Advertisement

ಆಧುನಿಕತೆಯಲ್ಲೂ ಸಾಂಪ್ರದಾಯಿಕ ಕೃಷಿ

01:13 PM Jul 19, 2019 | Suhan S |

ಮಾಗಡಿ: ಕೃಷಿಯಲ್ಲಿ ಆಧುನಿಕ ಯಂತ್ರಗಳ ಭರಾಟೆಯ ನಡುವೆಯೂ ಸಾಂಪ್ರದಾಯಿಕ ಕೂರಿಗೆ ಮೂಲಕ ರೈತರು ರಾಗಿ ಬಿತ್ತನೆ ಚಟುವಟಿಕೆ ನಡೆಸುತ್ತಿದ್ದಾರೆ. ಮತ್ತೂಂದೆ ಹೆಚ್ಚು ಭೂಮಿಯುಳ್ಳವರು ಸಮಯ ಆಳು, ಕೂಲಿ ಉಳಿತಾಯವಾಗುತ್ತದೆ ಎಂಬ ಕಾರಣಕ್ಕೆ ಆಧುನಿಕ ಯಂತ್ರಗಳಿಂದಲೇ ರಾಗಿ ಬಿತ್ತನೆಯಲ್ಲಿ ತೊಡಿಸಿಕೊಂಡಿದ್ದಾರೆ.

Advertisement

ಇದೇ ರೀತಿ ಕಳೆ ತೆಗೆಯುವುದು, ಔಷಧ ಸಿಂಪಡಿಸುವುದು, ರಾಗಿ ಬೆಳೆ ಕಟಾವು ಯಂತ್ರ, ಒಕ್ಕಾಣೆ ಯಂತ್ರ, ಕಾಳು ಸುಳಿಯುವ ಯಂತ್ರಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು ರೈತರನ್ನು ಆಕರ್ಷಿಸುತ್ತಿವೆ. ಸರ್ಕಾರ ಸಹ ರೈತರನ್ನು ಆಧುನಿಕ ಯಂತ್ರಗಳತ್ತ ಪ್ರೋತ್ಸಾಹಿಸುತ್ತಿದೆ. ಮೊದಲು ಎತ್ತುಗಳನ್ನು ಕೂರಿಗೆಗೆ ಕಟ್ಟಿ ರಾಗಿ ಬಿತ್ತನೆ ಮಾಡಲಾಗುತ್ತಿತ್ತು. ಈಗಲೂ ಪೂರ್ವಜರ ಪದ್ಧತಿ ಮುಂದುವರಿದಿದೆ.

ಟ್ರ್ಯಾಕ್ಟರ್‌ ಮೂಲಕ ಉಳಿಮೆಯೇ ಅನುಕೂಲ: ಒಂದು ಎಕರೆ ಜಮೀನು ನೇಗಿಲಿನಿಂದ ಉಳುಮೆ ಮಾಡಬೇಕಾದರೆ ಕನಿಷ್ಠ ಒಂದು ದಿನ ಸಮಯ ಬೇಕಾಗುತ್ತದೆ. ಜೊತೆಗೆ ಕನಿಷ್ಠ 1,500 ರೂ. ಹೆಚ್ಚು ಕೂಲಿಯೂ ಕೊಡಬೇಕಾಗುತ್ತದೆ. ಅದೇ ಒಂದು ಎಕರೆ ಜಮೀನು ಟ್ರ್ಯಾಕ್ಟರ್‌ ಮೂಲಕ ಉಳಿಮೆ ಮಾಡಲು ಕೇವಲ ಒಂದು ಗಂಟೆ ಸಾಕಾಗುತ್ತದೆ. ಕನಿಷ್ಠ 800 ರೂ., ವೆಚ್ಚವೂ ಕಡಿಮೆಯಾಗುತ್ತದೆ.

ತಾಲೂಕಿನಲ್ಲಿ ಮಳೆ ಕೊರತೆ: ತಾಲೂಕಿನಲ್ಲಿ ವಾಡಿಕೆಯಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಮುಂಗಾರು ಕೈಕೊಟ್ಟಿದ್ದು, ಕೃಷಿ ಚಟುವಟಿಕೆಯೂ ಸಹ ಕುಂಠಿತಗೊಂಡಿದೆ. ಈ ತಿಂಗಳ ಆರಂಭದಲ್ಲೇ ಬಿತ್ತನೆ ಮಾಡಬೇಕಿತ್ತು. ಬಹುತೇಕ ರೈತರು ಸರಿಯಾಗಿ ಇನ್ನೂ ಉಳಿಮೆಯೇ ಮಾಡಿಲ್ಲ. ಬಿತ್ತನೆ ತಡವಾಗಿದೆ ಎಂಬ ಕಾರಣದಿಂದ ಉಳಿಮೆ ಮಾಡಿರುವ ರೈತರು, ಆಗಾಗ್ಗೆ ಬೀಳುತ್ತಿರುವ ಮಳೆಗೆ ರಾಗಿ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ.

ಯುವಕರು ಕೃಷಿಯಿಂದ ದೂರ: ಕೃಷಿ ಚಟುವಟಿಕೆಯತ್ತ ಯುವಕರು ಆಕರ್ಷಿಸಲು ಯಂತ್ರಗಳು ಮಾರುಕಟ್ಟೆ ಲಗ್ಗೆಯಿಟ್ಟಿವೆ. ಆದರೆ, ಭೂಮಿ, ಮಳೆ ಕೊರತೆಯಿಂದ ಯುವಕರು ನಗರ ಪ್ರದೇಶದತ್ತ ವಲಸೆ ಹೋಗಿ ಅಂಗಡಿ, ಕಂಪನಿಗಳಲ್ಲಿ ದುಡಿಮೆ ಮಾಡುತ್ತಿದ್ದಾರೆ. ಮತ್ತೂಂದೆಡೆ ತಮ್ಮ ಪೂರ್ವಜರಿಂದ ಬಂದ ಭೂಮಿಯನ್ನು ಮತ್ತು ದೇವರನ್ನು ನಂಬಿ ಹಿರಿಯರು ಕೃಷಿ ಚಟುವಟಿಕೆಯತ್ತ ಸಾಗುತ್ತಿದ್ದಾರೆ. ಏಕೆ ರೈತರ ಮಕ್ಕಳು ಕೃಷಿ ಚಟುವಟಿಕೆಯತ್ತ ಇಮ್ಮುಖರಾಗುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಬಹುತೇಕರಲ್ಲಿ ಮೂಡದೆ ಇರದು.

Advertisement

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ತಮ್ಮ ಮಗಳನ್ನು ರೈತನಿಗೆ ಕೊಟ್ಟರೆ ತನ್ನ ಮಗಳು ಹೊಲದಲ್ಲಿ ಬೇಸಾಯ ಮಾಡುವುದಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಯುವ ರೈತರಿಗೆ ಹೆಣ್ಣು ಕೊಡುತ್ತಿಲ್ಲ. ರೈತನ ಮಗ ರೈತನಾಗಿಯೇ ಇರಬೇಕಾ, ನನ್ನ ಮಗ ಅಕ್ಷರಸ್ಥನಾಗಿ ಸರ್ಕಾರಿ ಉದ್ಯೋಗಕ್ಕೆ ಹೋಗಬಾರದಾ? ಸರ್ಕಾರಿ ಅಥವಾ ಖಾಸಗಿ ಕಂಪನಿಯಲ್ಲಿಯೋ ದುಡಿಮೆ ಮಾಡಲಿ ಎಂಬ ಕಾರಣಕ್ಕಾಗಿ ಮಗನನ್ನು ಓದಿಸುತ್ತಿದ್ದೇವೆ ಎಂಬ ಉತ್ತರ ಪ್ರಗತಿಪರ ಹಿರಿಯ ರೈತರಿಂದಲೇ ಕೇಳಿ ಬರುತ್ತಿದೆ.

ಕೃಷಿಯಿಂದಲೇ ಹೆಚ್ಚು ಸಂಪಾದನೆ: ಇತ್ತ ಸರ್ಕಾರಿ ಮತ್ತು ಕಂಪನಿಗಳಲ್ಲಿ ದುಡಿಯುತ್ತಿದ್ದ ಕೆಲ ಡಾಕ್ಟರ್‌, ಎಂಜಿನಿಯರ್‌ ಗಳು ತಮ್ಮ ಗ್ರಾಮಕ್ಕೆ ತೆರಳಿ ಪೂರ್ವಿಕರು ಉಳಿಸಿರುವ ಜಮೀನಿನಲ್ಲಿ ಆಧುನಿಕ ಹಾಗೂ ತಾಂತ್ರಿಕ ಪದ್ಧತಿಯನ್ನು ಅಳವಡಿಸಿಕೊಂಡು ಸರ್ಕಾರಿ ಸಂಬಳಕ್ಕಿಂತ ಹೆಚ್ಚಿನ ಸಂಪಾದನೆ ಮಾಡುತ್ತಿದ್ದಾರೆ. ಕಂಪ್ಯೂಟರ್‌ ಎಂಜಿನಿಯರ್‌ ಆಗಿರುವ ಕಾವ್ಯ ಎಂಬ ಮಹಿಳೆ ತಾನು ಓದಿದ ವಿಷಯದಲ್ಲಿ ಡಾಕ್ಟರೇಟ್ ಪಡೆಯಲಿಲ್ಲ. ಅವರು ಕೃಷಿ ಚಟುವಟುಕೆಯಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡು ಯುವ ರೈತರಿಗೆ ಮಾದರಿಯಾಗಿದ್ದಾರೆ. ಇವರಂತೆ ಅನೇಕರು ಪ್ರಗತಿಪರ ರೈತರಾಗಿ ಸಾಧನೆಯ ಸಾಲಿನಲ್ಲಿ ನಿಂತಿರುವ ಉದಾಹರಣೆಗಳಿವೆ.

 

● ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next