Advertisement

ಘಾಗ್ರಾ, ಲೆಹೆಂಗಾ, ಚುಂದರ್‌

02:04 PM Oct 22, 2020 | Nagendra Trasi |

ಹರಿಯಾಣ ರಾಜ್ಯವು ಭಾರತದ ಸಿರಿವಂತ ರಾಜ್ಯಗಳಲ್ಲಿ ಒಂದು. ಅಂತೆಯೇ ಸಾಂಸ್ಕೃತಿಕ ವಾಗಿಯೂ ಸಿರಿವಂತವಾಗಿರುವ ಈ ರಾಜ್ಯದ ಉಡುಗೆ- ತೊಡುಗೆಯೂ ತನ್ನದೇ ಆದ ವೈಶಿಷ್ಟ್ಯಹೊಂದಿದೆ. ಹರಿಯಾಣದ ಮುಖ್ಯ ಒಂದು ಪಂಗಡವಾಗಿರುವ ಜಾಟ್‌ ಜನಾಂಗದ ಸಮುದಾಯದಲ್ಲಿ ಮಹಿಳೆಯರು ದಾಮನ್‌ ಎಂಬ ಹೆಸರಿನ ಘಾಗ್ರಾದಂತಹ ತೊಡುಗೆಯನ್ನು ಧರಿಸುತ್ತಾರೆ. ಘಾಗ್ರಾದಲ್ಲಿ ವೈಶಿಷ್ಟ್ಯವಿರುವಂತೆ ಹಲವು ವಿನ್ಯಾಸಗಳನ್ನೂ, ಗಾಢ ರಂಗುಗಳಿಂದಲೂ ದಾಮನ್‌ ಅಲಂಕರಿಸ್ಪಟ್ಟಿರುತ್ತದೆ. ತುದಿಯ ಭಾಗದಲ್ಲಿ ಅಂದದ ಜರಿಯ ಅಂಚನ್ನೂ ಹೊಂದಿರುತ್ತದೆ.

Advertisement

ಇದರ ಮೇಲೆ ಧರಿಸುವ ಕುಪ್ಪಸವು ಶರ್ಟ್‌ನ ರೀತಿಯಲ್ಲಿ ಉದ್ದದ ನಿಲುವಂಗಿ ಯಂತಿದ್ದು ಅದರ ಮೇಲೆ ಬಣ್ಣ ಬಣ್ಣದ ಓಢನಿ ತೊಡುತ್ತಾರೆ. ಓಢನಿಗೆ ಈ ಪ್ರದೇಶದ ಜನರು ಚುಂದರ್‌ ಎಂದು ಕರೆಯು ತ್ತಾರೆ. ಇದನ್ನೂ ಸಹ ಪ್ರಾದೇಶಿಕ ವೈಶಿಷ್ಟ್ಯ ಗಳೊಂದಿಗೆ ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಲಾಗಿ ರುತ್ತದೆ. ಚುಂದರ್‌ನ ಒಂದು ಭಾಗ ಸೊಂಟದ ಸುತ್ತು ಸುತ್ತಿದ್ದು, ತದನಂತರ ಹೆಗಲು ಹಾಗೂ ತಲೆಯ ಭಾಗವನ್ನು ಸುತ್ತಿ ಮೇಲ್‌ವಸ್ತ್ರದಂತೆ ಧರಿಸುತ್ತಾರೆ.

ಆಹಿರ್‌ ಎಂಬ ಇನ್ನೊಂದು ಹರಿಯಾಣದ ಮುಖ್ಯ ಪಂಗಡದಲ್ಲಿ ಸ್ತ್ರೀಯರು ಅಂಗಿಯಾ ಲೆಹಂಗಾ ಹಾಗೂ ಚುಂದರ್‌ ಧರಿಸುತ್ತಾರೆ.

“ಅಂಗಿಯಾ’ದ ವಿಶೇಷವೆಂದರೆ ಇದು ಕುಪ್ಪಸದಂತೆ ವಿನ್ಯಾಸಮಾಡಲಾಗಿದ್ದರೂ ಉದ್ದವಾಗಿದ್ದು ಅಂದವಾದ ವಿನ್ಯಾಸ ಹೊಂದಿರುತ್ತದೆ. ಇದರ ಸುತ್ತ ಓಢನಿ ಸುತ್ತಿಕೊಳ್ಳುವುದು ಸಾಮಾನ್ಯ.

ಹರಿಯಾಣದ ಮಹಿಳೆಯರ ಸಾಂಪ್ರದಾಯಿಕ ಉಡುಗೆಗೆ ವಿಶೇಷ ಮೆರುಗು ನೀಡುವುದು ಭಾರತೀಯ ಶೈಲಿಯ ಪಾದರಕ್ಷೆ! ಈ ಸಾಂಪ್ರದಾಯಿಕ ಪಾದರಕ್ಷೆಗೆ “ಜುಟ್ಟಿ’ ಎಂದು ಕರೆಯುತ್ತಾರೆ.

Advertisement

ಹರಿಯಾಣದ ಮಹಿಳೆಯರು ಅಧಿಕವಾಗಿ ಕೃಷಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಈ ಬಗೆಯ ಸಾಂಪ್ರದಾಯಿಕ ವಸ್ತ್ರವಿನ್ಯಾಸ ಆರಾಮದಾ ಯಕವಾಗಿರುತ್ತದೆ. ಹರಿಯಾಣದ ಅಗರ್‌ವಾಲ್‌ ಪಂಗಡದ ಮಹಿಳೆಯರು ಸೀರೆಯನ್ನು ಅಧಿಕ ಉಡುತ್ತಾರೆ.

ಹರಿಯಾಣದ ವಧು
ವಧುವಿನ ಸಾಂಪ್ರದಾಯಿಕ ತೊಡುಗೆಯೂ ಇತ್ತೀಚಿನ ದಶಕಗಳಲ್ಲಿ ವೈವಿಧ್ಯತೆಯೊಂದಿಗೆ ಜನಪ್ರಿಯತೆಯನ್ನು ಪಡೆದುಕೊಂಡಿದೆ.

“ಥೇಲ್‌’ ಎಂದು ಕರೆಯಲಾಗುವ ಉದ್ದದ ನಿಲುವಂಗಿ (ಶರ್ಟ್‌ನಂತಿರುವ)ವನ್ನು ಮದುವೆಯ ದಿನ ವಿಶೇಷವಾಗಿ ಅಲಂಕರಿಸಿ ವಧುವಿಗೆ ತೊಡಿಸಲಾಗುತ್ತದೆ. ಘಾಗ್ರಾದಂತಿರುವ ಉಡುಗೆಗೆ “ಘಾಗ್ರಾ’ ಎಂದು ಕರೆಯಲಾಗುತ್ತದೆ. ಥೇಲ್‌ನೊಂದಿಗೆ ಘಾಗ್ರಾವನ್ನು ತೊಟ್ಟ ಅಲಂಕೃತ ವಧುವು ವೈಭಯುತ ಕಸೂತಿ ಹಾಗೂ ಜರಿಯ ವಿನ್ಯಾಸಗಳನ್ನು ಹೊಂದಿರುವ ಓಢನಿಯನ್ನು ತೊಡುತ್ತಾರೆ.

ಅಂತೆಯೇ ಗಾಢ ರಂಗಿನ, ವೈಭವಯುತ ವಿನ್ಯಾಸದ ಲೆಹಂಗಾ ಹಾಗೂ ಅಂಗಿಯಾ ಕೂಡ ಹರಿಯಾಣದ ವಧುವಿನ ಸಾಂಪ್ರದಾಯಿಕ ತೊಡುಗೆಯಾಗಿದೆ. ಕೆಲವು ವರ್ಗಗಳಲ್ಲಿ ಸೀರೆಯೂ ಸಾಂಪ್ರದಾಯಿಕ ತೊಡುಗೆಯಾಗಿದೆ. ಹೀಗೆ ಹರಿಯಾಣದ ಸಾಂಪ್ರದಾಯಿಕ ವಧುವಿನ ಉಡುಗೆ- ತೊಡುಗೆಯೂ ಮಹತ್ವಪೂರ್ಣ ವೈವಿಧ್ಯತೆ ಪಡೆದುಕೊಂಡಿದೆ.

ಈ ಸಾಂಪ್ರದಾಯಿಕ ಉಡುಗೆಗೆ ತನ್ನದೇ ಆದ “ಹರಿಯಾಣೀ’ ಸೊಬಗನ್ನು ನೀಡುವುದು ಸಾಂಪ್ರದಾಯಿಕ ಆಭರಣಗಳ ಶೃಂಗಾರ! ಕತ್ಲಾ ಎಂದು ಕರೆಯುವ ಕುತ್ತಿಗೆಯ ಆಭರಣ, ಬೋರ್ಲಾ ಎನ್ನುವ ವಿಶೇಷ ವಿನ್ಯಾಸದ ಕೂದಲಿನ ಆಭರಣ, “ನಾಥ್‌’ ಎಂಬ ವಿಶೇಷ ಮೂಗಿನ ನತ್ತು, ಹನ್‌ಸಿಲ್‌ ಎಂಬ ಸಾಂಪ್ರದಾಯಿಕ ಬಳೆಗಳು- ಇವು ಹರಿಯಾಣದ ಸಾಂಪ್ರದಾಯಿಕ ಉಡುಗೆಯೊಂದಿಗೆ ವಧುವು ತೊಡುವ ಸಾಂಪ್ರದಾಯಿಕ ಆಭರಣವಾಗಿದೆ.

ಇಂದು ಹರಿಯಾಣದ ಮಹಿಳೆಯರ ಸಾಂಪ್ರದಾಯಿಕ ತೊಡುಗೆ ತನ್ನ ಆಕರ್ಷಣೆಯಿಂದಾಗಿ ಕೇವಲ ಹರಿಯಾಣದ ಪ್ರದೇಶವಷ್ಟೇ ಸೀಮಿತವಾಗದೆ ಭಾರತದ ಎಲ್ಲೆಡೆಯೂ ಪ್ರಪಂಚದ ಹಲವೆಡೆಯೂ ಧರಿಸಲ್ಪಡುವ ತೊಡುಗೆಯಾಗಿದೆ! “ವಿಶ್ವಗ್ರಾಮ’ ಅಥವಾ “ಗ್ಲೋಬಲ್‌ ವಿಲೇಜ್‌’ನ ಪರಿಣಾಮ ಸ್ವರೂಪೀ ಆಧುನಿಕತೆಗೆ ಹರಿಯಾಣದ ಉಡುಗೆ-ತೊಡುಗೆಯ ಸಾಂಪ್ರದಾಯಿಕ ಜನಪ್ರಿಯತೆಯನ್ನು ಸಮೀಕರಿಸಬಹುದಷ್ಟೇ!

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next