Advertisement
ಅಲ್ಲದೆ ಕ್ಲಾಸ್ಟ್ರಿಡಿಯಂ ಟಾಕ್ಸಿನ್ ಎಂಬ ವಿಷಕಾರಿ ಪದಾರ್ಥದ ವಿರುದ್ಧ ಕರುಳಿನ ಪ್ರತಿರೋಧ ಶಕ್ತಿ ಕಡಿಮೆಯಾಗಿ ತೀವ್ರ ಅತಿಸಾರ ಉಂಟಾಗುತ್ತದೆ. ಅದೇ ರೀತಿ ಹೆಲಿಕೋಬ್ಯಾಕ್ಟಾರ್ ಪೈಲೊರಿ ಎನ್ನುವ ಬ್ಯಾಕ್ಟೀರಿಯಾವು ಜಠರದಲ್ಲಿ ಹುಣ್ಣು ಉಂಟುಮಾಡುತ್ತದೆ. ಕ್ಯಾಂಡಿಡಾ ಎಂಬುವ ಒಂದು ಫಂಗಸ್ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಯೋನಿ ಸೋಂಕಿಗೆ ಕಾರಣವಾಗುತ್ತವೆ.
Related Articles
Advertisement
ಕಲಬೆರಕೆ ಮಾಡಿದಂತಹ ಆಹಾರ ಸಾಮಗ್ರಿಗಳು, ರಾಸಾಯನಿಕಗಳನ್ನು ಉಪಯೋಗಿಸಿ ಮಾಡುವಂತಹ ತಿಂಡಿ ತಿನಿಸುಗಳು, ರಾಸಾಯನಿಕ ಗೊಬ್ಬರಗಳನ್ನು ಬಳಸಿ ಬೆಳೆಸುವ ಸೊಪ್ಪು ತರಕಾರಿಗಳು ದೇಹಕ್ಕೆ ತುಂಬಾ ಹಾನಿಕಾರಕವಾಗಿವೆ. ಹಾಗಾಗಿ ತರಕಾರಿ ಅಥವಾ ಇನ್ನಿತರ ಯಾವುದೇ ಆಹಾರ ಪದಾರ್ಥಗಳನ್ನು ಆದಷ್ಟು ಜಾಗರೂಕತೆಯಿಂದ ಪರೀಕ್ಷಿಸಿ ತೆಗೆದುಕೊಳ್ಳುವುದು ಒಳ್ಳೆಯದು.
ಸಾಧ್ಯವಾದ ಮಟ್ಟಿಗೆ ನಮ್ಮ ಸುತ್ತ ಮುತ್ತ ಲಭ್ಯವಿರುವ ಜಾಗದಲ್ಲಿ, ಮನೆಯ ತಾರಸಿ ಮೇಲೆ ಕುಂಡಗಳಲ್ಲಿ ಕೆಲವು ತರಕಾರಿ, ಔಷಧೀಯ ಸಸ್ಯಗಳನ್ನು ಬೆಳೆಸಿ ಆಗಾಗ್ಗೆ ಬಳಸುವುದು ಆರೋಗ್ಯಕ್ಕೂ ಒಳ್ಳೆಯದು. ದೈಹಿಕ ಚಟುವಟಿಕೆಯಿಂದಾಗಿ ಮನಸ್ಸೂ ಉಲ್ಲಾಸದಿಂದಿರುತ್ತದೆ. ಇನ್ನಾದರೂ ನಾವು ನಮ್ಮ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಪ್ರಾಮುಖ್ಯ ಕೊಟ್ಟು, ನಮ್ಮ ಹಿರಿಯರು ಬಳಸು ತ್ತಿದ್ದ ಆಹಾರ ಗಳನ್ನು ಉಪಯೋಗಿಸಿ ಸಾಂಪ್ರದಾಯಿಕ ವಿಧಾನದಿಂದ ಮನೆಯಲ್ಲೇ ಮಾಡಿದ ಆಹಾರ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ.
ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಸಂಶೋಧನೆಗಳ ಮೂಲಕ ದೃಢಪಟ್ಟು ಹಲವಾರು ರೋಗಗಳ ಚಿಕಿತ್ಸೆಗಾಗಿ, ರೋಗಗಳನ್ನು ಎದುರಿಸಲು ಮತ್ತು ಆರೋಗ್ಯ ನಿರ್ವಹಣೆಗೆ ಬಳಸಲಾಗುವ ಔಷಧೇತರ ವಿಧಾನಗಳೊಮ್ಮೆ ಗಮನಿಸೋಣ. ಇವುಗಳ ಪ್ರಕಾರ ಆಂಟಿಬಯೋಟಿಕ್‌ಮತ್ತು ಇತರ ಔಷಧಗಳ ಅಡ್ಡ ಪರಿಣಾಮ ತಡೆಗಟ್ಟುವ ಸಲುವಾಗಿ ನೈಸರ್ಗಿಕ ಚಿಕಿತ್ಸೆಗೆ ಹೆಚ್ಚಿನ ಪ್ರಾಧಾನ್ಯ ಕೊಡಲಾಗುತ್ತಿದ್ದು, ಈ ಕೆಳಗಿನ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತಿದೆ.
ಪ್ರೋಬಯೋಟಿಕ್‌ಗಳು
ದೇಹಕ್ಕೆ ಉಪಯುಕ್ತವಾದ ಕೆಲವು ಸೂಕ್ಷ್ಮಾಣುಜೀವಿಗಳನ್ನು (ಬ್ಯಾಕ್ಟೀರಿಯಾ ಮತ್ತು ಈಸ್ಟ್) ದೇಹಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ನೇರವಾಗಿ ಹೊಟ್ಟೆಗೆ ತೆಗೆದುಕೊಳ್ಳುವುದು. ವೈದ್ಯರ ಸಲಹೆ ಪಡೆದು, ಬಳಲುತ್ತಿರುವ ರೋಗ ಎದುರಿಸಲು ಸರಿಹೊಂದುವಂತಹ ಪ್ರೋಬಯೋಟಿಕ್‌ಗಳನ್ನು ಬಳಸಿದರೆ, ನಮ್ಮ ದೇಹದ ಉಪಯೋಗಿ ಸೂಕ್ಷ್ಮಾಣು ಜೀವಿಗಳು ಯಾವ ರೀತಿ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತವೆಯೋ ಅದೇ ರೀತಿ ಈ ಸೂಕ್ಷ್ಮಾಣುಜೀವಿಗಳು ಕಾರ್ಯ ನಿರ್ವಹಿಸುತ್ತವೆ.
ಪ್ರಿಬಯೋಟಿಕ್‌ಗಳು
ಕರುಳಿನಲ್ಲಿರುವ ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುವ ಸುಲಭವಾಗಿ ಜೀರ್ಣವಾಗದಂತಹ ಆಹಾರವನ್ನು ತೆಗೆದುಕೊಳ್ಳುವುದು. ಇದನ್ನು ಪ್ರೊಬಯೋಟಿಕ್‌ಗಳಿಗೆ ಪರ್ಯಾಯವಾಗಿ ಅಥವಾ ಪೂರಕವಾಗಿ ಬಳಸಬಹುದು. ಕರುಳಿನ ಸೂಕ್ಷ್ಮಾಣು ಜೀವಿಗಳನ್ನು ಮಾರ್ಪಡಿಸುವಲ್ಲಿ ಈ ಪ್ರಿಬಯೋಟಿಕ್‌ಗಳು ಅಗಾಧ ಸಾಮರ್ಥ್ಯವನ್ನು ಹೊಂದಿವೆ. ವಿಭಿನ್ನ ರೀತಿಯ ಪ್ರಿಬಯೋಟಿಕ್‌ಗಳು ಸೂಕ್ಷ್ಮಾಣುಜೀವಿಗಳ ಪ್ರತ್ಯೇಕ ತಳಿಗಳನ್ನು ಪ್ರಬೇಧ ಮಟ್ಟದಲ್ಲಿ ಮಾರ್ಪಡಿಸುತ್ತವೆ. ಇದರ ಪ್ರಯೋಜನಕಾರಿ ಪರಿಣಾಮಗಳ ಕುರಿತು ಅನೇಕ ತಜ್ಞರ ವರದಿಗಳು ಪ್ರಕಟವಾಗಿವೆ.
ಸಿನ್‌ಬಯೋಟಿಕ್‌ಗಳು
ಅಂದರೆ ಪ್ರೋಬಯೋಟಿಕ್‌ಗಳು ಮತ್ತು ಪ್ರಿಬಯೋಟಿಕ್‌ಗಳ ಏಕಕಾಲಿಕ ಬಳಕೆ. ಇವುಗಳ ಏಕಕಾಲಿಕ ಬಳಕೆಯಿಂದ ಇವೆರಡರ ಸಾಮರ್ಥ್ಯವು ಹೆಚ್ಚುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಮಲ ಕಸಿ ಮಾಡುವುದು
ಇದು ಆರೋಗ್ಯವನ್ನು ಕಾಪಾಡುವುದಕ್ಕಾಗಿ ಆರೋಗ್ಯವಂತ ದಾನಿಗಳಿಂದ ಪಡೆದ ಮಲವನ್ನು ರೋಗಿಗಳ ಕರುಳಿನಲ್ಲಿ ಕಸಿ ಮಾಡುವುದಾಗಿದೆ. ಮಲವನ್ನು ಅದರ ಬಣ್ಣ ಮತ್ತು ದುರ್ವಾಸನೆಯನ್ನು ತೆಗೆದು, ಕ್ಯಾಪುÕಲ್ ಮಾಡಿ ರೋಗಿಗಳಿಗೆ ಕೊಡುವುದು ಅಥವಾ ಗುದದ್ವಾರದ ಮೂಲಕ ಕರುಳಿನಲ್ಲಿ ಕಸಿ ಮಾಡುವುದು. ಇತ್ತೀಚಿನ ದಿನಗಳಲ್ಲಿ ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳನ್ನು ಹೊಂದಿರುವ, ಕಸಿ ಮಾಡಲು ಯೋಗ್ಯವಾದ ಮಲವನ್ನು ಹೊಸ ಜೈವಿಕ ಔಷಧವೆಂದು ಪರಿಗಣಿಸಲಾಗಿದೆ.
ಈ ಚಿಕಿತ್ಸಾ ಪದ್ಧತಿಗಳನ್ನು ಕೂಲಂಕಷವಾಗಿ ಅರ್ಥ ಮಾಡಿಕೊಂಡರೆ ನಾವೆಲ್ಲಿ ಎಡವುತ್ತಿದ್ದೇವೆ ಎಂದು ತಿಳಿಯುತ್ತದೆ. ಈ ಎಲ್ಲ ರೀತಿಯ ನೈಸರ್ಗಿಕ ಚಿಕಿತ್ಸಾ ಕ್ರಮದಲ್ಲಿ ಬಳಸುವಂತಹ, ದೇಹವನ್ನು ರೋಗಮುಕ್ತಗೊಳಿಸುವ ಅಂಶಗಳು ಆರೋಗ್ಯಕರವಾದ ಸಾಂಪ್ರದಾಯಿಕ ಆಹಾರದಲ್ಲಿ ಸಿಗುವಾಗ ನಾವೇಕೆ ಅದರ ಉಪಯೋಗವನ್ನು ಪಡೆದುಕೊಳ್ಳಬಾರದು? ದೇಹದಲ್ಲಿ ಸೂಕ್ಷ್ಮಾಣುಜೀವಿಗಳ ಸಮತೋಲನವನ್ನು ಕಾಪಾಡುವಲ್ಲಿ ಆಹಾರ ಪದ್ಧತಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುವುದು ಸಂಶೋಧನೆಗಳಿಂದ ಕೂಡ ಸ್ಪಷ್ಟವಾಗಿದೆ.
ಬನ್ನಿ, ನಮ್ಮ ಹಿರಿಯರು ಅನುಸುತ್ತಿದ್ದ ಆಹಾರ ಪದ್ಧತಿಯನ್ನು ಕೇಳಿ ತಿಳಿದುಕೊಳ್ಳೋಣ, ಮುಂದಿನ ಪೀಳಿಗೆಯ ಸುರಕ್ಷೆಗಾಗಿ ಬಳುವಳಿಯಾಗಿ ನೀಡೋಣ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕೋಣ.