Advertisement
ಅಷ್ಟಮಿ ದಿನ ಏಕಾದಶಿಯಂತೆ ನಿರ್ಜಲ ಉಪವಾಸವಿರುವ ಕಾರಣ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶುಕ್ರವಾರ ಮುಂಜಾವ ಮಹಾಪೂಜೆಯನ್ನು ನೆರವೇರಿಸಿದರು. ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಯಶೋದಾ ಕೃಷ್ಣ ಅಲಂಕಾರವನ್ನು ನಡೆಸಿದರು. ಕೊರೊನಾ ಕಾರಣದಿಂದ ಉತ್ಸವದಲ್ಲಿ ಸಾರ್ವಜನಿಕರು ಪಾಲ್ಗೊಳ್ಳದಿರುವುದು ಮಾತ್ರವಲ್ಲದೆ ಭೋಜನ ಪ್ರಸಾದವೂ ಇರಲಿಲ್ಲ. ಅಪರಾಹ್ನ ರಥಬೀದಿಯಲ್ಲಿ ಸ್ವಾಮೀಜಿಯವರು, ಮಠದ ಸಿಬಂದಿ ಉತ್ಸವದ ಮೆರವಣಿಗೆ ನಡೆಸಿದರು. ಒಂದು ಕಂಸನ ವೇಷ, ಒಂದು ಪುರಂದರ ದಾಸರ ವೇಷಗಳು ಮಾತ್ರ ಇದ್ದವು.
ಶುಕ್ರವಾರ ಬೆಳಗ್ಗೆ ಉಡುಪಿ ನಗರದ ವಿವಿಧೆಡೆ ಕಾರ್ಯಕರ್ತರು ಕೃಷ್ಣಾಷ್ಟಮಿಯ ಪ್ರಸಾದಗಳನ್ನು ವಿತರಿಸಿದರು. ರಥಬೀದಿಯಲ್ಲಿ ಹಾಕಿದ ಕೌಂಟರ್‌ನಲ್ಲಿ ಪ್ರಸಾದಗಳನ್ನು ವಿತರಿಸಲಾಯಿತು.
Related Articles
ಶ್ರೀಮದ್ಭಾಗವತ ಪುರಾಣದಲ್ಲಿ ವರ್ಣನೆ ಇರುವಂತೆ ಕೃಷ್ಣನ ಜನನ ವೇಳೆ ಮಾತ್ರವಲ್ಲದೆ ಗುರುವಾರ ಮತ್ತು ಶುಕ್ರವಾರ ನಿರಂತರ ಸಾಮಾನ್ಯ ಮಳೆ ಸುರಿದಿದೆ. ಶುಕ್ರವಾರ ವಿಟ್ಲಪಿಂಡಿ ಉತ್ಸವದ ವೇಳೆಯೂ ನಿರಂತರ ಮಳೆ ಸುರಿಯುತ್ತಿತ್ತು.
Advertisement
ಕೃಷ್ಣಾರ್ಘ್ಯ ಪ್ರದಾನಗುರುವಾರ ಮಧ್ಯರಾತ್ರಿ ಮಹಾಪೂಜೆ ಬಳಿಕ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ, ಅದಮಾರು ಹಿರಿಯ, ಕಾಣಿಯೂರು ಶ್ರೀಗಳು ಕೃಷ್ಣಾರ್ಘ್ಯ ಪ್ರದಾನ ಮಾಡಿದರು. ಬಾಲಕೃಷ್ಣನ ಉತ್ಸವಕ್ಕೆ ಗೋವುಗಳು
ಶ್ರೀಕೃಷ್ಣನಿಗೆ ಪ್ರಿಯವಾದ ದೇಸೀ ಗೋವುಗಳು ವಿಟ್ಲಪಿಂಡಿ ಉತ್ಸವದ ವೇಳೆ ರಥಬೀದಿಯ ಸುತ್ತಲೂ ಕಂಡುಬಂದವು. “ಗೋಪಾಲಕೃಷ್ಣನ ಉತ್ಸವದಲ್ಲಿ ಗೋವುಗಳು’ ಪರಿಕಲ್ಪನೆಯಲ್ಲಿ ಶ್ರೀಕೃಷ್ಣಮಠ ಮತ್ತು ಅದಮಾರು ಮಠದ ಗೋವುಗಳನ್ನು ರಥಬೀದಿಯ ಸುತ್ತಲೂ ಕಟ್ಟಿ ಹಾಕಲಾಗಿತ್ತು. ಗೋವುಗಳ ಸಾಲುಗಳ ನಡುವೆ ಉತ್ಸವದ ಮೆರವಣಿಗೆ ಸಾಗಿತು. ಇಷ್ಟು ವರ್ಷಗಳಂತೆ ಜನ ಜಂಗುಳಿ, ವೇಷಗಳ ಭರಾಟೆ, ತಾಸೆ ವಾದ್ಯಗಳ ಸದ್ದು ಯಾವುದೂ ಇರಲಿಲ್ಲ. ನಾಲ್ಕೂ ಬೀದಿಗಳಲ್ಲಿ ಪೊಲೀಸರು ನಿಯೋಜನೆಗೊಂಡು ಸಾರ್ವಜನಿಕರನ್ನು ಒಳಗೆ ಬಿಡಲಿಲ್ಲ. ಪತ್ರಕರ್ತರು ವಿಶೇಷ ಪಾಸುಗಳನ್ನು ಪಡೆದು ರಥಬೀದಿಗೆ ತೆರಳಿದ್ದರು.