Advertisement

ಸಾಂಪ್ರದಾಯಿಕ ನ್ಯಾಯ ಖಾಪ್‌ ಪಂಚಾಯತ್‌

11:15 PM Jun 06, 2023 | Team Udayavani |

ಭಾರತೀಯ ಕುಸ್ತಿ ಫೆಡರೇಶ‌ನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧದ ಕುಸ್ತಿ ಪಟುಗಳ ಪ್ರತಿಭಟನೆ ವೇಳೆ ಪ್ರಮುಖವಾಗಿ ಕೇಳಿ ಬಂದ ಹೆಸರು, ಖಾಪ್‌ ನಾಯಕರು ಮತ್ತು ಖಾಪ್‌ ಮಹಾಪಂಚಾಯತ್‌. ಕೆಲವು ವರ್ಷಗಳ ಹಿಂದೆ ರೈತರು ನಡೆಸಿದ ಪ್ರತಿಭಟನೆ ವೇಳೆಯಲ್ಲೂ ಖಾಪ್‌ ಮುಖಂಡರ ಬಗ್ಗೆ ಪ್ರಸ್ತಾವವಾಗಿತ್ತು. ಉತ್ತರ ಭಾರತದಲ್ಲಿ ಪ್ರಬಲವಾಗಿರುವ ಈ ಖಾಪ್‌ ಮುಖಂಡರು, ರಾಜಕೀಯವಾಗಿಯೂ ಬಹಳ ಶಕ್ತಿಯುತವಾಗಿದ್ದಾರೆ. ಹಾಗಾದರೆ ಏನಿದು ಖಾಪ್‌ ಪಂಚಾಯತ್‌? ಯಾರಿವರು ಖಾಪ್‌ ಮುಖಂಡರು? ಇಲ್ಲಿದೆ ನೋಡಿ… 

Advertisement

ಏನಿದು ಖಾಪ್‌ ಪಂಚಾಯತ್‌? ಯಾರಿವರು ಖಾಪ್‌?
ಉತ್ತರ ಭಾರತದ ಗ್ರಾಮೀಣ ಭಾರತದಲ್ಲಿನ ನ್ಯಾಯದಾನ ವ್ಯವಸ್ಥೆಯ ಸಾಂಪ್ರದಾಯಿಕ ರೂಪವಿದು. ಇದು ಒಂದು ನಿರ್ದಿಷ್ಟ ಗೋತ್ರ ಅಥವಾ ಹಳ್ಳಿಗಳ ಗುಂಪಿನ ಸದಸ್ಯರಿಂದ ರೂಪಿತವಾಗಿರುತ್ತದೆ. ಸ್ಥಳೀಯ ವಿವಾದಗಳನ್ನು ಬಗೆಹರಿಸುವುದು ಮತ್ತು ಸಮುದಾಯದ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಹಾಪಂಚಾಯತ್‌ ಸಭೆ ಸೇರಲಾಗುತ್ತದೆ. ಉತ್ತರ ಭಾರತದಲ್ಲಿ ರಾಜಕೀಯವಾಗಿಯೂ ಇವರು ಬಲಾಡ್ಯರಾಗಿದ್ದಾರೆ.

ಎಂಸಿ ಪ್ರಧಾನ್‌ ಅವರ “ದಿ ಪೊಲಿಟಿಕಲ್‌ ಸಿಸ್ಟಮ್ಸ… ಆಫ್‌ ದಿ ಜಾಟ್ಸ್‌ ಆಫ್‌ ನಾರ್ತ್‌ ಇಂಡಿಯಾ (1966)’ ಪ್ರಕಾರ, ಖಾಪ್‌ಗ್ಳು ಹಿಂದೆ ಮೂರು ರೀತಿಯ ಕಾರ್ಯಗಳನ್ನು ಮಾಡುತ್ತಿದ್ದರು. ಅಂದರೆ ಕುಟುಂಬ/ಗ್ರಾಮ ವಿವಾದಗಳನ್ನು ಬಗೆಹರಿಸುವುದು, ಸಂಪ್ರದಾಯಗಳನ್ನು ಉಳಿಸುವುದು ಮತ್ತು ಹೊರಗಿನ ಆಕ್ರಮಣದಿಂದ ಪ್ರದೇಶವನ್ನು ರಕ್ಷಿಸುವುದಾಗಿದೆ. ಸದ್ಯ ಈ ಕಡೆಯ ಕಾರ್ಯ ಅಪ್ರಸ್ತುತವಾಗಿದ್ದು, ಮೊದಲ

ಎರಡು ಕಾರ್ಯಗಳನ್ನು ಇಂದಿಗೂ ಮಾಡಿಕೊಂಡು ಬರಲಾಗುತ್ತಿದೆ. ಖಾಪ್‌ಗಳು ನಿರ್ದಿಷ್ಟವಾಗಿ ಯಾವುದೇ ಸಂಘಟನೆಯನ್ನು ಹೊಂದಿಲ್ಲ. ಮೊದಲಿಗೆ ಖಾಪ್‌ ಮುಖ್ಯಸ್ಥನನ್ನಾಗಿ ಅನುವಂಶೀಯ ಆಧಾರದಲ್ಲಿ ಆರಿಸಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಅಂದರೆ ನಿರ್ದಿ ಷ್ಟ ಖಾಪ್‌ ಗುಂಪಿನ ಸಭೆಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಸ್ಥಳದಲ್ಲೇ ನಾಮನಿರ್ದೇಶನ ಮಾಡಲಾಗು ತ್ತದೆ.  ಈ ವಿಚಾರದಲ್ಲಿ ಮುಖಂಡರ ನಡುವೆ ಜಗಳಗಳೂ ನಡೆಯುತ್ತವೆ.

ಖಾಪ್‌ ಪಂಚಾಯತ್‌ಗಳ ಇತಿಹಾಸ
ಖಾಪ್‌ ಪಂಚಾಯತ್‌ಗಳ ಮೂಲ ಅಸ್ಪಷ್ಟ. ಆದರೆ, ಶತಮಾನಗಳಿಂದಲೂ ಇದು ರೂಢಿಯಲ್ಲಿದೆ. ಉತ್ತರದ ರಾಜ್ಯಗಳಾದ ಹರಿಯಾಣ, ಪಂಜಾಬ್‌, ಉತ್ತರಾಖಂಡ ಮತ್ತು ರಾಜಸ್ಥಾನಗಳಲ್ಲಿ ಅವು ಹೆಚ್ಚು ಸಾಮಾನ್ಯವಾಗಿವೆ. ಖಾಪ್‌ ಪಂಚಾಯತ್‌ಗಳು ಸಾಂಪ್ರದಾಯಿಕ ಹಿಂದೂ ಜಾತಿ ವ್ಯವಸ್ಥೆಯನ್ನು ಆಧರಿಸಿವೆ. ವಿಶೇಷವೆಂದರೆ ಈ ಖಾಪ್‌ ಪಂಚಾಯತ್‌ಗಳು ಹೆಚ್ಚಾಗಿ ಮಹಿಳೆಯರು ಮತ್ತು ಕೆಳಜಾತಿಗಳ ವಿರುದ್ಧ ತಾರತಮ್ಯ ಮಾಡುವ ನಿಯಮ ಮತ್ತು ನಿಬಂಧನೆಗಳನ್ನು ಜಾರಿಗೊಳಿಸುತ್ತವೆ.

Advertisement

ಖಾಪ್‌ಗಳು ರೂಪುಗೊಂಡಿರುವುದೇ ಗೋತ್ರಗಳ ಆಧಾರದಲ್ಲಿ. ಅಂದರೆ, ಇವರನ್ನು ಗ್ರಾಮಗಳ ಸಂಖ್ಯೆ/ಗ್ರಾಮಗಳ ಸಮೂಹಗಳಿಂದ ಅಥವಾ ಅವರು ಪ್ರತಿನಿಧಿಸುವ ಗೋತ್ರಗಳಿಂದ ಗುರುತಿಸಲಾಗುತ್ತದೆ. ಸದ್ಯ  ಗತ್ವಾಲಾ ಖಾಪ್‌ (ಮಲಿಕ್‌ ಖಾಪ್‌), ದಲಾಲ್‌ ಖಾಪ್‌, ಪೂನಿಯಾ ಖಾಪ್‌, ಸಾಂಗ್ವಾನ್‌ ಖಾಪ್‌, ದಹಿಯಾ ಖಾಪ್‌, ಶಿಯೋರಾನ್‌ ಖಾಪ್‌, ಬಿನೈನ್‌ ಖಾಪ್‌ (ಹಿಸಾರ್‌) ಮತ್ತು ಶೆರಾವತ್‌ ಖಾಪ್‌ ಸೇರಿದಂತೆ ಹಲವಾರು ಗೋತ್ರ ಆಧಾರಿತ ಖಾಪ್‌ಗ್ಳಾಗಿವೆ.

ಉಳಿದವು ಪ್ರದೇಶ ಆಧಾರಿತವಾಗಿವೆ. ಇವುಗಳಲ್ಲಿ ಮೆಹಮ್‌ ಚೌಬಿಸಿ ಖಾಪ್‌, ರೋಹrಕ್‌ ಚೌರಾಸಿ ಖಾಪ್‌, ಸತ್ರೋಲ್‌ ಖಾಪ್‌, ಜಾಶಾì 360 ಖಾಪ್‌ ಮತ್ತು ಸೋನಿಪತ್‌ 360 ಖಾಪ್‌ ಸೇರಿವೆ. ಒಂದೆರಡು ಹಳ್ಳಿಗಳಿಂದ ಹಿಡಿದು ಕೆಲವು ನೂರು ಹಳ್ಳಿಗಳವರೆಗೆ ಅವರ ಪ್ರಭಾವವಿದೆ. ಹೆಚ್ಚಿನ ಕಾಪ್‌ಗ್ಳು ಜಾಟ್‌ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದಾರೆ. ಅವರಲ್ಲಿ ಹಲವರು ಈ ಸಮುದಾಯದ ಗೋತ್ರಗಳಿಗೆ ಸೇರಿದವರು. ಆದಾಗ್ಯೂ, ಗುಜ್ಜರ್‌ಗಳು ಮತ್ತು ರಜಪೂತರು ಮತ್ತು ಮುಸ್ಲಿಮರು ಸಹಿತ ಇತರ ಜಾತಿಗಳಲ್ಲಿಯೂ ಖಾಪ್‌ಗಳು ಇರಬಹುದು.

ಹರಿಯಾಣದ ಝಜ್ಜರ್‌ ಜಿಲ್ಲೆಯ ಹಂಕರ್‌ ಖಾಪ್‌ ಹೇಳುವ ಪ್ರಕಾರ, ಉತ್ತರ ಭಾರತದಲ್ಲಿ ಹರಿಯಾಣ, ಉತ್ತರ ಪ್ರದೇಶ, ದಿಲ್ಲಿ, ರಾಜಸ್ಥಾನ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಸುಮಾರು 300 ಪ್ರಮುಖ ಕಾಪ್‌ಗ್ಳಿವೆ.

ವಿವಾದ ಪರಿಹಾರ
ವ್ಯಕ್ತಿಗಳು, ಕುಟುಂಬಗಳು ಅಥವಾ ಸಮುದಾಯಗಳ ನಡುವಿನ ವಿವಾದ­ಗಳನ್ನು ಪರಿಹರಿ­ಸಲು ಖಾಪ್‌ ಪಂಚಾ­ಯತ್‌ಗಳನ್ನು ಹೆಚ್ಚಾಗಿ ಕರೆಯಲಾ­ಗುತ್ತದೆ. ಈ ವಿವಾದಗಳು ಭೂ ಮಾಲಕತ್ವ, ಆಸ್ತಿ ವಿವಾದಗಳು ಮತ್ತು ವಿವಾಹ ವ್ಯವಸ್ಥೆಗಳಂತಹ ವ್ಯಾಪಕ ಶ್ರೇಣಿಯ ಸಮಸ್ಯೆಗಳನ್ನು ಒಳಗೊಂಡಿರ­ಬಹುದು. ಖಾಪ್‌ ಪಂಚಾಯತ್‌ಗಳು ಸಾಮಾನ್ಯವಾಗಿ ವಿವಾದದ ಎರಡೂ ಬದಿಗಳ ವಾದ-ಪ್ರತಿವಾದಗಳನ್ನು ಆಲಿಸುತ್ತವೆ ಮತ್ತು ಅನಂತರ ಸಾಂಪ್ರದಾಯಿಕ ಕಾನೂನು ಮತ್ತು ಸಂಪ್ರದಾಯದ ವ್ಯಾಖ್ಯಾನದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತವೆ.

ಹಾಗೆಯೇ ವಿವಾದಗಳನ್ನು ಪರಿಹರಿ­ಸುವುದರ ಜತೆಗೆ ಖಾಪ್‌ ಪಂಚಾಯತ್‌ಗಳು ಸಮುದಾಯದ ವಿಷಯ­ಗಳ ಬಗ್ಗೆಯೂ ತೀರ್ಮಾನಿಸುತ್ತವೆ. ಈ ನಿರ್ಧಾರಗಳು ನೀರಿನ ದರಗಳನ್ನು ನಿಗದಿಪಡಿಸುವುದು. ಹಬ್ಬಗಳನ್ನು ಆಯೋ­ಜಿ­ಸುವುದು,  ಶಾಲೆಗಳು ಮತ್ತು ರಸ್ತೆಗಳನ್ನು ನಿರ್ಮಿಸುವುದು ಮುಂತಾದ ವಿಷಯ­ಗಳನ್ನು ಒಳಗೊಂಡಿರಲೂಬಹುದು. ಖಾಪ್‌ ಪಂಚಾ­ಯಿತಿ­ಗಳು ಸಾಮಾನ್ಯವಾಗಿ ಒಮ್ಮತದಿಂದ ನಿರ್ಧಾರ­ಗಳನ್ನು ತೆಗೆದು ಕೊಳ್ಳುತ್ತವೆ. ಕೆಲವೊಮ್ಮೆ ಘರ್ಷಣೆಗಳೂ ಸಂಭಸುತ್ತವೆ.

ಸಾಮಾಜಿಕ  ಕಟ್ಟುಪಾಡುಗಳ ಜಾರಿ
ಸಾಮಾಜಿಕ ನಿಯಮಗಳನ್ನು ಜಾರಿಗೊಳಿಸುವಲ್ಲಿ ಖಾ ಪ್‌ ಪಂಚಾಯತ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತರ್ಜಾತೀಯ ವಿವಾಹಗಳನ್ನು ತಡೆಗಟ್ಟುವುದು, ಮದ್ಯ ಮತ್ತು ಮಾದಕ ವಸ್ತುಗಳ ಬಳಕೆಯನ್ನು ನಿಯಂ ತ್ರಿಸು­ವುದು ಮತ್ತು ಮಹಿಳೆಯರ ನಡವಳಿಕೆ­ಯನ್ನು ನಿಯಂತ್ರಿಸುವುದು ಮುಂತಾದ ವಿಷಯಗಳನ್ನು ಇದು ಒಳಗೊಂಡಿರಬಹುದು. ಸಾಮಾನ್ಯವಾಗಿ ಇಂಥ ವಿಚಾರಗಳು ವಿವಾದಕ್ಕೀಡಾಗುತ್ತವೆ.

ಖಾಪ್‌ ಪಂಚಾಯತಿಗಳ  ಕುರಿತ ಟೀಕೆ
ಖಾಪ್‌ ಪಂಚಾ­ಯತ್‌ಗಳು ತಮ್ಮ  ನಿಯಮಗಳನ್ನು ಜಾರಿಗೊಳಿಸಲು ಆಗಾಗ್ಗೆ ಸಾಮಾಜಿಕ ಒತ್ತಡ ಮತ್ತು ಬಹಿಷ್ಕಾರವನ್ನು ಬಳಸುತ್ತವೆ.ಖಾಪ್‌ ಪಂಚಾಯತ್‌ಗಳು ತಮ್ಮ ತಾರತಮ್ಯದ ಅಭ್ಯಾಸಗಳು ಮತ್ತು ನಿಬಂಧನೆಗಳ ಜಾರಿಯಿಂದಾಗಿ ಟೀಕೆಗೊಳಗಾಗಿವೆ. ಕೆಲವೊಮ್ಮೆ ಇವರು ಪೊಲೀಸರು ಮತ್ತು ನ್ಯಾಯಾಲಯಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಖಾಪ್‌ ಪಂಚಾಯತ್‌ಗಳು ತಮ್ಮ ಅಂತರ್‌ ಜಾತೀಯ ವಿವಾಹಗಳ ಕುರಿತಂತೆ ವಿವಾದದ ತೀರ್ಮಾನ ತೆಗೆದುಕೊಂಡು ಮರ್ಯಾದೆಗೇಡು ಹತ್ಯೆ ಮಾಡಿಸಿದ ಆರೋಪಗಳೂ ಇವೆ.

ಸರಕಾರದ ಕಠಿನ ಕ್ರಮ
ಖಾಪ್‌ ಪಂಚಾಯಿತಿಗಳಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರಕಾರವು 2006ರಲ್ಲಿ ಕಠಿನ ಕ್ರಮ ತೆಗೆದುಕೊಂಡಿತು.

ಕಾನೂನನ್ನು ಉಲ್ಲಂ ಸುವ ನಿರ್ಧಾರ ತೆಗೆದುಕೊಳ್ಳುವ ಖಾಪ್‌ ಪಂಚಾಯತ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಕಾನೂನು ತರಲಾಗಿದೆ.ಉತ್ತರ ಭಾರತದ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಖಾಪ್‌ ಪಂಚಾಯತ್‌ಗಳು ಬಲಾಡ್ಯವಾಗಿವೆ.

ಖಾಪ್‌ ಪಂಚಾಯತ್‌ಗಳ ಭವಿಷ್ಯ
ಪಂಚಾಯತ್‌ ರೂಪದಲ್ಲಿ ನಡೆಯುವ ಸಭೆಯಲ್ಲಿ ಸಾವಿರಾರು, ಕೆಲವೊಮ್ಮೆ ಲಕ್ಷಾಂತರ ಮಂದಿ ಭಾಗಿಯಾಗುತ್ತಾರೆ. ಅಲ್ಲದೆ ಪ್ರಮುಖ ಪಂಗಡಗಳ ನಾಯಕರೇ ಇದರಲ್ಲಿರುವುದರಿಂದ ಸರಕಾರದ ಮಟ್ಟದಲ್ಲಿಯೂ ಪ್ರಭಾವ ಬೆಳೆಸುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಇವುಗಳ ಸ್ಥಿತಿ ಏನಾಗಬಹುದು ಎಂಬುದನ್ನು ಊಹೆ ಮಾಡುವುದು ಕಷ್ಟವಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next