Advertisement

ಪದ್ಮನಾಭನಗರದ ಟ್ರಾಫಿಕ್‌ಗೆ ಮುಕ್ತಿ

12:10 PM Feb 16, 2017 | Team Udayavani |

ಬೆಂಗಳೂರು: ಪದ್ಮನಾಭನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ (ದೇವೇಗೌಡ ಪೆಟ್ರೋಲ್‌ ಬಂಕ್‌) ವರ್ತುಲ ರಸ್ತೆಗೆ ಬಿಬಿಎಂಪಿ ನಿರ್ಮಿಸಿರುವ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಂಚಾರಕ್ಕೆ ಮುಕ್ತಗೊಳಿಸಿದರು.

Advertisement

ನಂತರ ಮಾತನಾಡಿದ ಅವರು, “ಈ ಭಾಗದ ಅತಿ ಹೆಚ್ಚು ವಾಹನ ದಟ್ಟಣೆಯ ಜಂಕ್ಷನ್‌ಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತವೂ ಒಂದಾಗಿತ್ತು. ಹೀಗಾಗಿ ಇಲ್ಲಿ ಮೇಲ್ಸೇತುವೆಯೊಂದರ ಅಗತ್ಯವಿತ್ತು. ಅದರಂತೆ 2014ರಲ್ಲಿ ನಾನೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದೆ. ಇದೀಗ ಕಾಮಗಾರಿ ಪೂರ್ಣಗೊಂಡಿದೆ.  ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆಗೊಳಿಸಲಾಗಿದೆ’ ಎಂದು ಹೇಳಿದರು.

“ಒಟ್ಟು 35 ಕೋಟಿ ರೂ. ವೆಚ್ಚದಲ್ಲಿ 361 ಮೀಟರ್‌ ಉದ್ದದ ಮೇಲ್ಸೇತುವೆ ನಿರ್ಮಾಣಗೊಂಡಿದೆ. ನಾಲ್ಕು ಪಥದ ಮೇಲ್ಸೇತುವೆ ನಿರ್ಮಾಣದಿಂದ ಈ ಜಂಕ್ಷನ್‌ನಲ್ಲಿ ಹಾದುಹೋಗುವ ಶೇ.68ರಷ್ಟು ವಾಹನಗಳು ಇನ್ನು ಮುಂದೆ ಮೇಲ್ಸೇತುವೆಯಲ್ಲಿ ಸಾಗಲಿವೆ. ಹೀಗಾಗಿ ವಾಹನ ದಟ್ಟಣೆ ಕಡಿಮೆಯಾಗಿ ಸಂಚಾರ ಸುಗಮವಾಗಲಿದೆ” ಎಂದರು.

ಸಚಿವ ಕೆ.ಜೆ.ಜಾರ್ಜ್‌, ರಾಮಲಿಂಗಾರೆಡ್ಡಿ, ಮೇಯರ್‌ ಜಿ.ಪದ್ಮಾವತಿ, ಮಾಜಿ ಡಿಸಿಎಂ ಆರ್‌.ಅಶೋಕ್‌, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ಆಡಳಿತ ಪಕ್ಷದ ನಾಯಕ ಮೊಹಮ್ಮದ್‌ ರಿಜ್ವಾನ್‌, ಆಯುಕ್ತ ಮಂಜುನಾಥ ಪ್ರಸಾದ್‌ ಇತರರು ಉಪಸ್ಥಿತರಿದ್ದರು.

ವಿಳಂಬವಾಗಿ ಪೂರ್ಣಗೊಂಡ ಕಾಮಗಾರಿ: ಕನಕಪುರ ರಸ್ತೆ (ರಾಷ್ಟ್ರೀಯ ಹೆದ್ದಾರಿ 209) ಹಾಗೂ ಮೈಸೂರು ರಸ್ತೆ (ರಾಜ್ಯ ಹೆದ್ದಾರಿ 17) ಸಂಪರ್ಕಿಸುವ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ವಾಹನ ದಟ್ಟಣೆ ತೀವ್ರವಾಗಿತ್ತು. ಆ ಹಿನ್ನೆಲೆಯಲ್ಲಿ 32 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲು 2009ರಲ್ಲಿ ಸರ್ಕಾರ ಅನುಮತಿ ನೀಡಿದ್ದರೂ ಕಾಮಗಾರಿ ಆರಂಭವಾಗಿದ್ದು, 2014ರಲ್ಲಿ. 18 ತಿಂಗಳಲ್ಲಿ ಪೂರ್ಣಗೊಳ್ಳಬೇಕೆಂಬ ನಿಯಮವಿದ್ದರೂ ವಿಳಂಬವಾಗಿ ಕಾಮಗಾರಿ ಪೂರ್ಣಗೊಂಡಿದೆ.

Advertisement

ಸಾರ್ವಜನಿಕರ ಅಸಮಾಧಾನ: ನಿಧಾನಗತಿಯಲ್ಲಿ ನಡೆದಿದ್ದ ಕಾಮಗಾರಿ ಪೂರ್ಣಗೊಂಡು ಮೇಲ್ಸೇತುವೆ ನಿರ್ಮಾಣವಾಗಿರುವುದು ಸ್ಥಳೀಯರಲ್ಲಿ ಸಮಾಧಾನ ತಂದಿದೆ. ಆದರೆ ಸಂಪರ್ಕ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸದ ಕಾರಣ ಓಡಾಟಕ್ಕೆ ಕಿರಿಕಿರಿ ಮುಂದುವರಿದಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ಸಿಗ್ನಲ್‌ ಮುಕ್ತ ಕಾರಿಡಾರ್‌ಗೆ ಗ್ರೇಡ್‌ ಸೆಪರೇಟರ್‌: “ನಾಯಂಡನಹಳ್ಳಿ ಜಂಕ್ಷನ್‌ನಿಂದ ಸಿಲ್ಕ್ಬೋರ್ಡ್‌ ಜಂಕ್ಷನ್‌ವರೆಗೆ ಸಿಗ್ನಲ್‌ ಮುಕ್ತ ಕಾರಿಡಾರ್‌ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಆಯ್ದ ಜಂಕ್ಷನ್‌ಗಳಲ್ಲಿ ಗ್ರೇಡ್‌ ಸೆಪರೇಟರ್‌ ನಿರ್ಮಿಸಲಾಗುತ್ತಿದೆ. ಅದರಂತೆ ಇದೇ ಮಾರ್ಗದ ಹಲವು ಜಂಕ್ಷನ್‌ಗಳಲ್ಲಿ ಗ್ರೇಡ್‌ ಸೆಪರೇಟರ್‌ಗಳು ನಿರ್ಮಾಣವಾಗಲಿದ್ದು, ಈಗಾಗಲೇ ಕೆಲವೆಡೆ ಕೆಲಸ ಆರಂಭವಾಗಿದೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೇಲ್ಸೇತುವೆ ವಿವರ
* 361.5 ಮೀ. ಮೇಲ್ಸೇತುವೆ ಉದ್ದ 
* 4.5 ಮೀ. ಸೇತುವೆಯ ಎತ್ತರ
* 35.8 ಕೋಟಿ ರೂ. ಕಾಮಗಾರಿ ವೆಚ್ಚ 
* 278.28 ಚ.ಮೀ. ಸ್ವಾಧೀನಪಡಿಸಿಕೊಂಡ ಖಾಸಗಿ ಭೂಮಿ 
* 1804.59 ಚ.ಮೀ. ಸ್ವಾಧೀನಪಡಿಸಿಕೊಂಡ ಸರ್ಕಾರಿ (ಬಿಡಿಎ) ಭೂಮಿ 
* ಟರ್ನ್ ಕೀ ಆಧಾರಿತ ಯೋಜನೆ ಯೋಜನೆಯ ಮಾದರಿ

Advertisement

Udayavani is now on Telegram. Click here to join our channel and stay updated with the latest news.

Next