ಗುಳೇದಗುಡ್ಡ: ವೀಕೆಂಡ್ ಕರ್ಫ್ಯೂಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಣದ ಎಲ್ಲ ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿದ್ದವು, ಆದರೆ, ಜನರ ಸಂಚಾರ ಮಾತ್ರ ಎಂದಿನಂತೆ ಕಂಡು ಬಂದಿತು.
ಪಟ್ಟಣದಲ್ಲಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಪುರಸಭೆ ವೀಕೆಂಡ್ ಕರ್ಫ್ಯೂ ಬಗ್ಗೆ ಜನರಿಗೆ ಮಾಹಿತಿ ನೀಡಿತ್ತು. ಅಲ್ಲದೇ ಎಲ್ಲ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಲು ಸೂಚಿಸಿತ್ತು. ಅದರಂತೆ ವ್ಯಾಪಾರಸ್ಥರು ಸಹ ಬೆಂಬಲಿಸಿ, ಶುಕ್ರವಾರ ರಾತ್ರಿಯಿಂದಲೇ ಬಂದ್ ಮಾಡಿದ್ದರು.
ಪಟ್ಟಣದ ಸರಾಫ್ ಬಜಾರ್, ಭಾರತ್ ಮಾರುಕಟ್ಟೆ, ಹೊಸಪೇಟೆ ಮಾರುಕಟ್ಟೆ, ನಡುವಿನಪೇಟೆ, ಸರಾಫ್ ಬಜಾರ, ಬಸ್ ನಿಲ್ದಾಣದ ಪ್ರದೇಶ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅಂಗಡಿ-ಮುಂಗ್ಗಟ್ಟುಗಳು ಬಂದ್ ಆಗಿದ್ದವು. ಸಾರಿಗೆ ಸಂಸ್ಥೆಯ ಬಸ್‌ಗಳು ಎಂದಿನಂತೆ ಸಂಚಾರ ನಡೆಸಿದವು.
ಬಸ್ ನಿಲ್ದಾಣದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಕಂಡು ಬಂದರು. ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ನಾನಾ ಕಡೆಗಳಲ್ಲಿ ಒಟ್ಟು 20 ಬಸ್‌ಗಳನ್ನು ಓಡಿಸಲಾಗಿದೆ ಎಂದು ಘಟಕ ವ್ಯವಸ್ಥಾಪಕಿ ವಿದ್ಯಾ ನಾಯಕ ತಿಳಿಸಿದ್ದಾರೆ. ಪಟ್ಟಣದ ಪುರಸಭೆ, ಹೊಸಪೇಟೆ ಓಣಿಗಳಲ್ಲಿ ಅನಗತ್ಯವಾಗಿ ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದವರಿಗೆ ಪೊಲೀಸರು ಮಾಸ್ಕ್ ಹಾಕಿಕೊಳ್ಳಿ, ಆರೋಗ್ಯದ ಬಗ್ಗೆ ಎಚ್ಚರ ವಹಿಸಿ ಎಂದು ತಿಳಿ ಹೇಳಿದರು.