ಹುಬ್ಬಳ್ಳಿ: ದೆಹಲಿಯಲ್ಲಿನ ರೈತರ ಹೋರಾಟ ಬೆಂಬಲಿಸಿ, ಕೃಷಿಗೆ ಮಾರಕ ಕಾಯ್ದೆ ರದ್ಧತಿ ಹಾಗೂ ಎಂಎಸ್‌ಪಿಗೆ ಕಾನೂನಾತ್ಮಕ ಸ್ಥಾನಕ್ಕೆ ಒತ್ತಾಯಿಸಿ ಜ.26ರಂದು ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಗುವುದು ಎಂದು ರೈತ ನಾಯಕ ಬಾಬಾಗೌಡ ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹಿತರಕ್ಷಣಾ ಪರಿವಾರದಡಿ ಮೂರು ಕಡೆಗಳಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಗುವುದು. ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ಪೆರೇಡ್ ನಡೆಸಲು ನಿರ್ಧರಿಸಿದ್ದು, ಇದಕ್ಕೆ ಬೆಂಬಲವಾಗಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಟ್ರ್ಯಾಕ್ಟರ್‌ಗಳ ಮೆರವಣಿಗೆ ನಡೆಸಲಾಗುವುದು. ನಮ್ಮದು ಶಾಂತಿಯುತ ಮೆರವಣಿಗೆ. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಮೆರವಣಿಗೆ ನಡೆಯಲಿದೆ ಎಂದರು.
ಕೇಂದ್ರದ ಮೇಲೆ ವಿಶ್ವಾಸವಿಲ್ಲ: ಕೃಷಿಗೆ ಮಾರಕ ಕಾಯ್ದೆಗಳ ರದ್ಧತಿ ಹಾಗೂ ಎಂಎಸ್‌ಪಿಗೆ ಕಾನೂನು ಬಲ ನೀಡಲು ಒತ್ತಾಯಿಸಿ ದೆಹಲಿಯಲ್ಲಿ ರೈತರು ಐತಿಹಾಸಿಕ ಹೋರಾಟ ನಡೆಸುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರು ರೈತರ ಭೇಟಿಗೆ ಸಿದ್ಧರಿಲ್ಲ. ಹೋರಾಟ ಸ್ಥಳಕ್ಕೆ ಆಗಮಿಸಿ ಚರ್ಚಿಸುವ ಧೈರ್ಯ ಅವರಿಗಿಲ್ಲ. ಹೋಗಲಿ ಹೋರಾಟ ಪ್ರಮುಖರನ್ನಾದರೂ ತಮ್ಮ ಕಚೇರಿಗೆ ಕರೆಯಿಸಿ ಚರ್ಚಿಸಬಹುದಿತ್ತು. ಅದನ್ನೂ ಮಾಡುತ್ತಿಲ್ಲ. ಕೆಲ ಸಚಿವರು ಬಂದು ಕೇವಲ ಗಿಣಿಪಾಠ ಒಪ್ಪಿಸುವ ಕಾರ್ಯ ಮಾಡುತ್ತಿದ್ದು, ರೈತರ ಮೂಲ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಎಂಎಸ್‌ಪಿ-ಎಪಿಎಂಸಿ ರದ್ದು ಮಾಡಲ್ಲ ಎಂದು ಹೇಳುತ್ತಲೇ ಎಪಿಎಂಸಿಗಳಿಗೆ ಬೀಗ ಹಾಕಲು ಏನು ಬೇಕೋ ಅದೆಲ್ಲವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಅದಾನಿ-ಅಂಬಾನಿ ಉದ್ಯಮಗಳಿಗೆ ಪೂರಕವಾಗುವ ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಕೇಂದ್ರ ಸರಕಾರ ಸರ್ವಾ ಧಿಕಾರಿ ಧೋರಣೆಗೆ ಮುಂದಾಗಿದೆ. ಕೃಷಿಗೆ ಮಾರಕ ಕಾಯ್ದೆಗಳನ್ನು ಮುಂದುವರಿಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಪಡಿತರ ವ್ಯವಸ್ಥೆಗೂ ಧಕ್ಕೆಯಾಗಲಿದೆ. ಪಡಿತರ ಆಹಾರ ಧಾನ್ಯಗಳಿಗಾಗಿ ಅದಾನಿ-ಅಂಬಾನಿಗಳ ಬಳಿ ಸರಕಾರವೇ ಹೋಗುವ ಸ್ಥಿತಿ ಬರಲಿದೆ. ಕೃಷಿಗೆ ಮಾರಕ ಕಾಯ್ದೆಗಳು ಸಂಪೂರ್ಣ ರದ್ದಾಗಬೇಕು. ಎಂಎಸ್‌ಪಿಗೆ ಕಾನೂನು ಬಲ ನೀಡಿದಲ್ಲಿ ರೈತರ ಹೋರಾಟ ಅಂತ್ಯಗೊಳ್ಳಲಿದೆ ಎಂದರು.
ಇದನ್ನೂ ಓದಿ:ಜಿಪಂನಲ್ಲಿ 1.40 ಕೋಟಿ ವೆಚ್ಚದ ಕಟ್ಟಡ ಉದ್ಘಾಟನೆ
ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ ಜಾರಿ ಎಂದು ಘೋಷಿಸಿದ್ದ ಮೋದಿಯವರು, ಇದೀಗ ವರದಿಯನ್ನೇ ತಿರುಚಿ, ಅನುಷ್ಠಾನ ಅಸಾಧ್ಯ ಎಂದು ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ನೀಡುವ ಮೂಲಕ ರೈತರನ್ನು ವಂಚಿಸಿದ್ದಾರೆ. ಸತ್ಯ ಮರೆಮಾಚಿ, ಸುಂದರವಾದ ಸುಳ್ಳುಗಳನ್ನು ಹೇಳುವುದನ್ನೇ ಚಾಣಕ್ಯ ನೀತಿ ಎಂದು ಕರೆಯಲಾಗುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅದನ್ನೇ ಮಾಡುತ್ತಿದ್ದಾರೆಂದು ಟೀಕಿಸಿದರು. ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಮುಖಂಡರಾದ ಪಿ.ಎಚ್. ನೀರಲಕೇರಿ, ಗುರುರಾಜ ಹುಣಸಿಮರದ, ಶಾಕೀರ್ ಸನದಿ ಇದ್ದರು.