏಷಿಯಾದ ಅತಿದೊಡ್ಡ ಹೃದ್ರೋಗ ಆಸ್ಪತ್ರೆ ಜಯದೇವವೊಂದರಲ್ಲೇ ಕಳೆದ ಐದು ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಸರಾಸರಿ ಶೇ. 22ರಷ್ಟು ಏರಿಕೆಯಾಗಿರುವುದು ಕಂಡುಬಂದಿದೆ. ಇವರಲ್ಲಿ ಬಹುತೇಕರು 40 ವರ್ಷದ ಒಳಗಿನವರಾಗಿದ್ದಾರೆ. ಅಂದಹಾಗೆ ಹೀಗೆ ಹೃದಯಾಘಾತಕ್ಕೀಡಾದವರಾರೂ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಿಂದ ಬಳಲುತ್ತಿರುವವರಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಅಷ್ಟೇ ಅಲ್ಲ, ಮಹಿಳೆಯರು ಅದರಲ್ಲೂ ಯುವತಿಯರಲ್ಲಿ ಋತುಚಕ್ರದ ಅವಧಿಗೆ ಮುನ್ನ ಮತ್ತು ನಂತರ ಅಸ್ತಮಾ ಕಂಡುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಈ ಪ್ರಮಾಣವು ಶೇ. 20ರಷ್ಟು ಹೆಚ್ಚಳವಾಗಿದೆ. ಇನ್ನು ವಿಶ್ವದಲ್ಲಿ ಹೆಚ್ಚು ವಾಹನದಟ್ಟಣೆ ಇರುವ ಮಹಾನಗರಗಳಲ್ಲಿ ಒಂಬತ್ತು ತಿಂಗಳು ಪೂರ್ಣಗೊಳ್ಳುವ ಶೇ. 30ರಷ್ಟು ಗರ್ಭಿಣಿಯರಿಗೆ ಹೆರಿಗೆ ಆಗುತ್ತಿದೆ. ಇನ್ನು ಕೆಲವರಲ್ಲಿ ಅವಧಿ ಪೂರ್ಣಗೊಂಡ ನಂತರ ಹೆರಿಗೆ ಆಗಿದ್ದರೂ ಮಗುವಿನ ತೂಕ ಕಡಿಮೆ ಇರುತ್ತದೆ ಎಂದು ಡಾ.ಪರಮೇಶ್‌ ಮಾಹಿತಿ ನೀಡುತ್ತಾರೆ.

ಇದಕ್ಕೆ ಕಾರಣ ಪಿಎಂ-2.5. ಈ ಧೂಳಿನ ಕಣಗಳು ಗರ್ಭಿಣಿಯ ದೇಹವನ್ನು ಸೇರಿ, ರಕ್ತ ಚಲನೆ ಸರಿಯಾಗಿ ಆಗುವುದಿಲ್ಲ. ಅದು ಹುಟ್ಟುವ ಮಗುವಿನ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ತೂಕ ಕಡಿಮೆ ಇರುವ ಮಗು ಶಾಶ್ವತ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತದೆ ಎಂದೂ ಅವರು ಹೇಳುತ್ತಾರೆ.

ಶೇ.55ರಷ್ಟು ಹಣ ಅಸ್ತಮಾ ಮುಕ್ತಿಗೆ!: ದೇಶದಲ್ಲಿ ಆರೋಗ್ಯಕ್ಕಾಗಿ ಮಾಡುವ ಖರ್ಚು-ವೆಚ್ಚದಲ್ಲಿ ಬರೀ ಅಸ್ತಮಾದಿಂದ ಮುಕ್ತಿ ಪಡೆಯಲಿಕ್ಕಾಗಿಯೇ ಶೇ.55ರಷ್ಟು ಹಣ ಹೋಗುತ್ತದೆ! ಈ ಅಸ್ತಮಾಕ್ಕೆ ಗುರಿಯಾಗುತ್ತಿರುವವರಲ್ಲಿ ಮಕ್ಕಳೇ ಹೆಚ್ಚಾಗಿದ್ದಾರೆ. ಇನ್ನು ಪ್ರಪಂಚದಲ್ಲಿ ಆರೋಗ್ಯ ಬಜೆಟ್‌ನಲ್ಲಿ ಶೇ. 97ರಷ್ಟು ಮೊತ್ತ ದಿಢೀರ್‌ ಕಾಯಿಲೆಗಳ ಚಿಕಿತ್ಸೆಗೆ ಖರ್ಚಾಗುತ್ತದೆ. ಉದಾಹರಣೆಗೆ ಮೂತ್ರಪಿಂಡ ಕಸಿ, ಹೃದಯ ಕಸಿ ಇತ್ಯಾದಿ. ಶೇ. 3ರಷ್ಟು ಮೊತ್ತ ಮಾತ್ರ ಮುಂಚಿತವಾಗಿ ತಡೆಗಟ್ಟುವಿಕೆಗೆ ಖರ್ಚಾಗುತ್ತಿದೆ ಎಂದು ವೈದ್ಯರು ತಿಳಿಸುತ್ತಾರೆ.

ಮಾಪನ ಉಪಕರಣ ಗುಣಮಟ್ಟದ್ದಾಗಿರಲಿ: ವಾಯುಮಾಲಿನ್ಯ ಪ್ರಮಾಣವನ್ನು ಅಳೆಯುವ ಉಪಕರಣಗಳು ಗುಣಮಟ್ಟದ್ದಾಗಿರಬೇಕು ಎಂದು ಪರಿಸರ ತಜ್ಞರು ಅಭಿಪ್ರಾಯಪಡುತ್ತಾರೆ. ಮಳೆ ಮಾಪನ ಅಳೆಯುವಂತೆಯೇ ವಾಯುಮಾಲಿನ್ಯ ಅಳೆಯುವ ಮಾಪನಗಳಿಗೂ ಒಂದು ಗುಣಮಟ್ಟ ನಿಗದಿಪಡಿಸಲಾಗಿದೆ. ಅದರಂತೆ ಗುಣಮಟ್ಟದ ಮಾಪನ ಉಪಕರಣಗಳನ್ನು ನಗರದಲ್ಲಿ ಅಳವಡಿಸಬೇಕು. ಆಗ ನಿರ್ದಿಷ್ಟ ಫ‌ಲಿತಾಂಶ ಕಂಡುಕೊಳ್ಳಬಹುದು. ಆ ಉಪಕರಣಗಳು ದುಬಾರಿಯೂ ಆಗಿದ್ದು, ಸುಮಾರು ರೂ. 3 ಲಕ್ಷಕ್ಕೂ ಅಧಿಕ ಇವೆ. ಪ್ರಸ್ತುತ ಕಬ್ಬನ್‌ ಉದ್ಯಾನದಲ್ಲಿ ಗುಣಮಟ್ಟದ ಮಾಪನ ಉಪಕರಣಗಳನ್ನು ಅಳವಡಿಸಲಾಗಿದೆ.

ಆರ್ಥಿಕ ಹೊರೆಗೂ ಕಾರಣ: ವಾಯುಮಾಲಿನ್ಯದಿಂದ ಕಾಣಿಸಿಕೊಳ್ಳುತ್ತಿರುವ ಕಾಯಿಲೆಗಳು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮೇಲೆ ಆರ್ಥಿಕ ಹೊರೆಗೂ ಕಾರಣವಾಗುತ್ತಿವೆ. ಇನ್ನು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ ಎಷ್ಟೋ ಜನ ಕುಟುಂಬಗಳ ಆಧಾರ ಸ್ತಂಭ ಆಗಿರುತ್ತಾರೆ. ನಂತರದ ದಿನಗಳಲ್ಲಿ ಅವಲಂಬಿತರ ಸ್ಥಿತಿ ಚಿಂತಾಜನಕ ಆಗಿರುತ್ತದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next