Advertisement

ಮಂಗಳೂರು: ಬಾಲಕನ ಸಹಿತ ಕಾರನ್ನು ಟೋಯಿಂಗ್ ಮಾಡಿದ ಸಂಚಾರ ಪೊಲೀಸರು!

10:08 AM Dec 25, 2020 | keerthan |

ಮಂಗಳೂರು: ಗುರುವಾರ ಸಂಚಾರ ಪೊಲೀಸರು 9 ವರ್ಷದ ಬಾಲಕನ ಸಹಿತ ಕಾರನ್ನು ಟೋಯಿಂಗ್‌ ಮಾಡಿ ಠಾಣೆಗೆ ಎಳೆದೊಯ್ದ ಘಟನೆ ನಗರದಲ್ಲಿ ನಡೆದಿದೆ.

Advertisement

ಮಿಜಾರಿನ ದಿವ್ಯಾ ಅವರು ಚಾಲಕ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮಲ್ಲಿಕಟ್ಟೆಗೆ ಬಂದಿದ್ದರು. ಕಾರನ್ನು ವಸತಿ ಸಮುಚ್ಚಯವೊಂದರ ಪಕ್ಕದಲ್ಲಿ ನಿಲ್ಲಿಸಿ ದಿವ್ಯಾ ಮತ್ತು ಅವರ ಓರ್ವ ಮಗ ಅಂಗಡಿಗೆ ತೆರಳಿದ್ದರು. ಚಾಲಕ ಮತ್ತು ದಿವ್ಯಾ ಅವರ ಕಿರಿಯ ಪುತ್ರ, ನಾಲ್ಕನೇ ತರಗತಿ ವಿದ್ಯಾರ್ಥಿ ಪ್ರಖ್ಯಾತ್‌ ಕಾರಿನಲ್ಲೇ ಇದ್ದರು. ದಿವ್ಯಾ ಅವರು ಮೊಬೈಲನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದನ್ನು ಗಮನಿಸಿದ ಚಾಲಕ ಅದನ್ನು ದಿವ್ಯಾರಿಗೆ ನೀಡಲೆಂದು ತೆರಳಿದ್ದಾಗ ಪೊಲೀಸರು ಮಗುವಿನ ಸಹಿತ ಕ್ಷಣಮಾತ್ರದಲ್ಲಿ ಕಾರನ್ನು ಟೋಯಿಂಗ್‌ ಮಾಡಿದ್ದರು.

ಗಾಬರಿಗೊಂಡ ಚಾಲಕ ಮತ್ತು ದಿವ್ಯಾ ಹಲವೆಡೆ ಮಗುವಿಗಾಗಿ ಹುಡುಕಾಡಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಒಂದು ಕಡೆ ಸಿಸಿ ಕೆಮರಾ ಪರಿಶೀಲಿಸಿದಾಗ ಕದ್ರಿ ಪೊಲೀಸರು ಟೋಯಿಂಗ್‌ ಮಾಡಿರುವುದು ಗೊತ್ತಾಯಿತು. ಪೊಲೀಸರ ವರ್ತನೆಗೆ ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.

ಇದನ್ನೂ ಓದಿ:ಬಾರಾಮುಲ್ಲದಲ್ಲಿ ಭಾರತೀಯ ಸೈನ್ಯದಿಂದ ಹತ್ಯೆಯಾದ ಉಗ್ರ ಪಾಕಿಸ್ಥಾನದ ಫುಟ್ ಬಾಲ್ ಆಟಗಾರ!

ನೋ ಪಾರ್ಕಿಂಗ್‌ ಸ್ಥಳದಲ್ಲಿರಲಿಲ್ಲ

Advertisement

“ಕಾರು ನೋ ಪಾರ್ಕಿಂಗ್‌ ಸ್ಥಳದಲ್ಲಿ ಇರಲಿಲ್ಲ. ಅದು ರಸ್ತೆ ಕೂಡ ಆಗಿರಲಿಲ್ಲ. ನೋ ಪಾರ್ಕಿಂಗ್‌ ಪ್ರದೇಶದಲ್ಲಿ ಕಾರು ನಿಲ್ಲಿಸಿದರೆ ಪೊಲೀಸರು ಹೊತ್ತೂಯ್ಯುತ್ತಾರೆ ಎಂಬುದು ನನಗೆ ಗೊತ್ತಿತ್ತು. ಹಾಗಾಗಿಯೇ ನೋ ಪಾರ್ಕಿಂಗ್‌ ಅಲ್ಲದ ಜಾಗದಲ್ಲಿ ನಿಲ್ಲಿಸಿದ್ದೆವು’ ಎಂದು ಮಗುವಿನ ತಾಯಿ ದಿವ್ಯಾ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

ಉಜಿರೆ ಬಾಲಕನ ಅಪಹರಣ ಘಟನೆ ಹೇಳಿದ್ದೆ

ಉಜಿರೆಯಲ್ಲಿ ಇತ್ತೀಚೆಗೆ ನಡೆದ ಬಾಲಕನ ಅಪಹರಣ ಪ್ರಕರಣದ ಬಗ್ಗೆ ನನ್ನ ಮಕ್ಕಳಿಗೆ ಹೇಳಿದ್ದೆ. ಅಪರಿಚಿತರು ಬಂದರೆ ಹೇಗಿರಬೇಕು ಎಂದು ತಿಳಿಸಿದ್ದೆ. ಅದರಂತೆಯೇ ನನ್ನ ಮಗ ಕಾರಿನ ಬಾಗಿಲು ತೆರೆಯಲಿಲ್ಲ. ನಾವು ಕೂಡ ಭಯಭೀತರಾದೆವು. ಪೊಲೀಸರು ಅವರಿಗೆ ಖುಷಿ ಬಂದಂತೆ ಮಾಡುತ್ತಿದ್ದಾರೆ. ದಂಡ ಪಾವತಿಸಲು ಹೇಳಿದ್ದಾರೆ. ಆದರೆ ನಾನು ದಂಡ ಕಟ್ಟಲು ನಿರಾಕರಿಸಿದ್ದೇನೆ ಎಂದು ದಿವ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕಾರನ್ನು ಫ‌ುಟ್‌ಪಾತ್‌ ಮೇಲೆ ನಿಲ್ಲಿಸಿಡಲಾಗಿತ್ತು. ಗಾಜಿಗೆ ಟಿಂಟ್‌ ಕವರ್‌ ಹಾಕಲಾಗಿತ್ತು. ಹಾಗಾಗಿ ಬಾಲಕ ಇರುವುದು ಗೊತ್ತಾಗಲಿಲ್ಲ. ಪೊಲೀಸರು 15 ನಿಮಿಷ ಕಾಲ ಕಾದು ಅನಂತರ ಲಾಕ್‌ ಹಾಕಿದ್ದರು. ಅದುವರೆಗೂ ಯಾರೂ ಬಂದಿರಲಿಲ್ಲ.”

 ಎ.ನಟರಾಜ್‌, ಎಸಿಪಿ ಸಂಚಾರ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next