Advertisement

ಸಾಂಪ್ರದಾಯಿಕ ಚಿಕಿತ್ಸೆಯಿಂದ ಶಕ್ತಿ ವೃದ್ಧಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌

03:42 AM Jul 25, 2020 | Hari Prasad |

ಹೊಸದಿಲ್ಲಿ: ಭಾರತದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 864 ಮಂದಿಗೆ ಸೋಂಕು ತಗುಲಿದ್ದು, 21 ಮಂದಿ ಮೃತಪಟ್ಟಿದ್ದಾರೆ.

Advertisement

ಈ ಲೆಕ್ಕಾಚಾರ ನೋಡಿದರೆ ಭಾರತವು ಜಗತ್ತಿನಲ್ಲೇ ಅತಿ ಕಡಿಮೆ ಸೋಂಕು ಹಾಗೂ ಸಾವುಗಳನ್ನು ಕಂಡಿರುವ ದೇಶಗಳಲ್ಲಿ ಒಂದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ.

ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಆರೋಗ್ಯ ಸಚಿವರ ಡಿಜಿಟಲ್‌ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಕೋವಿಡ್ 19 ಸೋಂಕಿನ ನಡುವೆ ಭಾರತದ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಯು ಜನರಲ್ಲಿ ಹೇಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿತು ಎಂಬ ಬಗ್ಗೆಯೂ ಅವರು ವಿವರಿಸಿದ್ದಾರೆ.

ಜತೆಗೆ, ಎಸ್‌ಸಿಒ ಆರೋಗ್ಯ ಸಚಿವರ ಸಾಂಸ್ಥಿಕ ಸಭೆಗಳಡಿ ಸಾಂಪ್ರದಾಯಿಕ ಔಷಧಗಳಿಗೆ ಸಂಬಂಧಿಸಿದ ಒಂದು ಉಪಸಮಿತಿ ರಚಿಸುವಂತೆಯೂ ಅವರು ಕೋರಿದ್ದಾರೆ. ಭಾರತದಲ್ಲಿ ಕೋವಿಡ್ 19 ವಿರುದ್ಧದ ಸಮರದ ವೇಳೆ ಪ್ರಧಾನಿ ಮೋದಿ ಅವರು ವೈಯಕ್ತಿಕವಾಗಿ ಹೇಗೆ ಪ್ರತಿಯೊಂದು ಪರಿಸ್ಥಿತಿಯನ್ನೂ ನಿಭಾಯಿಸಿಕೊಂಡು, ಸೋಂಕು ವ್ಯಾಪಿಸದಂತೆ ಸೂಕ್ತ ಕ್ರಮ ಕೈಗೊಂಡರು ಎಂಬುದರ ಬಗ್ಗೆಯೂ ಹರ್ಷವರ್ಧನ್‌ ಮಾತನಾಡಿದ್ದಾರೆ.

24 ಗಂಟೆಗಳಲ್ಲಿ 50 ಸಾವಿರದಷ್ಟು ಪ್ರಕರಣ
ಇದೇ ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ ಸುಮಾರು 50 ಸಾವಿರದಷ್ಟು ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 13 ಲಕ್ಷದ ಗಡಿ ದಾಟಿದೆ. ಗುರುವಾರ ಬೆಳಗ್ಗೆ 8ರಿಂದ ಶುಕ್ರವಾರ ಬೆಳಗ್ಗೆ 8ರವರೆಗೆ 49,310 ಹೊಸ ಪ್ರಕರಣ ಪತ್ತೆಯಾಗಿದ್ದು, ಈ ಅವಧಿಯಲ್ಲಿ 740 ಸೋಂಕಿತರು ಅಸುನೀಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಇದೇ ವೇಳೆ, ಗುಣಮುಖ ಪ್ರಮಾಣದಲ್ಲೂ ಸತತ 3ನೇ ದಿನ ದಾಖಲೆ ಸೃಷ್ಟಿಯಾಗಿದ್ದು, 24 ಗಂಟೆಗಳಲ್ಲಿ 34,602 ರೋಗಿಗಳು ಡಿಸ್ಚಾರ್ಜ್‌ ಆಗಿದ್ದಾರೆ. ಗುಣಮುಖರಾದವರ ಸಂಖ್ಯೆ 8.17 ಲಕ್ಷ ದಾಟಿ, ಗುಣಮುಖ ಪ್ರಮಾಣ ಶೇ.63.45ಕ್ಕೇರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next