Advertisement

ರತಿ-ಮನ್ಮಥರನ್ನು ನಗಿಸಿದರೆ 1.5 ಲಕ್ಷ ರೂ. ಬಹುಮಾನ

04:31 PM Mar 09, 2020 | Suhan S |

ರಾಣಿಬೆನ್ನೂರ: ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹೋಳಿ ಹಬ್ಬದ ನಿಮಿತ್ತ ರತಿ-ಕಾಮನ ಮೂರ್ತಿ ಪ್ರತಿಷ್ಠಾಪಿಸುವುದು. ಹಲಗೆ ಭಾರಿಸುವುದು, ಓಕುಳಿ ಆಡುವುದು ಸಾಮಾನ್ಯ. ಆದರೆ, ಜಿಲ್ಲೆಯ ರಾಣಿಬೆನ್ನೂರು ಸೇರಿದಂತೆ ಇನ್ನೂ ಕೆಲವಡೆ ಜೀವಂತ ಕಾಮ-ರತಿಯರ್ನನೇ ಕೂಡಿಸಿ ಅವರನ್ನು ನಗಿಸುವ ಸ್ಪರ್ಧೆ ಏರ್ಪಡಿಸುವುದು ವಿಶೇಷ.

Advertisement

ಇಲ್ಲಿ ರತಿ-ಕಾಮನ ಪಾತ್ರದಲ್ಲಿ ಕುಳಿತವರು ಗಂಭೀರವಾಗಿರುತ್ತಾರೆ. ಯಾರೂ ಏನೇ ಹೇಳಿದರೂ ತುಟಿ ಪಿಟಿಕಿಸಲ್ಲ. ಮೊಗದಲ್ಲಿ ಸಣ್ಣದೊಂದು ಮುಗುಣ್ನಗೆ ಸಹ ಬರದಂತೆ ಪ್ರತಿಜ್ಞೆ ಮಾಡಿಕೊಂಡವರ ರೀತಿ ಕುಳಿತಿರುತ್ತಾರೆ. ಕಾಮ-ರತಿಯರನ್ನು ನಗಿಸಿದವರಿಗೆ 1.5 ಲಕ್ಷ ರೂ. ವರೆಗೂ ಬಹುಮಾನ ಇಡಲಾಗಿರುತ್ತದೆ. 61 ವರ್ಷದಿಂದ ಮುಂದುವರಿಸಿಕೊಂಡು ಬರುತ್ತಿರುವ ಈ ಸಂಪ್ರದಾಯದಲ್ಲಿ ಈ ವರೆಗೂ ಕಾಮ ರತಿಯರನ್ನು ನಗಿಸಿ ಬಹುಮಾನ ಪಡೆಯುವ ಅದೃಷ್ಟ ಯಾರಿಗೂ ಒಲಿದಿಲ್ಲ ಎನ್ನುವುದೇ ಅಚ್ಚರಿ ಸಂಗತಿ.

ಇಲ್ಲಿನ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದ ಸಮಿತಿ, ಶ್ರೀ ಶಕ್ತಿ ಯುವಕ ಸಂಘ, ವೀರೆಂದ್ರ ಡ್ರೆಸ್‌ಲ್ಯಾಂಡ್‌ ವಿವಿಧ ಸಂಘ ಸಂಸ್ಥೆಗಳು ಕಳೆದ 61 ವರ್ಷಗಳಿಂದ ಜೀವಂತ ರತಿ ಕಾಮಣ್ಣರನ್ನು ಕೂಡಿಸುವ ಪದ್ಧತಿ ಬೆಳೆದು ಬಂದಿದ್ದು, ಇವರನ್ನು ನಗಿಸಲು ಸಾರ್ವಜನಿಕರು ದ್ವಂದ್ವಾರ್ಥದ ಸಂಭಾಷಣೆಗಳು, ಅಂಗ ಚೇಷ್ಟೆಗಳು, ಪೋಲಿ ಮಾತುಗಳು, ಬೈಗುಳಗಳು ಹಾಗೂ ಹಾಸ್ಯ ಚಟಾಕಿಗಳ ಮೂಲಕ ಪ್ರಯತ್ನಿಸಿದರೂ ತುಟಿ ಬಿಚ್ಚುವುದಿಲ್ಲ. ನಗಿಸಲು ಬಂದವರು ಬಂದ ದಾರಿಗೆ ಸುಂಕವಿಲ್ಲ ಎಂದು ಮರಳುತ್ತಾರೆ.

ನಿಜಕ್ಕೂ ಇದೊಂದು ದಾಖಲೆಯಾಗಿ ಮುಂದುವರೆದಿದೆ. ಇದರ ಮರ್ಮವನ್ನು ಅರಿಯಲು ಸ್ಥಳೀಯ ಜನತೆ ಮಾತ್ರವಲ್ಲದೆ ರಾಜ್ಯದ ವಿವಿಧ ಮೂಲೆಗಳಿಂದ ಸಾಕಷ್ಟು ಜನ ನಗಿಸಲು ಬಂದವರು ಬಂದ ದಾರಿಗೆ ಸುಂಕವಿಲ್ಲವೆಂದು ಬರಿಗೈಯಲ್ಲಿ ಹಿಂದಿರುಗಿದ್ದಾರೆ. ನಗಿಸಲು ಎಲ್ಲ ವಿಧದ ಮಿಮಿಕ್ರಿ, ಹಾಸ್ಯಮಯ ಮಾತುಗಳನ್ನಾಡಿದರೂ ನಗಿಸಲು ಸಾಧ್ಯವಾಗಲಿಲ್ಲ. ಇದೇ ರೀತಿ ರಾಜ್ಯದ ವಿವಿಧ ಭಾಗಗಳಿಂದ ಹಾಸ್ಯ ಕಲಾವಿದರು ನಗಿಸಲು ಬಂದು ಸೋತು ಸುಣ್ಣವಾಗಿದ್ದು ಸುಳ್ಳಲ್ಲ. 22 ವರ್ಷಗಳಿಂದ ಕಾಮನ ವೇಷವನ್ನು 42 ವರ್ಷದ ಗದಿಗೆಪ್ಪ ರೊಡ್ಡನವರ ಹಾಗೂ ರತಿ ವೇಷದಲ್ಲಿ 32ರ ವರ್ಷದ ಕುಮಾರ ಹಡಪದ ಯಶಸ್ವಿಯಾಗಿ ನಿರ್ವಹಿಸುತ್ತ ಬಂದಿದ್ದಾರೆ. ಉಳಿದ ದಿನಗಳಲ್ಲಿ ಇವರಿಬ್ಬರೂ ಸಾಕಷ್ಟು ಹಾಸ್ಯಪ್ರಜ್ಞೆ ಹೊಂದಿದ್ದು, ರತಿ ಮನ್ಮಥರಾದಾಗ ಪರಕಾಯ ಪ್ರವೇಶ ಮಾಡಿದಂತೆ ಗಂಭೀರವದನರಾಗಿ ಕುಳಿತುಕೊಳ್ಳುವ ಪರಿಸಾರ್ವಜನಿಕರಿಗೆ ಕುತೂಹಲ ಮೂಡಿಸುವ ಜತೆ ಅಚ್ಚರಿ ಉಂಟು ಮಾಡುತ್ತದೆ. ಇದರ ನಿಗೂಢತೆ 61 ವರ್ಷಗಳಿಂದ ರಹಸ್ಯವಾಗಿಯೇ ಉಳಿದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ಸಾಮಾನ್ಯವಾಗಿ ಹೋಳಿ ಹಬ್ಬದ ಆಚರಣೆ ವೇಳೆ ಗೊಂಬೆಯ ಇಲ್ಲವೇ ಮಣ್ಣಿನ ರತಿ ಮನ್ಮಥರನ್ನು ಕೂಡಿಸುವುದನ್ನು ಕಾಣುತ್ತೇವೆ. ಆದರೆ, ಪಟ್ಟಣದಲ್ಲಿ ಜೀವಂತ ರತಿ ಮನ್ಮಥರನ್ನು ಕೂಡಿಸುತ್ತಿದ್ದು, ಇವರು ಸಾಮಾನ್ಯರಲ್ಲ, ತಾವು ನಗದೆ ನಗಿಸಲು ಬಂದವರನ್ನು ನಗಿಸದೇ ಬಿಡುವುದಿಲ್ಲ. ಪ್ರತಿ ವರ್ಷ ಸಂಜೆ 7 ಗಂಟೆಗೆಯಿಂದ ರಾತ್ರಿ 1 ಗಂಟೆ ವರೆಗೆ ಕುಳಿತುಕೊಳ್ಳುತ್ತಾರೆ. ಯಾರಿಂದಲೂ ಇವರನ್ನು ನಗಿಸಲಾಗಿಲ್ಲ. ಈ ವರ್ಷ ಸಂಘಟಕರು 1.5 ಲಕ್ಷ ಮತ್ತು ವಿವಿಧ ಸಂಘ ಸಂಸ್ಥೆಗಳು ನಗದು ರೂಪದಲ್ಲಿ ಬಹುಮಾನ ನೀಡಲು ಈ ಬಾರಿ ಘೋಷಿಸಿದ್ದು. 61ನೇ ವರ್ಷದಲ್ಲಾದರೂ ಇವರನ್ನು ನಗಿಸಿ ದಾಖಲೆ ಮುರಿಯುವರೇ ಕಾದು ನೋಡಬೇಕಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ವೀಕ್ಷಿಸಲು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ.

Advertisement

 

ಮಂಜುನಾಥ ಎಚ್‌ ಕುಂಬಳೂರ

Advertisement

Udayavani is now on Telegram. Click here to join our channel and stay updated with the latest news.

Next