Advertisement

ವಾಹನ ದಟ್ಟಣೆ ಕೇಂದ್ರ ಕರಾವಳಿ ಜಂಕ್ಷ ನ್‌

02:31 PM Mar 23, 2022 | Team Udayavani |

ಉಡುಪಿ: ನಗರಕ್ಕೆ ಪ್ರವೇಶ ಕಲ್ಪಿಸುವ ಕರಾವಳಿ ಜಂಕ್ಷನ್‌ ಬಳಿ ದಿನನಿತ್ಯ ಟ್ರಾಫಿಕ್‌ ದಟ್ಟಣೆ ಕಂಡುಬರುತ್ತಿದೆ.

Advertisement

ಮಲ್ಪೆಯಂತಹ ಮೀನುಗಾರಿಕಾ ಪ್ರದೇಶ ಹಾಗೂ ಸದಾ ಚಟುವಟಿಕೆಯಿಂದ ಕೂಡಿರುವ ಈ ಭಾಗದಿಂದ ದಿನನಿತ್ಯ ಹಲವಾರು ಸರಕು ವಾಹನಗಳು, ಬಸ್‌, ಕಾರುಗಳು ಈ ಮಾರ್ಗದ ಮೂಲಕವೇ ಹಾದು ಹೋಗಬೇಕಾಗುತ್ತದೆ. ಹಾಗೇನೆ ಮಂಗಳೂರು ಮೂಲಕ ಬಂದವರೂ ಈ ರಸ್ತೆಯ ಮೂಲಕ ನಗರಕ್ಕೆ ಪ್ರವೇಶ ಪಡೆಯಬಹುದು. ಮತ್ತೂಂದು ಬದಿಯಲ್ಲಿ ಅಂಬಾಗಿಲು ಬಳಿಯಿಂದ ಬರುವ ವಾಹನಗಳು ಬನ್ನಂಜೆ, ಎಸ್‌ಪಿ ಕಚೇರಿ ಸಹಿತ ನಗರ ಪ್ರವೇಶಿಸಲು ಇದೇ ಮಾರ್ಗ. ಇತ್ತ ಉಡುಪಿ ನಗರದಿಂದ ಹೊರಹೋಗುವ ಅಂದರೆ ಮಲ್ಪೆ ಭಾಗಕ್ಕೆ ಹಾಗೂ ಕುಂದಾಪುರ ಭಾಗಕ್ಕೆ ತೆರಳಲೂ ಇದೇ ರಸ್ತೆ ಬೇಕು. ಈ ಕಾರಣದಿಂದ ಈ ಭಾಗದಲ್ಲಿ ಟ್ರಾಫಿಕ್‌ ದಿನನಿತ್ಯ ಕಂಡುಬರುತ್ತಿದೆ.

ಮೂಲಸೌಕರ್ಯ ಕೊರತೆ

ಮೇಲ್ನೋಟಕ್ಕೆ ಕಂಡುಬರುವಂತೆ ಕರಾವಳಿ ಜಂಕ್ಷನ್‌ ಭಾಗ ಇಕ್ಕಟ್ಟಿನಿಂದ ಕೂಡಿದೆ. ಸೂಕ್ತ ಬಸ್‌ ಬೇ ಕೂಡ ಈ ಭಾಗದಲ್ಲಿಲ್ಲ. ಕುಂದಾಪುರಕ್ಕೆ ತೆರಳುವ ಬಸ್‌ ಗಳು ಜಂಕ್ಷನ್‌ನಲ್ಲಿ ನಿಲ್ಲುವ ಕಾರಣ ಹಾಗೂ ಮಲ್ಪೆಗೆ ತೆರಳುವ ಬಸ್‌ಗಳು ಆ ಭಾಗದಲ್ಲಿ ನಿಲ್ಲುವ ಕಾರಣ ವಾಹನಗಳ ಚಾಲನೆ ಕಷ್ಟಕರವಾಗುತ್ತಿದೆ.

ವಿರುದ್ಧ ದಿಕ್ಕಿನಲ್ಲಿ ಸಂಚಾರ

Advertisement

ಉಡುಪಿಯಿಂದ ಶಾರದಾ ಹೊಟೇಲ್‌ ಸಹಿತ ಆ ಭಾಗಕ್ಕೆ ತೆರಳುವ ಅಂಗಡಿಗಳಿಗೆ ತೆರಳುವವರು ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡುತ್ತಿರುವುದು ಕಂಡುಬರುತ್ತಿದೆ. ಟ್ರಾಫಿಕ್‌ ಪೊಲೀಸರು ಸ್ಥಳದಲ್ಲಿದ್ದರೆ ಇಂತಹವರಿಗೆ ದಂಡ ತಪ್ಪುವುದಿಲ್ಲ. ಬೆಳಗ್ಗೆ ಹಾಗೂ ಸಂಜೆ ವೇಳೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದರೆ ಅಪಘಾತಗಳೂ ನಡೆಯುವ ಸಾಧ್ಯತೆಗಳಿರುತ್ತವೆ.

ಬೀದಿದೀಪವೂ ಮಾಯ

ಅಂಬಲಪಾಡಿ ಜಂಕ್ಷನ್‌ನಿಂದ ಸರ್ವಿಸ್‌ ರಸ್ತೆಯ ಕರಾವಳಿ ಬೈಪಾಸ್‌ ವರೆಗೆ ಹಗಲು ಹೊತ್ತಿನಲ್ಲಿ ಈ ಭಾಗದಲ್ಲಿ ಟ್ರಾಫಿಕ್‌ ದಟ್ಟಣೆಯಾದರೆ ರಾತ್ರಿ ವೇಳೆ ಬೀದಿದೀಪ ಇಲ್ಲದೆ ಪಾದಚಾರಿಗಳಿಗೆ ರಸ್ತೆ, ಹೊಂಡ, ವಾಹನಗಳು ಗೋಚರಕ್ಕೆ ಬರುತ್ತಿಲ್ಲ. ಈ ಬಗ್ಗೆ ಪ್ರತಿಭಟನೆ ನಡೆದರೂ ಆಡಳಿತ ಸ್ಪಂದಿಸಿಲ್ಲ. ಬೀದಿದೀಪ ಅಳವಡಿಕೆಗೆ ನಗರಸಭೆ ಗಮನಹರಿಸಿದರೆ ರಾತ್ರಿ ಸಂಚಾರವಾದರೂ ಸುಗಮವಾಗಲು ಸಾಧ್ಯವಿದೆ.

ದಟ್ಟಣೆ ತಪ್ಪಿಸಲು ಏನು ಮಾಡಬಹುದು?

ಮಂಗಳೂರಿನಿಂದ ಆಗಮಿಸುವ ವಾಹನಗಳು ಕರಾವಳಿ ಮೂಲಕ ಬಾರದೆ ಕಿನ್ನಿಮೂಲ್ಕಿ ಅಥವಾ ಅಂಬಾಗಿಲು ಮೂಲಕ ನಗರವನ್ನು ಪ್ರವೇಶಿಸಬಹುದು.

ಕರಾವಳಿ ಜಂಕ್ಷನ್‌ನಲ್ಲಿ ಸಿಗ್ನಲ್‌ ಅಳವಡಿಸಿದರೂ ಸಮಸ್ಯೆ ಪರಿಹಾರ ಕಾಣದ ಸ್ಥಿತಿಯಿದೆ. ಟ್ರಾಫಿಕ್‌  ಪೊಲೀಸ್‌ ಸಿಬ್ಬಂದಿ ಸಂಖ್ಯೆಯೂ ಹೆಚ್ಚಳವಾಗಬೇಕಿದೆ.

ಮಲ್ಪೆ ಭಾಗದ ರಸ್ತೆ ವಿಸ್ತರಣೆಯಾದರೆ ಬ್ಲಾಕ್‌ ತಪ್ಪಲಿದೆ.

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next