ಹುಬ್ಬಳ್ಳಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ, ಜ.26ರಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್, ಬೈಕ್ ಗಳೊಂದಿಗೆ ಪರ್ಯಾಯ ಪೆರೇಡ್ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಅನುಸರಿಸುತ್ತಿರುವ ರೈತ, ಜನವಿರೋಧಿ ನೀತಿಗಳನ್ನು ವಿರೋಧಿಸಿ ದೆಹಲಿಯಲ್ಲಿ ಎರಡು ತಿಂಗಳಿನಿಂದ ಹೋರಾಟ ಮಾಡುತ್ತಿದ್ದರೂ, ಸರಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.
ರೈತರ ಹೋರಾಟ ಬೆಂಬಲಿಸಿ, ರಾಜ್ಯದಲ್ಲಿ ರೈತ, ಕಾರ್ಮಿಕ, ದಲಿತ ಹಾಗೂ ಜನಪರ ಸಂಘಟನೆಗಳ ಒಕ್ಕೂಟದಿಂದ, ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್, ಜೀಪು, ಮೋಟಾರು ಬೈಕ್ ಗಳೊಂದಿಗೆ ಪೆರೇಡ್ ನಡೆಸಲಾಗುವುದು. ಸುಮಾರು ಹದಿನೈದು ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿಸ್ವಾಸ್ ಮೇಲೆ ಹಲ್ಲೆ; 12 ಗಂಟೆ ಕಾಲ ತ್ರಿಪುರಾ ಬಂದ್ ಗೆ ಕರೆ
ಬೆಂಗಳೂರು ಸಂಪರ್ಕಿಸುವ ಎಲ್ಲ ಹೆದ್ದಾರಿಗಳಿಂದಲೂ ಪೆರೇಡ್ ನಡೆಯಲಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಫ್ರೀಡಂ ಪಾರ್ಕ್ ನಲ್ಲಿ ಸೇರಿ ಬಹಿರಂಗ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಜ.26 ರಂದು ದೆಹಲಿಯಲ್ಲಿ ನಡೆಯುವ ಪರ್ಯಾಯ ಪೆರೇಡ್ ನಲ್ಲಿ ಪಾಲ್ಗೊಳ್ಳಲು ರಾಜ್ಯದ ನಿಯೋಗ ತೆರಳಲಿದೆ ಎಂದರು.
ಇದನ್ನೂ ಓದಿ:ಸಿಡಿ ಬಗ್ಗೆ ನಾನೇನು ಹೇಳಿಲ್ಲ, ಡಿಕೆಶಿ ಹೇಳಿದ್ದನ್ನಷ್ಟೇ ಮತ್ತೆ ಹೇಳಿದೆ: ಯತ್ನಾಳ್
ಶಾಂತಿಯುತವಾಗಿ ಪೆರೇಡ್ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಹೋರಾಟವನ್ನು ಹಳ್ಳಿಗಳಿಗೆ ವಿಸ್ತರಿಸಲು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮೊದಲು ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಿವಿಧ ಜಿಲ್ಲೆಗಳ ರೈತ ಮುಖಂಡರ ಸಭೆ ನಡೆಯಿತು.