Advertisement

ಸಾಂಪ್ರದಾಯಿಕ ಸಡಗರ

09:58 AM Mar 28, 2020 | mahesh |

ಹಬ್ಬದ ಸಂಭ್ರಮವನ್ನು ಕೊರೊನಾ ನುಂಗಿಬಿಟ್ಟಿದೆ. ಮನೆಯಿಂದ ಹೊರಗೆ ಹೋಗುವಂತಿಲ್ಲ. ಯುಗಾದಿ ಶಾಪಿಂಗ್‌ ಮಾಡೇ ಇಲ್ಲ ಅಂತಿದ್ದೀರಾ? ಚಿಂತೆ ಬೇಡ. ವಾರ್ಡ್‌ರೋಬ್‌ನಲ್ಲಿರುವ ಸಾಂಪ್ರದಾಯಿಕ ಉಡುಗೆಗಳನ್ನೇ ಹೊಸ ಬಗೆಯಲ್ಲಿ ತೊಟ್ಟು ಸಂಭ್ರಮಿಸಿ.

Advertisement

ಬಾಗಿಲ ಮೇಲೆ ಮಾವಿನ ತೋರಣ, ಅಂಗಳದಲ್ಲಿ ಬಣ್ಣದ ರಂಗೋಲಿ, ಎಣ್ಣೆ ಸ್ನಾನ, ಹೊಸ ಬಟ್ಟೆ, ಅಂದದ ಒಡವೆ, ವಿಶೇಷ ತಿನಿಸುಗಳು, ಪೂಜೆ – ಪುನಸ್ಕಾರ, ಭಜನೆ-ಆರಾಧನೆ, ದಾನ – ಧರ್ಮ, ಬೇವು-ಬೆಲ್ಲ, ದೇವಸ್ಥಾನಕ್ಕೆ ಭೇಟಿ… ಇವೆಲ್ಲವೂ ಯುಗಾದಿಯ ವೈಶಿಷ್ಟ್ಯ. ಕೊರೋನಾ ಭೀತಿಯ ನಡುವೆಯೂ ಜನರು ತಮ್ಮ ತಮ್ಮ ಮನೆಯಲ್ಲೇ ಹಬ್ಬ ಆಚರಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹೊರಗೆಲ್ಲೂ ಹೋಗಲು ಆಗುತ್ತಿಲ್ಲ ಅಂತ ಕೊರಗಬೇಡಿ. ಮನೆಯಲ್ಲೇ ಹೊಸಬಟ್ಟೆ ತೊಟ್ಟು, ಹಬ್ಬದ ಕಳೆಯನ್ನು ಹೆಚ್ಚಿಸಿ.

ಲಂಗ ದಾವಣಿ ಚೆಲುವು
ಹಬ್ಬದ ದಿನವಲ್ವಾ ಲಂಗ ದಾವಣಿ ತೊಡುತ್ತೇನೆ ಅಂದುಕೊಂಡವರಿಗಂತೂ, ರವಿಕೆಯಲ್ಲಿ ಬಗೆ ಬಗೆಯ ಆಯ್ಕೆಗಳಿವೆ. ಪಫ್ ಸ್ಲೀವ್ಸ್, ಥ್ರಿ ಫೋರ್ಥ್ (ಮುಕ್ಕಾಲು) ಸ್ಲೀವ್ಸ್, ಕ್ಯಾಪ್‌ ಸ್ಲೀವ್ಸ್, ಫ‌ುಲ್‌ ಸ್ಲೀವ್ಸ್ ಇತ್ಯಾದಿ. ದುಪಟ್ಟಾದಲ್ಲೂ ಜರಿ, ನೆಟ್‌ (ಪರದೆ), ಟಿಕ್ಲಿ, ಮತ್ತಿತರ ಅಲಂಕಾರಿಕ ವಸ್ತುಗಳನ್ನು ಬಳಸಿ, ಅಂದ ಹೆಚ್ಚಿಸಬಹುದು. ರವಿಕೆಯ ತೋಳುಗಳಷ್ಟೇ ಅಲ್ಲ, ಅದರ ಕುತ್ತಿಗೆ ಮತ್ತು ಬೆನ್ನಿನ ಡಿಸೈನ್‌ಗೂ ಬಹಳ ಬೇಡಿಕೆ ಇದೆ. ರವಿಕೆಯ ತೋಳುಗಳು ಮತ್ತು ದುಪಟ್ಟಾದ ತುದಿಗೆ ಮಣಿ, ಗೆಜ್ಜೆ, ಟ್ಯಾಸೆಲ…, ಮಿರರ್‌ ವರ್ಕ್‌, ಕಸೂತಿ, ಬಣ್ಣದ ಕಲ್ಲುಗಳು, ಇತ್ಯಾದಿಗಳನ್ನು ಪೋಣಿಸಿ ಅವುಗಳ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು. ಕಿವಿಯೋಲೆಗೆ ಮ್ಯಾಚ್‌ ಆಗುವಂಥ ಸರ ಮತ್ತು ಕೈ ಬಳೆಗಳನ್ನು ತೊಟ್ಟರೆ ಹಬ್ಬದ ಲುಕ್‌ ಕಂಪ್ಲೀಟ್‌ ಆಗುತ್ತದೆ! ಅದೇ ಮಾದರಿಯ ಕಾಲ್ಗೆಜ್ಜೆ ಮತ್ತು ಸೊಂಟ ಪಟ್ಟಿ ಇದ್ದರೆ ಇನ್ನೂ ಚೆನ್ನ.

ಉದ್ದ ಲಂಗದ ಮೆರುಗು
ದುಪಟ್ಟಾ ಇಲ್ಲದೆಯೂ ಲಂಗದ ಜೊತೆ ಸೈಲಿಶ್‌ ರವಿಕೆ ತೊಟ್ಟು ಹಬ್ಬದ ಲುಕ್‌ ಪಡೆಯಬಹುದು. ಮುಂದೆ ಬಟನ್‌ (ಗುಂಡಿ) ಇರುವ ರವಿಕೆಗೆ ಕಾಲರ್‌ ಆಯ್ಕೆ ಇದೆ. ಕ್ರಾಪ್‌ ಟಾಪ್‌ಗೆ ಹೋಲುವ ರವಿಕೆಗೆ ಹಿಂದೆ (ಬೆನ್ನ ಮೇಲೆ) ಬಟನ್‌ ಇರುತ್ತದೆ. ಇಂಥ ರವಿಕೆಗೆ ಬಟನ್‌ ಅಲ್ಲದೆ ಲಾಡಿ, ಜಿಪ್‌ ಮತ್ತು ಇಲಾಸ್ಟಿಕ್‌ನ ಆಯ್ಕೆಯೂ ಇದೆ. ಸೊಂಟದಿಂದ ಶುರುವಾಗುವ ಬದಲು, ಹೊಟ್ಟೆ ಮುಚ್ಚುವ ಲಂಗಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಹಾಗಾಗಿ ನಿಮಗಿಷ್ಟದ, ನಿಮಗೊಪ್ಪುವ ಶೈಲಿಯ ಮೇಕ್‌ ಓವರ್‌ ಪಡೆದ ಲಂಗ ದಾವಣಿ, ಉದ್ದ ಲಂಗ ಅಥವಾ ಇತರ ಸಾಂಪ್ರದಾಯಿಕ ಉಡುಗೆಯನ್ನು ಈ ಯುಗಾದಿ ದಿನ ತೊಟ್ಟು ಸಂಭ್ರಮಿಸಿ.

ಕಾಲ ಗೆಜ್ಜೆ ಘಲಕ್ಕು
ಹಬ್ಬದ ದಿನ ಮನೆಯಲ್ಲಿ ಅಮ್ಮನ ಕೈ ಬಳೆಯ ಸದ್ದು, ಹೆಣ್ಮಕ್ಕಳ ಕಾಲ್ಗೆಜ್ಜೆಯ ದನಿ ಕೇಳಿಸದಿದ್ದರೆ, ಹಬ್ಬಕ್ಕೇನು ಕಳೆಯಿದೆ ಹೇಳಿ? ಶಬ್ದವನ್ನೇ ಮಾಡದೆ, ಕಾಲಿನ ಅಂದವನ್ನು ಹೆಚ್ಚಿಸುವ ಗೆಜ್ಜೆಗಳೂ ಬಂದಿವೆ. ಆದರೆ, ಲಂಗ ತೊಟ್ಟರೆ ಕಾಲ್‌ ಗೆಜ್ಜೆ ಕಾಣಿಸುವುದಿಲ್ಲ. ಹಾಗಾಗಿ, ನೋಡಲು ಅಂದವಾಗಿರುವ ಗೆಜ್ಜೆಗಿಂತ ಘಲ್‌ಘಲ್‌ ಎಂದು ಸದ್ದು ಮಾಡುವ ಗೆಜ್ಜೆಗಳೇ ಹಬ್ಬಕ್ಕೆ ಚೆನ್ನ. ಮುಕ್ಕಾಲು ಪ್ಯಾಂಟ…, ಲೆಗಿಂಗÕ… ಅಥವಾ ಧೋತಿ ಪ್ಯಾಂಟ್‌ ಅನ್ನು ಕುರ್ತಿ ಜೊತೆ ತೊಡುವುದಾದರೆ ಕಣ್ಣಿಗೆ ಕಾಣಿಸುವಂಥ ಅಂದದ ಕಾಲ್‌ ಗೆಜ್ಜೆ ಧರಿಸಬಹುದು.

Advertisement

ಸೀರೆಯ ನೀರೆಗೆ…
ಗ್ರ್ಯಾಂಡ್‌ ಸೀರೆ ಉಡುವ ಯುವತಿಯರ ಮೇಕ್‌ ಅಪ್‌ ಹಾಗೂ ಒಡವೆಗಳು ಸಿಂಪಲ್‌ ಆಗಿದ್ದರೇ ಚೆನ್ನ. ಅದೇ ಸೀರೆ ಸಿಂಪಲ್‌ ಆಗಿದ್ದರೆ, ಬೋಲ್ಡ… ಮೇಕ್‌ಅಪ್‌ ಮಾಡಿಕೊಂಡು, ಹೆಚ್ಚು ಆ್ಯಕ್ಸೆಸರೀಸ್‌ ಅಥವಾ ಕಣ್ಣಿಗೆ ಕುಕ್ಕುವಂಥ ದೊಡ್ಡ ಗಾತ್ರದ ಒಡವೆಗಳನ್ನು ತೊಡಬಹುದು.

ಸೆಲ್ಫಿ ಬೇಕೇ ಬೇಕು
ಕೊರೊನಾ ಕಾರಣದಿಂದ ಈ ಬಾರಿಯ ಯುಗಾದಿಯನ್ನು ನಿಮ್ಮ ಕುಟುಂಬದವರ ಜೊತೆ ಮಾತ್ರ ಆಚರಿಸಬಹುದಾಗಿದೆ. ಜನ ಜಂಗುಳಿ, ದಟ್ಟಣೆ ಇರುವ ಕಡೆ ಹೋಗುವಂತಿಲ್ಲ. ಆದರೆ, ಆಚರಣೆಯನ್ನು ಅವಿಸ್ಮರಣೀಯ ಮಾಡಬಹುದು. ಹೇಗೆಂದರೆ, ಒಳ್ಳೊಳ್ಳೆ ಉಡುಗೆ ತೊಟ್ಟು, ಸೆಲ್ಫಿ ಕ್ಲಿಕ್ಕಿಸಿ, ಇತರರೊಂದಿಗೆ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಬಹುದು. ಹಬ್ಬದ ಸವಿ ನೆನಪನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು, ಆಲ್ಬಮ್‌ನಲ್ಲೋ ಫೋನ್‌ ಸ್ಟೋರೇಜ್‌ನಲ್ಲೋ ಭಧ್ರವಾಗಿರಿಸಬಹುದು. ಏನಂತೀರಿ?

-ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next