Advertisement

ಸಲ್ವಾರ್‌ ಕಮೀಜ್‌ ದುಪ್ಪಟ್ಟಾ

07:34 PM Oct 03, 2019 | mahesh |

ಪಾಂಡಿಚೇರಿ ಮಹಿಳೆಯರು ದಿರಿಸುಗಳು ಪಾಂಡಿಚೇರಿಯ ಪ್ರಾದೇಶಿಕ ವೈವಿಧ್ಯ ಹಾಗೂ ಸಾಂಸ್ಕೃತಿಕ ವೈಭವವು ಭಾರತ ಹಾಗೂ ಫ್ರಾನ್ಸ್‌ನ ಪ್ರಭಾವವನ್ನು ಹೊಂದಿದೆ.

Advertisement

ಭಾರತದ ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿಯಲ್ಲಿ ಪಾರಂಪರಿಕ ಹಾಗೂ ಆಧುನಿಕ ಉಡುಗೆ-ತೊಡುಗೆಗಳ ಧಾರಣೆ ಮಹತ್ವ ಪಡೆದುಕೊಂಡಿದೆ. ಪ್ರಾಂತೀಯ ಭಾಗದಂತೆ, ಹಳ್ಳಿಗಳ ವಾತಾವರಣದ ಜನತೆಯಲ್ಲೂ , ನಗರದ ನಾಗರೀಕತೆಯ ಜನತೆಯಲ್ಲೂ ವೈವಿಧ್ಯಮಯ ತೊಡುಗೆಗಳು ಜನಪ್ರಿಯವಾಗಿವೆ.

ಪಾಂಡಿಚೇರಿಯ ಮಹಿಳೆಯರು ಭಾರತೀಯ ಶೈಲಿಯಲ್ಲಿ ಸೀರೆ ಹಾಗೂ ಕುಪ್ಪಸ ತೊಡುವಂತೆ, ಉದ್ದದ ಸ್ಕರ್ಟ್‌ನಂತಹ ದಿರಿಸನ್ನೂ ಧರಿಸುತ್ತಾರೆ. ಅಂತೆಯೇ ಹಲವು ತಮಿಳು ಮೂಲದ ಹಬ್ಬಗಳು ಯುರೋಪ್‌ನ ಅದರಲ್ಲೂ ಫ್ರಾನ್ಸ್‌ ನ ಪ್ರಭಾವ ಹೊಂದಿರುವ ಉತ್ಸವಗಳು ಇಲ್ಲಿ ಜನಪ್ರಿಯ. ಅಂತಹ ಸಂದರ್ಭಗಳಲ್ಲಿ ಧರಿಸುವ, ಅದರಲ್ಲೂ ನೃತ್ಯಗಳಲ್ಲಿ ಧರಿಸುವ ದಿರಿಸುಗಳು ಪಾಂಡಿಚೇರಿಯ ವಿಶಿಷ್ಟತೆಯಾಗಿದೆ.

ದೆಹಲಿಯ ಮಹಿಳೆಯರ ದಿರಿಸುಗಳು
ಕಾಸ್ಮೋಪಾಲಿಟನ್‌ ನಗರವಾಗಿರುವ ದೆಹಲಿ ಬಹು ಸಂಸ್ಕೃತಿಗಳ ಆಗರ! ಹತ್ತುಹಲವು ಬಗೆಯ ಸಾಂಪ್ರದಾಯಿಕ ತೊಡುಗೆಗಳ ಮಿಶ್ರಣ ಇಲ್ಲಿ ಕಾಣಸಿಗುತ್ತದೆ.

ಮುಖ್ಯವಾಗಿ ಪ್ರಾದೇಶಿಕ ವೈಶಿಷ್ಟ್ಯತೆಯೊಂದಿಗೆ ಸಾಂಪ್ರದಾಯಿಕ ಉಡುಗೆಯನ್ನು ಸಮೀಕರಿಸುವುದಾದರೆ ಸಲ್ವಾರ್‌ ಕಮೀಜ್‌ ಹಾಗೂ ದುಪ್ಪಟ್ಟಾ ಅತ್ಯಧಿಕ ಆಕರ್ಷಣೆ, ವೈವಿಧ್ಯ ಹಾಗೂ ಮೆರುಗಿನಿಂದ ಧರಿಸುವ ದಿರಿಸು! ಟರ್ಕೊ- ಮಂಗಲೋಲ್‌ ಅಥವಾ ಟರ್ಕೊ ಪರ್ಶಿಯನ್‌ ವಸ್ತ್ರವಿನ್ಯಾಸವು ಪ್ರಾಚೀನ ಕಾಲದಿಂದಲೂ ದೆಹಲಿಯ ಮೇಲೆ ಪ್ರಭಾವ ಬೀರಿದೆ.

Advertisement

ಸಲ್ವಾರ್‌ಗಳನ್ನು ವಿಶಿಷ್ಟ ಕಸೂತಿ, ಹರಳುಗಳೊಂದಿಗೆ ವಿಶೇಷ ಸಮಾರಂಭಗಳಲ್ಲಿ ಧರಿಸಲಾಗುತ್ತದೆ. ಪ್ರಸಿದ್ಧ ವಸ್ತ್ರವಿನ್ಯಾಸಕಾರರಾದ ರಿತು ಕುಮಾರ್‌ ಸವ್ಯವಾಚಿ ಮುಖರ್ಜಿ ಹಾಗೂ ನೀತಾಲಲ್ಲಾ ಇವರು ವಿಶೇಷ ಕಸೂತಿ ವಿನ್ಯಾಸವಾದ ಝರ್‌ದೋಸಿ ಎಂಬ ಪರ್ಷಿಯನ್‌ ಶೈಲಿಯ ಕಸೂತಿಯನ್ನು ಜನಪ್ರಿಯಗೊಳಿಸಿದರು.

ಇದರ ವೈಶಿಷ್ಟ್ಯವೆಂದರೆ ಸಾಮಾನ್ಯ ದಾರದ ಕಸೂತಿ ಶೈಲಿಯಲ್ಲದೆ, ಚಿನ್ನದ ಹಾಗೂ ಬೆಳ್ಳಿಯ ದಾರಗಳಿಂದಲೂ ಶ್ರೀಮಂತ ಕಸೂತಿ ಶೃಂಗಾರವನ್ನು ಮಾಡಬಹುದಾಗಿದೆ.
ಚಳಿಗಾಲದಲ್ಲಿ ಅಧಿಕ ಚಳಿ ಇರುವುದರಿಂದ ಅಧಿಕ ಉಣ್ಣೆಯ ದಿರಿಸುಗಳು ಅತೀ ಅಗತ್ಯ. ಅಂತೆಯೇ ಬೇಸಿಗೆಯಲ್ಲಿಯೂ ಅಧಿಕ ತಾಪಮಾನವಿರುವುದರಿಂದ ಸಡಿಲವಾದ, ಆರಾಮದಾಯಕ ಹತ್ತಿಯ ವಸ್ತ್ರವಿನ್ಯಾಸಗಳು ಎಲ್ಲೆಡೆಯೂ ಜನಪ್ರಿಯ.

ಸಲ್ವಾರ್‌ ಕಮೀಜ್‌ಗಳಲ್ಲೂ ಪಂಜಾಬಿ ಸಲ್ವಾರ್‌, ಸಿಂಧಿ ಸುತನ್‌, ಡೋಗ್ರಿ ಪೈಜಾಮಾ ಹಾಗೂ ಕಾಶ್ಮೀರಿ ಸುತನ್‌ ಎಂಬ ವೈವಿಧ್ಯಗಳಿರುವುದು ಇನ್ನೊಂದು ವಿಶೇಷತೆ.
ಭಾರತದ ಇನ್ನೊಂದು ಕೇಂದ್ರಾಡಳಿತ ಪ್ರದೇಶವಾದ ದಿಯುದಾಮನ್‌ನಲ್ಲಿಯೂ ವೈವಿಧ್ಯಮಯ ಉಡುಗೆ-ತೊಡುಗೆಗಳಿವೆ.

ಪಲ್ಲೋ ಮತ್ತು ಸಾರಿ, ನವ್ವಾರಿ ಸಾರಿ- ಹೀಗೆ ಸಹಜ ಉದ್ದದ ಮತ್ತು ಅಧಿಕ ಉದ್ದದ ಸೀರೆಗಳು ಸಾಂಪ್ರದಾಯಿಕ ಮೆರುಗಿನೊಂದಿಗೆ ಮಹತ್ವ ಪಡೆದಿವೆ.

ದಿಯು ದಾಮನ್‌ನ ಮುಖ್ಯ ಮಾರುಕಟ್ಟೆಗಳಲ್ಲಿ ವೈವಿಧ್ಯಮಯ ಇಂತಹ ದಿರಿಸುಗಳು ಕಾಣಸಿಗುತ್ತವೆ. ದಾದ್ರಾ ಹಾಗೂ ನಗರ ಹವೇಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಪೋರ್ಚುಗೀಸ್‌ ಸಂಸ್ಕೃತಿಯ ಛಾಯೆ ಉಡುಗೆಗಳಲ್ಲಿ ಕಾಣಸಿಗುತ್ತದೆ. ದೋಹಿಯಾ, ಕೋಕ್ನಾ ಮತ್ತು ವಾರ್ಲಿ ಎಂಬ ಮೂರು ಮುಖ್ಯ ಪಂಗಡಗಳಲ್ಲಿ ವೈವಿಧ್ಯಮಯ ದಿರಿಸುಗಳಿವೆ. ದೋಹಿಯಾ ಹಾಗೂ ಕೋಕ್ನಾ ಮಹಿಳೆಯರು ಸೀರೆ (ಅಧಿಕವಾಗಿ ನೀಲಿ ಬಣ್ಣದ) ಉಡುತ್ತಾರೆ. ಅದರೊಂದಿಗೆ ವಿಶೇಷ ಟ್ಯಾಟೋಗಳಿಂದ ಅಲಂಕರಿಸುವುದು ಇಲ್ಲಿ ಸಾಮಾನ್ಯ. ವಾರ್ಲಿ ಪಂಗಡದ ಮಹಿಳೆಯರು ಧರಿಸುವ ವಸ್ತ್ರವೈವಿಧ್ಯಕ್ಕೆ ಪಧರ್‌ ಎಂದು ಕರೆಯುತ್ತಾರೆ.

ಹೀಗೆ ಈ ಕೇಂದ್ರಾಡಳಿತ ಪ್ರದೇಶದ ದಿರಿಸುಗಳು ಬಹುಮುಖಿ ಸಂಸ್ಕೃತಿಯ ದ್ಯೋತಕವಾಗಿವೆ.

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next