Advertisement
ಸೇತುವೆಯಲ್ಲಿ ಘನ ವಾಹನ ನಿಷೇಧದಿಂದ ಪ್ರಸ್ತುತ ಬಸ್ಸುಗಳು ಬಿ.ಸಿ.ರೋಡಿನಿಂದ ಪೊಳಲಿ ಹಾಗೂ ಕೈಕಂಬದಿಂದ ಅಡ್ಡೂರುವರೆಗೆ ಸಾಗುತ್ತಿದ್ದು, ಇದರಿಂದ ಬಸ್ಸುಗಳಿಗೆ ಟ್ರಿಪ್ ಇಲ್ಲದಾಗಿದೆ. ದಿನನಿತ್ಯ ಸುಮಾರು 300 ಕಿ.ಮೀ. ಓಡುತ್ತಿದ್ದ ಬಸ್ಸುಗಳು ಪ್ರಸ್ತುತ 170-180 ಕಿ.ಮೀ. ಓಡುತ್ತಿವೆ. ಉಳಿದ ಹೊತ್ತಿನಲ್ಲಿ ಬಸ್ಸುಗಳು ನಿಂತೇ ಇರಬೇಕಾಗಿದ್ದು, ಇಂತಹ ಟ್ರಿಪ್‌ನಿಂದ ಪ್ರಯಾಣಿಕರು ಕೂಡ ಇಲ್ಲವಾಗಿದ್ದು, ಜತೆಗೆ ಚಾಲಕ-ನಿರ್ವಾಹಕರಿಗೆ ದಿನದ ಪೂರ್ತಿ ವೇತನ ನೀಡಬೇಕಿರುವುದು ದೊಡ್ಡ ಹೊರೆಯಾಗುತ್ತಿದೆ ಎಂದು ಮಾಲಕರು ಹೇಳುತ್ತಿದ್ದಾರೆ.
ಬಿ.ಸಿ.ರೋಡು-ಪೊಳಲಿ-ಕೈಕಂಬ-ಮಂಗಳೂರು, ಬಿ.ಸಿ.ರೋಡು-ಪೊಳಲಿ-ಕೈಕಂಬ-ಬಜ್ಪೆ-ಕಟೀಲು-ಕಿನ್ನಿಗೋಳಿ ರೂಟ್‌ನಲ್ಲಿ ದಿನನಿತ್ಯ ಸುಮಾರು 35 ಬಸ್ಸುಗಳು ಹಲವು ಟ್ರಿಪ್ ನಡೆಸುತ್ತಿದ್ದು, ಪ್ರಸ್ತುತ ಈ ಬಸ್ಸುಗಳಿಗೆ ಕೇವಲ ಅರ್ಥದಷ್ಟು ಟ್ರಿಪ್ ಮಾತ್ರ ಇದೆ. ಬಸ್ಸುಗಳು ಘನ ವಾಹನ ಅಲ್ಲವಾದರೂ ಸೇತುವೆಗೆ ಅಡ್ಡಲಾಗಿ ಗಾರ್ಡ್ ಅಳವಡಿಸಿರುವುದರಿಂದ ಬಸ್ಸುಗಳಿಗೆ ಸೇತುವೆ ದಾಟಲು ಸಾಧ್ಯವಾಗುತ್ತಿಲ್ಲ. ಘನ ವಾಹನಗಳು ಕೂಡ ಬಸ್ಸಿನಷ್ಟೇ ಎತ್ತರವಿರುವ ಕಾರಣ ಗಾರ್ಡ್ ತೆರವುಗೊಂಡರೆ ಬಸ್ಸಿನ ಜತೆಗೆ ಘನ ವಾಹನಗಳು ಕೂಡ ಸೇತುವೆ ದಾಟುತ್ತವೆ ಎಂಬುದು ದ.ಕ.ಜಿಲ್ಲಾಡಳಿತದ ವಾದವಾಗಿದೆ.
Related Articles
Advertisement
ಖಾಲಿ ಬಸ್ಸು ದಾಟಿಸುತ್ತೇವೆಬಸ್ಸುಗಳು ಪ್ರಯಾಣಿಕರನ್ನು ತುಂಬಿ ಸೇತುವೆಯಲ್ಲಿ ಸಾಗುವುದು ಅಪಾಯವಾದರೆ ಸೇತುವೆಯ ಎರಡೂ ಭಾಗದಲ್ಲಿ ಪ್ರಯಾಣಿಕರನ್ನು ಇಳಿಸಿ ಸೇತುವೆ ದಾಟಿದ ಬಳಿಕ ಮತ್ತೆ ಹತ್ತಿಸಿಕೊಳ್ಳಲು ಅವಕಾಶ ನೀಡಲಿ. ಈ ಸಂದರ್ಭ ಬಸ್ಸುಗಳು ತೂಕವನ್ನು ತಗ್ಗಿಸಿಕೊಂಡು ಸೇತುವೆಗೆ ಯಾವುದೇ ರೀತಿಯ ಭಾರ ಎನಿಸುವುದಿಲ್ಲ. ಜತೆಗೆ ಬಸ್ಸುಗಳಿಗೂ ತಮ್ಮ ರೂಟ್‌ನಲ್ಲಿ ಪೂರ್ತಿ ಟ್ರಿಪ್ ಮಾಡುವುದಕ್ಕೂ ಸಾಧ್ಯವಾಗುತ್ತದೆ ಎಂದು ಬಸ್ಸು ಮಾಲಕರು ಹೇಳುತ್ತಾರೆ. ಸಂಚಾರ ಬಂದ್ ಮಾಡುವ ಯೋಚನೆ
ನಾವು ದ.ಕ.ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಸದ್ಯದ ವ್ಯವಸ್ಥೆಯಲ್ಲಿ ನಷ್ಟದಿಂದ ಬಸ್ಸುಗಳನ್ನು ಓಡಿಸುವುದು ಅಸಾಧ್ಯವಾಗಿದೆ. ಹೀಗಾಗಿ ಅನಿವಾರ್ಯವಾಗಿ ಈ ತಿಂಗಳ ಅಂತ್ಯಕ್ಕೆ ಕಾನೂನು ಪ್ರಕಾರ ಟ್ಯಾಕ್ಸ್ ಸರಂಡರ್ ಮಾಡಿ ಸಂಚಾರ ಬಂದ್ ಮಾಡುವ ಯೋಚನೆಗೆ ಬಂದಿದ್ದೇವೆ. ಈಗಿನ ವ್ಯವಸ್ಥೆಯಲ್ಲಿ ಪ್ರಯಾಣಿಕರು ಕೂಡ ಬಸ್ಸನ್ನು ಅವಲಂಬಿಸದೆ ಪರ್ಯಾಯ ವ್ಯವಸ್ಥೆಯತ್ತ ಮುಖ ಮಾಡಿದ್ದು, ಎಲ್ಲ ಬಸ್ಸುಗಳು ನಷ್ಟದಿಂದ ಓಡುತ್ತಿವೆ.
-ದುರ್ಗಾಪ್ರಸಾದ್ ಹೆಗ್ಡೆ, ಅಧ್ಯಕ್ಷರು, ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘ -ಕಿರಣ್ ಸರಪಾಡಿ