Advertisement

“ಸಾಂಪ್ರದಾಯಿಕ ಕ್ರೀಡೆಗೆ ಪ್ರೋತ್ಸಾಹ ಅಗತ್ಯ’

01:00 AM Feb 21, 2019 | Harsha Rao |

ಕಾರ್ಕಳ: ಶಾರೀರಿಕ ವ್ಯಾಯಾಮ ಮತ್ತು ಮನೋಲ್ಲಾಸಕ್ಕೆ ಕ್ರೀಡೆ ಅತ್ಯಂತ ಸಹಕಾರಿ. ಕ್ರೀಡೆಯನ್ನು ಜೀವನದ ಭಾಗವಾಗಿ ಅಳವಡಿಸಿಕೊಂಡಲ್ಲಿ ದೇಹ ಮತ್ತು ಮನಸ್ಸನ್ನು ಸದೃಢವಾಗಿಡಬಹುದು. ಇಂದಿನ ದಿನಗಳಲ್ಲಿ ಸಾಂಪ್ರದಾಯಿಕ ಕ್ರೀಡೆಗಳಿಗೂ ಅಗತ್ಯ ಪ್ರೋತ್ಸಾಹ ದೊರೆಯಬೇಕೆಂದು ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಕೆ. ಜಯರಾಮ ಪ್ರಭು ಅಭಿಪ್ರಾಯಪಟ್ಟರು.

Advertisement

ಫೆ. 20ರಂದು ಶ್ರೀ ವೆಂಕಟರಮಣ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಉಡುಪಿ ವಿಭಾಗದ ಸಾಂಪ್ರದಾಯಿಕ ಜನಪದ ಕ್ರೀಡಾಕೂಟದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರಿಕೆಟ್‌ನ ಜನಪ್ರಿಯತೆಯಿಂದ ಸಾಂಪ್ರದಾಯಿಕ ಕ್ರೀಡೆಗಳು ಕಳಚಿಕೊಳ್ಳುತ್ತಿವೆ. ಸಾಂಪ್ರದಾಯಿಕ ಕ್ರೀಡೆ ಗಳಿಗೂ ಒತ್ತು ನೀಡಿ, ಜನಪ್ರಿಯಗೊಳಿಸಬೇಕಾ ಅಗತ್ಯ ವಿದೆ ಎಂದು ಅವರು ಪ್ರತಿಪಾದಿಸಿದರು.

ಸಂಸ್ಕೃತಿಯ ಬಿಂಬ
ಸಾಂಪ್ರದಾಯಿಕ ಕ್ರೀಡೆಗಳು ನಮ್ಮ ಸಂಸ್ಕೃತಿ, ಪರಂಪರೆಯ ಬಿಂಬವಾಗಿದ್ದು, ನಮ್ಮ ಸಾಂಸ್ಕೃತಿಕ ವಿಚಾರಧಾರೆಗಳನ್ನು ಅನಾವರಣಗೊಳಿಸುತ್ತವೆ. ಜನಪದ ಕ್ರೀಡೆಗಳಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ದೊರೆಯುವಂತಾಗಬೇಕೆಂದು ಎಸ್‌.ವಿ. ಎಜುಕೇಶನ್‌ ಟ್ರಸ್ಟ್‌ ಕಾರ್ಯದರ್ಶಿ ಕೆ.ಪಿ. ಶೆಣೈ ಹೇಳಿದರು.

ವಿಶ್ವವಿದ್ಯಾಲಯದ ಪ್ರೋತ್ಸಾಹ
ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಪ್ರಸನ್ನ ಕುಮಾರ್‌ ಮಾತನಾಡಿ, ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪ್ರಾದೇಶಿಕ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿ ಕ್ರೀಡಾಕೂಟ ಆಯೋಜಿಸುತ್ತಿದೆ. ಇಂತಹ ಕ್ರೀಡಾಕೂಟಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಮಡಿಕೇರಿ ಪ್ರಾಂತೀಯ ಕ್ರೀಡಾ ವಿಭಾಗದ ಮುಖ್ಯಸ್ಥ ದೊಡ್ಡಣ್ಣ ಬರಮೇಲು ಜನಪದ ಕ್ರೀಡೆ ಕುರಿತಾಗಿ ಮಾಹಿತಿ ನೀಡಿದರು. ಎಸ್‌.ವಿ. ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕಿ ಉಷಾ ಅಂಚನ್‌ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕಿ ಪ್ರಭಾವತಿ ವಂದಿಸಿದರು.

Advertisement

ಸಾಂಪ್ರದಾಯಿಕ ಶೈಲಿ
ಕ್ರೀಡಾಂಗಣವನ್ನು ಸಾಂಪ್ರದಾಯಿಕ ಶೈಲಿಯಲ್ಲಿಯೇ ಸಜ್ಜುಗೊಳಿಸಲಾಗಿತ್ತು. ವೇದಿಕೆ ಹಾಗೂ ಸಭಾಂಗಣವನ್ನು ಅತ್ಯಂತ ಆಕರ್ಷಕವಾಗಿ ನಿರ್ಮಾಣ ಮಾಡಲಾಗಿದ್ದು, ಶಾಮಿಯಾನದ ಬದಿಗಳು ಬಣ್ಣ ಬಣ್ಣದ ಗೆರಟೆಗಳ ಕಲಾಕೃತಿಗಳಿಂದ ಕಂಗೊಳಿಸುತ್ತಿದ್ದವು. ಲಗೋರಿ, ಕುಂಟೆಬಿಲ್ಲೆ, 3 ಕಾಲಿನ ಓಟ, ಹಾಳೆ ಓಟ ಸ್ಪರ್ಧೆಗಳು ನಡೆದಿದ್ದು, 8 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next