ಕಲಬುರಗಿ: ಕೆನರಾ ಬ್ಯಾಂಕ್ ತನ್ನ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವ ನಿಟ್ಟಿನಲ್ಲಿ ಕೇಂದ್ರೀಯ ವಿಶ್ವ ವಿದ್ಯಾಲಯದ ಕ್ಯಾಂಪಸ್‌ನಲ್ಲಿ ಗಿಡ ನೆಟ್ಟು ಪೋಷಿಸಲು ಸಹಾಯವಾಗಲಿ ಎನ್ನುವ ಉದ್ದೇಶದಿಂದ ಟ್ರ್ಯಾಕ್ಟರ್ ಟ್ಯಾಂಕರ್‌ನ್ನು ಶನಿವಾರ ಕಾಣಿಕೆಯಾಗಿ ನೀಡಿದೆ.
ಸಿಯುಕೆ ಕ್ಯಾಂಪಸ್‌ನಲ್ಲಿ ಸಿಯುಕೆ ಕುಲಪತಿ ಪ್ರೊ| ಬಟ್ಟು ಸತ್ಯಾನಾರಾಯಣ ಅವರಿಗೆ ಬ್ಯಾಂಕ್‌ನ ಮಹಾ ಪ್ರಬಂಧಕ ಭಾಸ್ಕರ್ ಚಕ್ರವರ್ತಿ ಅವರಿಗೆ ಟ್ಯಾಂಕರ್‌ನ ಕೀ ಹಸ್ತಾಂತರ ಮಾಡಿದರು.
ಈ ವೇಳೆ ಮಾತನಾಡಿದ ಪ್ರೊ| ಬಟ್ಟು, ಇದೊಂದು ಉತ್ತಮ ಬೆಳವಣಿಗೆ. ಇಂತಹ ಸಾಮಾಜಿಕ ಕಾರ್ಯಗಳಿಂದ ಬ್ಯಾಂಕ್ ಕೂಡ ತನ್ನ ಬದ್ಧತೆ ಮತ್ತು ಪ್ರಾಮಾಣಿಕ ಸೇವೆಯನ್ನು ಇನ್ನಷ್ಟು ವೃದ್ಧಿಸಲು ಸಹಾಯವಾಗುತ್ತದೆ. ಇದರಿಂದ ಸಿಬ್ಬಂದಿ ಮತ್ತು ಗ್ರಾಹಕರ ಮಧ್ಯದ ಸಂಪರ್ಕ ಇನ್ನಷ್ಟು ಸುಧಾರಿಸುತ್ತದೆ ಎಂದರು.
ಪರಿಸರ ಸಂರಕ್ಷಣೆ ದೊಡ್ಡ ಸವಾಲು. ಇದನ್ನು ನಾವೆಲ್ಲರೂ ಮಾಡಬೇಕಾದ ಅನಿವಾರ್ಯತೆಯಲ್ಲಿ ಇದ್ದೇವೆ. ಇಂತಹ ಕೊಡುಗೆಗಳು ಬ್ಯಾಂಕಿನ ಅಮೋಘ ಸೇವೆಯ ಭಾಗವಾಗಿದೆ. ಗಿಡ ನೆಟ್ಟು ಪೋಷಿಸಿದರೆ ಬಿಸಿಲಿನ ತಾಪ ಕಡಿಮೆ ಆಗುತ್ತದೆ. ಓಜೋನ್ ಸಂರಕ್ಷಣೆಯೂ ಸಾಧ್ಯವಾಗುತ್ತದೆ. ಆಮ್ಲಜನಕ ಹೆಚ್ಚಳ, ಗಿಡ, ಸಸಿಗಳು ನೀಡುವ ಹಣ್ಣುಗಳಿಂದ ಪಕ್ಷಿ ಸಂಕುಲವೂ ಹೆಚ್ಚುತ್ತದೆ ಎಂದು ಹೇಳಿದರು.
ಕೆನರಾ ಬ್ಯಾಂಕ್ ಮಹಾ ಪ್ರಬಂಧಕ ಭಾಸ್ಕರ್ ಚಕ್ರವರ್ತಿ ಮಾತನಾಡಿ, ಬ್ಯಾಂಕ್ ತನ್ನ ಸಾಮಾಜಿಕ ಹೊಣೆಗಾರಿಕೆ ನಿಟ್ಟಿನಲ್ಲಿ ಟ್ಯಾಂಕರ್‌ನ್ನು ಸಿಯುಕೆಗೆ ನೀಡಿದೆ. ಇದರಿಂದ ಮುಂಬರುವ ದಿನಗಳಲ್ಲಿ ಕ್ಯಾಂಪಸ್‌ನಲ್ಲಿ ನೂರಾರು ಗಿಡ, ಮರಗಳು ಬೆಳೆಯುತ್ತವೆ. ಇದರಿಂದ ಪರಿಸರವನ್ನು ಕಾಪಾಡಿದಂತಾಗುತ್ತದೆ. ಕ್ಯಾಂಪಸ್‌ನಲ್ಲಿ ಬಿಸಿಲಿನ ತಾಪ ಕಡಿಮೆಯಾಗಿ ಓದಲು ಬರುವ ಮಕ್ಕಳಿಗೆ ತಣ್ಣನೆ ವಾತಾವರಣ ಸೃಷ್ಟಿಯಾಗಲಿದೆ. ಅಲ್ಲದೇ ಆ್ಯಂಬುಲೆನ್ಸ್, ವೈದ್ಯಕೀಯ ಉಪಕರಣ, ನೀರು ಫ್ಯೂರಿಫಾಯರ್‌ಗಳನ್ನು ಅನೇಕ ಸಾಮಾಜಿಕ ಸಂಸ್ಥೆಗಳಿಗೆ ಬ್ಯಾಂಕ್ ವತಿಯಿಂದ ನೀಡಲಾಗಿದೆ ಎಂದರು.
ಸಿಯುಕೆ ಮುಖ್ಯ ಪರೀಕ್ಷಾ ಅಧಿಕಾರಿ ಚನ್ನವೀರ, ಹಣಕಾಸು ಅಧಿಕಾರಿ ಎಸ್. ಶಿವಾನಂದಂ, ಕೆನರಾ ಬ್ಯಾಂಕ್ ಕಲಬುರಗಿ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕ ಸಂಜೀವಪ್ಪ ಆರ್.ಬಿ, ಕಡಗಂಚಿ ಶಾಖಾ ವ್ಯವಸ್ಥಾಪಕಿ ಶುಭಶ್ರೀ, ದೀಕ್ಷಿತ್, ಸಿಬ್ಬಂದಿ ಪಾಲ್ಗೊಂಡಿದ್ದರು. ವಿಭಾಗೀಯ ಪ್ರಬಂಧಕ ವೀರಪ್ಪ ನಿರೂಪಿಸಿ, ಸ್ವಾಗತಿಸಿದರು.
ಕೆನರಾ ಬ್ಯಾಂಕ್ ಕೇವಲ ವ್ಯಾಪಾರದ ಉದ್ದೇಶವನ್ನಷ್ಟೆ ಹೊಂದಿಲ್ಲ. ಬ್ಯಾಂಕ್ ಇರುವುದು ಸಮಾಜದಲ್ಲಿಯೇ. ಬ್ಯಾಂಕ್ ಜನರಿಂದಲೇ ನಡೆಯುತ್ತದೆ. ಆದ್ದರಿಂದ ಬ್ಯಾಂಕ್ ಜನರಿಗಾಗಿಯೇ ಯೋಜನೆ ರೂಪಿಸುತ್ತದೆ ಮತ್ತು ಯೋಚಿಸುತ್ತದೆ. ಸಾಮಾಜಿಕ ಹೊಣೆಗಾರಿಕೆಯ ಅನುದಾನದಲ್ಲಿ ಸಾಕಷ್ಟು ಕಾರ್ಯಗಳು ನಡೆದಿವೆ, ನಡೆಯುತ್ತದೆ. ಇದಕ್ಕೆ ಜನರ ಸಹಕಾರವೂ ಇರಲಿ.
–ಭಾಸ್ಕರ್ ಚಕ್ರವರ್ತಿ, ಮಹಾಪ್ರಬಂಧಕ, ಕೆನರಾ ಬ್ಯಾಂಕ್