ನೋಯ್ಡಾ: ದಾಖಲೆ ತೋರಿಸಲು ಕೇಳಿದ್ದ ಟ್ರಾಫಿಕ್ ಪೊಲೀಸ್ ಕಾನ್ಸಟೇಬಲ್ ವೊಬ್ಬರನ್ನು ಅಪಹರಿಸಿಕೊಂಡು ಹೋಗಿರುವ ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಏನಿದು ಪ್ರಕರಣ:
ಎಲ್ಲಾ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಆರೋಪಿ ಸಚಿನ್ ರಾವಲ್ ಎಂಬಾತನ ಕಾರನ್ನು ಟ್ರಾಫಿಕ್ ಪೊಲೀಸ್ ವೀರೇಂದ್ರ ಸಿಂಗ್ ತಡೆದು ನಿಲ್ಲಿಸಿದ್ದರು. ಅಲ್ಲದೇ ದಾಖಲೆ ತೋರಿಸುವಂತೆ ಕೇಳಿದ್ದರು.
ಆಗ ರಾವಲ್ ಕಾರಿನೊಳಗೆ ಕುಳಿತುಕೊಳ್ಳುವಂತೆ ಹೇಳಿದ್ದ, ಈ ವೇಳೆ ಸಿಂಗ್ ದಾಖಲೆ ತೋರಿಸಲು ಒತ್ತಾಯಿಸಿದಾಗ, ದಿಢೀರನೆ ಕಾರಿನ ಬಾಗಿಲನ್ನು ಲಾಕ್ ಮಾಡಿ ಸುಮಾರು ಹತ್ತು ಕಿಲೋ ಮೀಟರ್ ದೂರದವರೆಗೆ ಕರೆದೊಯ್ದಿದ್ದ. ಬಳಿಕ ಟ್ರಾಫಿಕ್ ಕಾನ್ಸಟೇಬಲ್ ಸಿಂಗ್ ಅವರನ್ನು ಅಜಯ್ ಪುರ್ ಪೊಲೀಸ್ ಚೌಕಿ ಬಳಿ ಬಲವಂತವಾಗಿ ಹೊರದಬ್ಬಿ ಪರಾರಿಯಾಗಿರುವುದಾಗಿ ವರದಿ ಹೇಳಿದೆ.
ರಾವಲ್ ಗ್ರೇಟರ್ ನೋಯ್ಡಾದ ಘೋಡಿ ಬಾಚೇಡಾಗ್ರಾಮದ ನಿವಾಸಿಯಾಗಿದ್ದು, ಈತ ತನ್ನ ಕಾರಿಗೆ ನಕಲಿ ನಂಬರ್ ಅಳವಡಿಸಿಕೊಂಡು ಓಡಾಡುತ್ತಿದ್ದ. ಆದರೆ ಪೊಲೀಸ್ ಕಾನ್ಸಟೇಬಲ್ ಊರಿನ ವ್ಯಕ್ತಿಯೊಬ್ಬರ ಕಾರಿನ ನಂಬರ್ ಕೂಡಾ ಅದೇ ಆಗಿದ್ದರಿಂದ ಸಿಂಗ್ ಅನುಮಾನಗೊಂಡು ದಾಖಲೆ ತೋರಿಸಲು ಹೇಳಿದ್ದರು.
ಆರೋಪಿ ಸಚಿನ್ ರಾವಲ್ ಈ ಮಾರುತಿ ಸ್ವಿಫ್ಟ್ ಡಿಝೈರ್ ಕಾರನ್ನು ಗುರ್ಗಾಂವ್ ಶೋರೂಂನಲ್ಲಿ ಟೆಸ್ಟ್ ಡ್ರೈವ್ ಗೆ ತೆಗೆದುಕೊಂಡು ಹೋಗುವುದಾಗಿ ಹೇಳಿ ಅಪಹರಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಟ್ರಾಫಿಕ್ ಪೊಲೀಸ್ ಕಾನ್ಸಟೇಬಲ್ ಅನ್ನು ಅಪಹರಣಕ್ಕೆ ಯತ್ನಿಸಿದ ಆರೋಪದಲ್ಲಿ ಸಚಿನ್ ರಾವಲ್ ನನ್ನು ಪೊಲೀಸರು ಬಂಧಿಸಿದ್ದಾರೆ.