ಚಿಕ್ಕೋಡಿ: ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮು ಆರಂಭವಾಗಿದೆ. ಕಬ್ಬಿನ ಟ್ರ್ಯಾಕ್ಟರ್ ಮಾಲೀಕರು ಸಿಕ್ಕಾಪಟ್ಟೆ ಕಬ್ಬು ಲೋಡಿಂಗ್ ಮಾಡುವುದರಿಂದ ನಡು ರಸ್ತೆಯಲ್ಲಿಯೇ ಕಬ್ಬು ತುಂಬಿದ ವಾಹನಗಳು ಪಲ್ಟಿ ಹೊಡೆಯುತ್ತಿದ್ದು, ಕಬ್ಬು ತುಂಬಿದ ವಾಹನಗಳ ಬದಿಯಲ್ಲಿ ಸವಾರರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ.
ಗಡಿ ಭಾಗದ ಕೃಷ್ಣಾ ನದಿ ತಟದಲ್ಲಿ ಹತ್ತಾರು ಸಕ್ಕರೆ ಕಾರ್ಖಾನೆಗಳು ತಮ್ಮ ಹಂಗಾಮು ಆರಂಭ ಮಾಡಿವೆ. ರೈತರು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳಿಸುತ್ತಿದ್ದಾರೆ. ಆದರೆ ಕಬ್ಬು ತುಂಬಿಕೊಂಡು ಹೋಗುವ ಟ್ರ್ಯಾಕ್ಟರ್ ಮಾಲೀಕರು ಸಿಕ್ಕಾಪಟ್ಟೆ ಕಬ್ಬು ಲೋಡ್ ಮಾಡಿಕೊಂಡು ಭರಾಟೆಯಲ್ಲಿ ಹೋಗುವುದರಿಂದ ತೀವ್ರ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಮತ್ತು ಕಬ್ಬುತುಂಬಿಕೊಂಡು ಹೋಗುವ ವಾಹನಗಳು ನಡು ರಸ್ತೆಯಲ್ಲಿಯೇ ಪಲ್ಟಿ ಹೊಡೆದು ಬೀಳುವುದರಿಂದ ಪ್ರಯಾಣಿಕರು ಜೀವ ಭಯದಲ್ಲೇ ಸಂಚಾರ ಮಾಡುವಂತಾಗಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಚಿಕ್ಕೋಡಿ-ಮಿರಜ ರಾಜ್ಯ ಹೆದ್ದಾರಿಯಲ್ಲಿ ಚಿಕ್ಕೋಡಿ ತಾಲೂಕಿನ ಕೇರೂರ ಕ್ರಾಸ್ ಹತ್ತಿರ ಕಬ್ಬು ತುಂಬಿದ ಟ್ರ್ಯಾಕ್ಟರ್ ರಸ್ತೆ ಮಧ್ಯದಲ್ಲಿಯೇ ಪಲ್ಟಿಯಾಗಿದೆ. ರಸ್ತೆ ಮೇಲಿನ ಎಲ್ಲ ವಾಹನಗಳಿಗೂ ವೇಗ ಮತ್ತು ಭಾರದ ವಿಷಯದಲ್ಲಿ ಒಂದು ಮಿತಿಯಿದೆ. ಆದರೆ ಈ ಟ್ರ್ಯಾಕ್ಟರ್‌ಗಳಿಗೆ ಯಾವ ಮಿತಿಯೂ ಇಲ್ಲ. ಒಂದು ಎರಡು ಟ್ರೇಲರಿಗೆ 16 ಟನ್ ಭಾರ ಮಾತ್ರ ಹೇರಬೇಕೆಂಬ ನಿಯಮವಿದ್ದರೂ 35 ರಿಂದ 40 ಟನ್ ಕಬ್ಬು ತುಂಬಿಕೊಂಡು ಹೋಗುವುದು ಸರ್ವೇ ಸಮಾನ್ಯವಾಗಿದೆ. ಒಂದೊಂದು ಬಾರಿ 50 ಟನ್ ತುಂಬಿಕೊಂಡು ಹೋಗುವ ದುಸ್ಸಾಹಸ ಮಾಡುತ್ತಾರೆ.
ಚಾಲಕರು ಶರವೇಗದ ಸರದಾರರಂತೆ ಹೆಚ್ಚು ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸಿ ಇನ್ನಿತರ ಸವಾರರ ದಿಕ್ಕು ತಪ್ಪಿಸಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ಧಾಬಾ ಮತ್ತು ಪಾನಶಾಪ್‌ಗ್ಳ ಮುಂದೆ ಬೇಕಾಬಿಟ್ಟಿ ಕಬ್ಬು ತುಂಬಿದ ಟ್ರ್ಯಾಕ್ಟರ್ ನಿಲ್ಲಿಸಿ ಟ್ರಾಫಿಕ್ ಸಮಸ್ಯೆ ಉಂಟು ಮಾಡುತ್ತಾರೆ. ಟ್ರೇಲರ್‌ಗಳಿಗೆ ರಿಫ್ಲೆಕ್ಟರ್ ಇಲ್ಲದ್ದರಿಂದ ಕೆಟ್ಟುನಿಂತ ಟ್ರ್ಯಾಕ್ಟರ್‌ಗಳಿಗೆ ಇತರ ವಾಹನಗಳು ಡಿಕ್ಕಿ ಹೊಡೆದು ಅಪಘಾತಗಳಾಗುತ್ತಿವೆ ಎಂದು ವಾಹನ ಚಾಲಕರು ಆತಂಕ ವ್ಯಕ್ತಪಡಿಸುತ್ತಾರೆ.
ಅತಿಯಾದ ಶಬ್ದ ಮಾಲಿನ್ಯ: ಈ ಟ್ರ್ಯಾಕ್ಟರ್ ಚಾಲಕರು ಜೋರಾಗಿ ಟೇಪ್ ಹಚ್ಚಿಕೊಂಡು ಹೋಗುವುದರಿಂದ ಮುಂದುಗಡೆ ಸಂಚರಿಸುವ ವಾಹನ ಸವಾರರು ಕಕ್ಕಾಬಿಕ್ಕಿಯಾಗುವಂತಾಗುತ್ತದೆ. ಚಾಲಕರು ಮನರಂಜನೆಗಾಗಿ ಜೋರಾದ ಶಬ್ದ ಮಾಡಿಕೊಂಡು ಹೋಗುವುದರಿಂದ ಹಿಂಬದಿಯಿಂದ ಬಂದ ಬೇರೆ ವಾಹನಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ, ಟ್ರ್ಯಾಕ್ಟರ್ ಎಂಜಿನ್ ಶಬ್ದದ ಜೊತೆಗೆ ಹಾಡು ತಮ್ಮ ಕಿವಿಗೆ ಕೇಳಲಿ ಎಂಬ ಕಾರಣಕ್ಕೆ ಬರೊಬ್ಬರಿ ಅರ್ಧ ಕಿಮೀ ದೂರ ಕೆಳಿಸುವಷ್ಟು ಹೆಚ್ಚು ಸೌಂಡ್ ಬರುವ ಡಾಲ್ಬಿ ಬಾಕ್ಸ್ ಅಳವಡಿಸಿರುತ್ತಾರೆ. ಇದರಿಂದ ರಸ್ತೆ ಪಕ್ಕದ ಬಹುತೇಕ ಶಾಲೆಗಳ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ. ರಸ್ತೆ ಪಕ್ಕದ ಆಸ್ಪತ್ರೆಯ ರೋಗಿಗಳೂ ತೊಂದರೆ ಅನುಭವಿಸುತ್ತಿದ್ದಾರೆ. ಅಪಾಯಕಾರಿ ಶಬ್ದ ಮಾಲಿನ್ಯ ತಡೆಯಲು ಸಂಚಾರ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ, ಸಂಬಂಧಿಸಿದ ಅಧಿಕಾರಿಗಳು ಶಬ್ದ ಮಾಲಿನ್ಯ, ವೇಗದ ಮಿತಿ ಮತ್ತು ಅತಿಯಾದ ಲೋಡಿಂಗ್ ಕಡಿಮೆ ಮಾಡಲು ಪ್ರಯತ್ನ ಮಾಡಬೇಕು ಎನ್ನುತ್ತಾರೆ ಸಾರ್ವಜನಿಕರು.
ಕಬ್ಬು ತುಂಬಿದ ಟ್ರ್ಯಾಕ್ಟರ್ ಗಳು ನಡು ರಸ್ತೆಯಲ್ಲಿ ಪಲ್ಟಿ ಹೊಡೆದು ನೆಲಕ್ಕೆ ಉರುಳುವುದರಿಂದ ರಸ್ತೆ ಬದಿಗೆ ಸಂಚಾರ ಮಾಡುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಬೈಕ್ ಮೇಲೆ ಮೂರು ಜನ ಕುಳಿತರೆ ದಂಡ ಹಾಕುವ ಪೊಲೀಸರು ಪರವಾನಗಿಗಿಂತ ಹೆಚ್ಚು ಕಬ್ಬು ಹೆರುವ ಟ್ರ್ಯಾಕ್ಟರ್ ಗಳ ಮೇಲೆಯೂ ಕ್ರಮ ಕೈಗೊಳ್ಳಬೇಕು
. –ಚಂದ್ರಕಾಂತ ಹುಕ್ಕೇರಿ ಸಾಮಾಜಿಕ ಹೋರಾಟಗಾರ
-ಮಹಾದೇವ ಪೂಜೇರಿ