Advertisement

ಸಂಪ್ರದಾಯ ಸ್ಪರ್ಶದ ಚಟ್ನಿಪುಡಿ-ಮಸಾಲೆ ಕುಟ್ಟುವ ಯಂತ್ರ

09:07 AM Jun 02, 2020 | Suhan S |

ಹುಬ್ಬಳ್ಳಿ: ಖಾರ, ಮಸಾಲೆ, ಅರಿಶಿಣ, ಚಟ್ನಿಪುಡಿ ಇನ್ನಿತರ ಪದಾರ್ಥಗಳನ್ನು ತಯಾರಿಸಲು ಮನೆಯಲ್ಲಿಯೇ ಇರಿಸಬಹುದಾದ ಪುಟ್ಟ ಯಂತ್ರವೊಂದು ರೂಪುಗೊಂಡಿದೆ. ಕೇವಲ 6 ಕೆಜಿ ತೂಕದ ಈ ಯಂತ್ರ ಸಾಂಪ್ರದಾಯಿಕ ರೀತಿಯಲ್ಲಿ ಪದಾರ್ಥ ತಯಾರಿಸಲಿದೆ.

Advertisement

ಖಾರ-ಅರಿಶಿಣ ಪುಡಿಗಾಗಿ ರೆಡಿಮೇಡ್‌ ಪಾಕೆಟ್‌ ತರಬೇಕು ಇಲ್ಲವೇ ಕುಟ್ಟುವ ಯಂತ್ರಗಳಿದ್ದಲ್ಲಿಗೆ ಹೋಗಬೇಕು. ಚಟ್ನಿಪುಡಿ, ಮಸಾಲೆ ಇನ್ನಿತರ ಪದಾರ್ಥಗಳನ್ನು ತಯಾರಿಸಬೇಕಾದರೆ ಮಿಕ್ಸಿ ಮೊರೆ ಹೋಗಬೇಕಾಗಿದೆ. ಈ ಹಿಂದೆ ಇವುಗಳನ್ನು ಸಾಂಪ್ರದಾಯಿಕ ರೀತಿ ಒರಳಿನಲ್ಲಿ ಕಲ್ಲು ಇಲ್ಲವೇ ಕಬ್ಬಿಣದ ಹಾರೆಯಿಂದ ತಯಾರಿಸಲಾಗುತ್ತಿತ್ತು. ಇದೀಗ ಅದೇ ಮಾದರಿಯಲ್ಲಿ ಸಣ್ಣ ಯಂತ್ರವೊಂದನ್ನು ವಿಜಯಪುರ ಜಿಲ್ಲೆಯ ಗ್ರಾಮೀಣ ಯುವಕರೊಬ್ಬರು ರೂಪಿಸಿದ್ದಾರೆ.

ಕೃಷಿ-ವೈದ್ಯಕೀಯ ಕ್ಷೇತ್ರಕ್ಕೆ ಉಪಯುಕ್ತ ಯಂತ್ರ, ಸಲಕರಣೆ ರೂಪಿಸುವಲ್ಲಿ ತೊಡಗಿರುವ ವಿಜಯಪುರದ ಕೃಷಿ ತರಂಗ ಫಾರ್ಮ್ ಟೆಕ್‌ ಎಎಲ್‌ಪಿ ಸಂಸ್ಥೆ ಸಂಸ್ಥಾಪಕ ಗಿರೀಶ ಭದ್ರಗೊಂಡ ಅವರು ಗೃಹ ಬಳಕೆಗೆ ಅನುಕೂಲವಾಗುವ ಖಾರ-ಮಸಾಲೆ ಇನ್ನಿತರ ಪದಾರ್ಥ ಕುಟ್ಟುವ ಯಂತ್ರ ತಯಾರಿಸಿದ್ದಾರೆ. ಕೃಷಿ ಕುಟುಂಬ ಹಿನ್ನೆಲೆಯ ಗಿರೀಶ ಸದಾ ಹೊಸತನದ ಚಿಂತನೆಯಲ್ಲಿರುವವರು, ರೈತರು ಹಾಗೂ ಜನರಿಗೆ ಸಣ್ಣ ಸಣ್ಣ ಪ್ರಮಾಣದಲ್ಲಿ ಕೈಗೆಟಕುವ ದರದಲ್ಲಿ ಸಾಧನ-ಸಲಕರಣೆ, ಯಂತ್ರಗಳನ್ನು ನೀಡಬೇಕು ಎಂಬ ಉದ್ದೇಶದೊಂದಿಗೆ ಈಗಾಗಲೇ ಅಂಧರು ಸಹ ಕೃಷಿ ಮಾಡಬಹುದಾದ ತಂತ್ರಜ್ಞಾನ ರೂಪಿಸಿದ್ದಾರೆ. ಸೆನ್ಸರ್‌ ಬಳಕೆಯೊಂದಿಗೆ ಅಂಧರು ಸಹ ಕೃಷಿ ಕಾಯಕದಲ್ಲಿ ತೊಡಗಬಹುದಾಗಿದೆ ಎಂಬುದನ್ನು ರೂಪಿಸಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ದೊರೆಯುವ ವೆಂಟಿಲೇಟರ್‌ ಅಭಿವೃದ್ಧಿ ಪಡಿಸಿದ್ದಾರೆ. ಜೋಳ ಕೊಯ್ಲು ಯಂತ್ರ ಅಭಿವೃದ್ಧಿ ಪಡಿಸಿದ್ದಾರೆ. ಬೆಳೆಗಳಿಗೆ ಬರುವ ಹಕ್ಕಿಗಳನ್ನು ಓಡಿಸುವ ಯಂತ್ರ ಅಭಿವೃದ್ಧಿ ಪಡಿಸಿದ್ದಾರೆ.

ಸಾಂಪ್ರದಾಯಿಕ ಸಲಕರಣೆಗಳನ್ನು ಮರೆತಿದ್ದು, ಮತ್ತೆ ನಮ್ಮ ಅಜ್ಜಿಯರ ಸಂಪ್ರದಾಯದ ರುಚಿ ರುಚಿಯ ಪದಾರ್ಥಗಳು ದೊರೆಯುವ ನಿಟ್ಟಿನಲ್ಲಿ ತಂತ್ರಜ್ಞಾನ ಸ್ಪರ್ಶ ನೀಡುವ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ರೈತರು ತಾವೇ ಮನೆಯಲ್ಲಿ ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡುವ ಎರಡು-ಮೂರು ಕೆಜಿ ಸಾಮರ್ಥ್ಯದ ಸಿರಿಧಾನ್ಯ ಸಂಸ್ಕರಣೆ ಯಂತ್ರ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತೊಡಗಿದ್ದೇನೆ. –ಗಿರೀಶ ಭದ್ರಗೊಂಡ, ಸಂಸ್ಥಾಪಕ, ಕೃಷಿ ತರಂಗ ಫಾರ್ಮ್ಟೆಕ್‌ ಎಲ್‌ಎಲ್‌ಪಿ

ರುಚಿ ತಗ್ಗೊದಿಲ್ಲ-ಜನರ ಕಿಸೆಗೂ ಭಾರವಾಗಲ್ಲ : ಮನೆಗಳಲ್ಲಿ ಅಲ್ಪ ಸ್ವಲ್ಪ ಪ್ರಮಾಣದ ಮಸಾಲೆ, ಚಟ್ನಿ ಪುಡಿ ಮಾಡಿಕೊಳ್ಳಬೇಕಾದರೆ ಮಿಕ್ಸಿ ಬಳಸಲಾಗುತ್ತಿದೆ. ಮಿಕ್ಸಿ ಬಳಸಿದರೆ ಶಾಖದಿಂದಾಗಿ ರುಚಿ ಕುಗ್ಗಲಿದೆ. ಕೆಲ ಪೋಷಕಾಂಶಗಳು ನಷ್ಟವಾಗುವ ಸಾಧ್ಯತೆಯೂ ಇರುತ್ತದೆ. ಆದರೆ, ಈ ಯಂತ್ರದಿಂದ ಚಟ್ನಿ ಪುಡಿ ತಯಾರಿಸಿದರೆ ಸಾಂಪ್ರದಾಯಿಕ ರುಚಿ ದೊರೆಯಲಿದೆ. 2,000-2,500 ರೂ. ಒಳಗೆ ಯಂತ್ರವನ್ನು ಜನರ ಕೈಗಿಡಲು ಸಂಸ್ಥೆ ಯೋಜಿಸಿದೆ.

Advertisement

ಅಕ್ಷರಮಾಲೆ ಚಕ್ಕುಲಿ : ಪ್ರಸ್ತುತ ಚಕ್ಕುಲಿಯನ್ನು ಗೋಲಾರದಲ್ಲಿತಯಾರಿಸಲಾಗುತ್ತಿದೆ. ಒಂದಿಷ್ಟು ವಿಭಿನ್ನ ರೀತಿಯಲ್ಲಿ ಇರಲಿ ಎಂದು ಆಂಗ್ಲ ಅಕ್ಷರಮಾಲೆ ರೂಪದ ಚಕ್ಕಲಿಗಳನ್ನು ತಯಾರಿಸುವ ಸಾಧನ ತಯಾರಿಸಲಾಗುತ್ತಿದೆ. ಇದು ಮಕ್ಕಳಿಗೆ ಚಕ್ಕುಲಿ ತಿನ್ನುವ ಆಕರ್ಷಣೆ ಜತೆಗೆ ಅಕ್ಷರಮಾಲೆ ನೆನಪಿಸುವ ಇಲ್ಲವೆ ಕಲಿಸುವ ಕಾರ್ಯ ಮಾಡಲಿದೆ. ಅದಕ್ಕಾಗಿ ಇದನ್ನು ಕೈಗೊಳ್ಳಲು ಮುಂದಾಗಿದ್ದಾಗಿ ಸಂಸ್ಥೆ ತಿಳಿಸಿದೆ

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next