Advertisement
Related Articles
Advertisement
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ರಸ್ತೆ ನಿಯಮ ಗಳು ಹಾಗೂ ಅದರ ಮಹತ್ವದ ಬಗೆಗೆ ಅರಿವು ಮೂಡಿಸುವ ನಿಟ್ಟಿನಿಂದ ಉಡುಪಿ ಜಿಲ್ಲೆಯ ಶಿಕ್ಷಕರ ತಂಡ ತಮ್ಮ ಕಲಾ ಕುಂಚದ ಮೂಲಕ ಆಕರ್ಷಕ ಚಿತ್ತಾರವನ್ನು ಅಭಿವ್ಯಕ್ತಗೊಳಿಸುತ್ತಿದ್ದಾರೆ.
ಈಗಾಗಲೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು, ಕೆದೂರು, ತೆಕ್ಕಟ್ಟೆ, ಕುಂಭಾಸಿ, ವಕ್ವಾಡಿ, ನೂಜಿ, ಸಿದ್ದಾಪುರ, ಶಂಕರನಾರಾಯಣ ಸುತ್ತಮುತ್ತಲಿನ ಸರಕಾರಿ ಶಾಲೆಯ ಗೋಡೆಗಳ ಮೇಲೆ ತಾಲೂಕಿನ ಸರಕಾರಿ ಶಾಲಾ ಚಿತ್ರಕಲಾ ಶಿಕ್ಷಕರ ತಂಡವೊಂದು ರಸ್ತೆ ನಿಯಮಗಳು ಮಕ್ಕಳ ಮನಸ್ಸಿಗೆ ಇಳಿಯುವಂತೆ ಮಾಡುವ ವಿನೂತನ ಪ್ರಯತ್ನ ನಡೆಸುವಲ್ಲಿ ಕಾರ್ಯನಿರತರಾಗಿದ್ದಾರೆ.
ನಿಯಮ ಪಾಲಿಸಿ
ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಂಚಾರಿ ನಿಯಮಗಳನ್ನು ಕೂಡ ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುವ ಅರಿವು ಮೂಡಿಸಿದಾಗ ಭವಿಷ್ಯದಲ್ಲಿ ಇಡೀ ಸಮಾಜ ಜಾಗೃತವಾಗುವುದು. ಪ್ರತಿಯೊಬ್ಬರಲ್ಲೂ ಸಂವಿಧಾನ ಹಾಗೂ ಕಾನೂನಿಗೆ ಗೌರವ ನೀಡುವ ಮನೋಭಾವ ಬೆಳೆದಾಗ ಮಾತ್ರ ಅಪರಾಧ ಪ್ರಕರಣಗಳು ಕಡಿಮೆಯಾಗಿ ಸದೃಢ ರಾಷ್ಟ್ರ ನಿರ್ಮಾಣವಾಗುವುದು.
– ಪುಷ್ಪಾ ,ಉಪ ನಿರೀಕ್ಷಕರು, ಸಂಚಾರಿ ಪೊಲೀಸ್ ಠಾಣೆ ಕುಂದಾಪುರ
ಅರಿವು ಕಾರ್ಯ
ರಸ್ತೆ ಸುರಕ್ಷಾ ಅರಿವು ಮೂಡಿಸಲು ಶಿಕ್ಷಣ ಇಲಾಖೆಗೆ ಜವಾಬ್ದಾರಿ ನೀಡಿದೆ. ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಆರಕ್ಷಕ ರಿಂದ ಮಾಹಿತಿ, ಚಿತ್ರಕಲಾ ಶಿಕ್ಷಕರಿಂದ ಪೋಸ್ಟರ್ ರಚನೆ ಹಾಗೂ ವಿವಿಧ ಸ್ಪರ್ಧೆಗಳ ಮೂಲಕ 3 ಹಂತದಲ್ಲಿ ಅರಿವು ಮೂಡಿಸುವ ಕಾರ್ಯವಾಗುತ್ತಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮುಂದಿನ ದಿನಗಳಲ್ಲಿ ಯಕ್ಷಗಾನ, ಗೊಂಬೆಯಾಟಗಳ ಮೂಲಕ ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳು ಹಾಗೂ ಅದರ ಮಹತ್ವದ ಬಗೆಗೆ ಅರಿವು ಮೂಡಿಸುವ ಮಹತ್ವಾಕಾಂಕ್ಷಿ ಯೋಜನೆಗಳಿವೆೆ. ಈಗಾಗಲೇ ಸರಕಾರಿ ಶಾಲಾ ಚಿತ್ರಕಲಾ ಶಿಕ್ಷಕರು ಎರಡು ತಂಡ ತಾಲೂಕಿನ ಸರಕಾರಿ ಶಾಲಾ ಮುಂಭಾಗದ ಗೋಡೆಗಳ ಮೇಲೆ ಮಕ್ಕಳನ್ನು ಸೆಳೆಯುವ ರೀತಿಯಲ್ಲಿ ಕಲಾತ್ಮಕವಾಗಿ ಪೋಸ್ಟರ್‌ಗಳನ್ನು ರಚಿಸಿದ್ದಾರೆ.
– ಅಶೋಕ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಂದಾಪುರ
ಉತ್ತಮ ಪ್ರತಿಕ್ರಿಯೆ
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದಿಂದ ತಾಲೂಕಿನ ಸರಕಾರಿ ಚಿತ್ರಕಲಾ ಶಿಕ್ಷಕರ ಎರಡು ತಂಡಗಳನ್ನು ರಚಿಸಿಕೊಂಡು ಈಗಾಗಲೇ ಗೋಡೆಗಳ ಮೇಲೆ ಅನಾವರಣಗೊಂಡ ಸಂಚಾರಿ ಜಾಗೃತಿ ಪೋಸ್ಟರ್‌ಗಳನ್ನು ತೈಲವರ್ಣದಿಂದ ರಚಿಸಿದ್ದೇವೆ. ಕಳೆದ ಹತ್ತು ದಿನಗಳಿಂದಲೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
– ಶಿವಾನಂದ ಸ್ವಾಮಿ,ಚಿತ್ರಕಲಾ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಕೆದೂರು. (ತಂಡದ ಪ್ರಮುಖರು)
– ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ