ಮುಂಬೈ: ಕೊರೊನಾ ವೈರಸ್ ವಿಶ್ವಾದ್ಯಂತ ಷೇರುಪೇಟೆಗಳನ್ನು ಬೆಚ್ಚಿಬೀಳಿಸಿದ್ದು, ಶುಕ್ರವಾರವೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಹಾಗೂ ನಿಫ್ಟಿ ಪಾತಾಳಕ್ಕೆ ಕುಸಿಯುವ ಮೂಲಕ ಸುಮಾರು 45ನಿಮಿಷಗಳ ಕಾಲ ವಹಿವಾಟನ್ನು ಸ್ಥಗಿತಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಇಂದು ಬೆಳಗ್ಗೆ ಮುಂಬೈ ಚಿನಿವಾರಪೇಟೆಯಲ್ಲಿ ವಹಿವಾಟು ಆರಂಭಗೊಳ್ಳುತ್ತಿದ್ದಂತೆಯೇ ಷೇರುಪೇಟೆ ಸಂವೇದಿ ಸೂಚ್ಯಂಕ 3091 ಅಂಕಗಳಷ್ಟು ದಾಖಲೆಯ ಕುಸಿತ ಕಂಡಿದೆ. ಗುರುವಾರ ಒಂದೇ ದಿನ 2,919.26 ಅಂಕ ಕುಸಿತ ದಾಖಲಿಸಿ, ದಿನಾಂತ್ಯಕ್ಕೆ 32,778ಕ್ಕೆ ತಲುಪಿತ್ತು.
ಎನ್ ಎಸ್ ಇ ನಿಫ್ಟಿ ಆರಂಭಿಕವಾಗಿಯೇ 759.25 ಅಂಕಗಳ ಕುಸಿತದೊಂದಿಗೆ 9,107.60 ಅಂಕಗಳ ವಹಿವಾಟಿನೊಂದಿಗೆ ದಾಖಲೆಯ ಕುಸಿತ ಕಂಡಿದೆ.
ನಿನ್ನೆಯ ವಹಿವಾಟಿನಲ್ಲಿಯೂ ನಿಫ್ಟಿ 868 ಅಂಕಗಳ ಕುಸಿತ ಕಂಡಿದ್ದು, 9590ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಯುರೋಪ್ ನಿಂದ ಅಮೆರಿಕಕ್ಕೆ 30 ದಿನಗಳ ಕಾಲ ಪ್ರಯಾಣ ನಿರ್ಬಂಧ ಘೋಷಿಸಿದ್ದ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆಗಳು ತಲ್ಲಣಿಸಿದ್ದವು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜಾಗತಿಕ ಆರ್ಥಿಕ ಹಿಂಜರಿತ ನಿಶ್ಚಿತ ಎಂಬ ಭೀತಿಯಿಂದ ಮುಂಬಯಿ ಸೇರಿದಂತೆ ಜಗತ್ತಿನ ಬಹುತೇಕ ಮಾರುಕಟ್ಟೆಗಳಲ್ಲಿ ಹೂಡಿಕೆದಾರರು ಒಂದೇ ಸವನೆ ಷೇರುಗಳ ಮಾರಾಟದಲ್ಲಿ ತೊಡಗಿದ ಕಾರಣ ಈ ಮಟ್ಟದಲ್ಲಿ ಮಾರುಕಟ್ಟೆಗಳು ಪತನಗೊಳ್ಳುವಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.