Advertisement

ಕ್ಷಿಪ್ರವಾಗಿ ಪೂರ್ಣಗೊಂಡ ಹಳಿ ದುರಸ್ತಿ; ಬಾಲಸೋರ್‌ನಲ್ಲಿ ರೈಲುಗಳ ಸಂಚಾರ ಪುನಾರಂಭ

08:34 PM Jun 05, 2023 | Shreeram Nayak |

ಬಾಲಸೋರ್‌/ನವದೆಹಲಿ:”ದೇಶದ ಭೀಕರ ರೈಲು ದುರಂತಗಳಲ್ಲೊಂದಕ್ಕೆ’ ಸಾಕ್ಷಿಯಾದ ಒಡಿಶಾದ ಬಾಲಸೋರ್‌ ಜಿಲ್ಲೆಯ ರೈಲ್ವೆ ಹಳಿಗಳ ದುರಸ್ತಿ ಕಾರ್ಯವು ಕ್ಷಿಪ್ರಗತಿಯಲ್ಲಿ ಪೂರ್ಣಗೊಂಡಿದೆ. ಸೋಮವಾರ ಮೊದಲ ಹೈಸ್ಪೀಡ್‌ ಪ್ರಯಾಣಿಕ ರೈಲು ಹೌರಾ-ಪುರಿ ವಂದೇ ಭಾರತ್‌ ಎಕ್ಸ್‌ಪ್ರಸ್‌ ಈ ಹಳಿಗಳ ಮೇಲೆ ಸುರಕ್ಷಿತವಾಗಿ ಸಂಚರಿಸಿದೆ.

Advertisement

ಬೆಳಗ್ಗೆ 9.30ಕ್ಕೆ ಸರಿಯಾಗಿ ವಂದೇ ಭಾರತ್‌ ಎಕ್ಸ್‌ಪ್ರಸ್‌ ರೈಲು ಬಹನಾಗ ಬಜಾರ್‌ ನಿಲ್ದಾಣವನ್ನು ಹಾದು ಹೋಯಿತು. ಈ ವೇಳೆ ಅಲ್ಲೇ ಇದ್ದ ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಅವರು ರೈಲಿನ ಚಾಲಕರತ್ತ ಕೈಬೀಸಿದ್ದು ಕಂಡುಬಂತು. ಒಂದೇ ದಿನದಲ್ಲಿ ಹಳಿಗಳನ್ನು ಪುನಃಸ್ಥಾಪಿಸಲಾಗಿದ್ದು, ಹೌರಾ-ಪುರಿ ಎಕ್ಸ್‌ಪ್ರಸ್‌ ಮತ್ತು ಭುವನೇಶ್ವರ-ನವದೆಹಲಿ ಸಂಪರ್ಕ ಕ್ರಾಂತಿ ಎಕ್ಸ್‌ಪ್ರಸ್‌ ರೈಲುಗಳು ಕೂಡ ಮುಂಜಾನೆ ಇದೇ ಹಳಿಗಳಲ್ಲಿ ಸಾಗಿವೆ.

ಇದೇ ವೇಳೆ, ರೈಲ್ವೆ ಸುರಕ್ಷತಾ ಆಯುಕ್ತ ಶೈಲೇಶ್‌ ಕುಮಾರ್‌ ಪಾಠಕ್‌ ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಆರಂಭಿಸಿದ್ದಾರೆ. ನಿಯಂತ್ರಣ ಕೊಠಡಿ, ಸಿಗ್ನಲ್‌ ರೂಂನಲ್ಲಿ ತಪಾಸಣೆ ನಡೆಸಿ, ಸ್ಟೇಷನ್‌ ಮ್ಯಾನೇಜರ್‌ ಜತೆಗೆ ಮಾತನಾಡಿದ್ದಾರೆ. ಅಲ್ಲದೇ ಇಂಟರ್‌ಲಿಂಕಿಂಗ್‌ ವ್ಯವಸ್ಥೆಯನ್ನೂ ಪರಿಶೀಲಿಸಿದ್ದಾರೆ. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಈಗಷ್ಟೇ ತನಿಖೆ ಆರಂಭಿಸಿದ್ದೇವೆ. ಪೂರ್ಣಗೊಳ್ಳಲು ಸಮಯ ತಗಲುತ್ತದೆ. ತನಿಖೆ ಪೂರ್ಣಗೊಂಡ ಬಳಿಕವೇ ಅವಘಡಕ್ಕೆ ನಿಖರ ಕಾರಣವೇನೆಂದು ತಿಳಿದುಬರಲಿದೆ’ ಎಂದಿದ್ದಾರೆ.


ಎನ್‌ಡಿಆರ್‌ಎಫ್ ಕಾರ್ಯಾಚರಣೆ ಪೂರ್ಣ: ತ್ರಿವಳಿ ರೈಲು ಅಪಘಾತ ಸ್ಥಳದಲ್ಲಿನ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಸೋಮವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎಲ್ಲ 9 ತಂಡಗಳೂ ವಾಪಸಾಗಿವೆ. ಎನ್‌ಡಿಆರ್‌ಎಫ್ ತಂಡವು 44 ಸಂತ್ರಸ್ತರನ್ನು ರಕ್ಷಿಸಿದ್ದು, 121 ಮೃತದೇಹಗಳನ್ನು ಹೊರೆತೆಗೆದಿದೆ.

ಚಾಲಕರಿಬ್ಬರ ಸ್ಥಿತಿ ಸ್ಥಿರ: ದುರಂತದ ವೇಳೆ ಗಾಯಗೊಂಡಿದ್ದ ಕೋರಮಂಡಲ್‌ ಎಕ್ಸ್‌ಪ್ರಸ್‌ ರೈಲಿನ ಚಾಲಕ ಗುಣನಿಧಿ ಮೊಹಾಂತಿ ಮತ್ತು ಅವರ ಸಹಾಯಕ ಹಜಾರಿ ಬೆಹೆರ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇವರಿಬ್ಬರೂ ಭುವನೇಶ್ವರದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ನಿರ್ಲಕ್ಷ್ಯದ ಕೃತ್ಯ:
ಬಾಲಸೋರ್‌ ರೈಲು ದುರಂತಕ್ಕೆ ಸಂಬಂಧಿಸಿ ಒಡಿಶಾ ಪೊಲೀಸರು ದಾಖಲಿಸಿರುವ ಆರೋಪಪಟ್ಟಿಯಲ್ಲಿ “ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗಿದ್ದು ಮತ್ತು ಹಲವು ಜೀವಗಳನ್ನು ಅಪಾಯಕ್ಕೆ ಸಿಲುಕಿಸಿದ್ದು’ ಎಂಬ ಆರೋಪ ಹೊರಿಸಲಾಗಿದೆ. ಆದರೆ, ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನು ಎಫ್ಐಆರ್‌ನಲ್ಲಿ ನಮೂದಿಸಿಲ್ಲ. ಸದ್ಯದಲ್ಲೇ ತನಿಖೆಯ ಹೊಣೆಯನ್ನು ಸಿಬಿಐ ವಹಿಸಿಕೊಳ್ಳುವ ಸಾಧ್ಯತೆಯಿದೆ.

ದ್ವೇಷ ಹಬ್ಬಿಸುವವರಿಗೆ ಎಚ್ಚರಿಕೆ
ರೈಲು ದುರಂತದ ಬಳಿಕ ಕೋಮು ಭಾವನೆ ಕೆರಳಿಸುವಂಥ ವದಂತಿಗಳನ್ನು ಹಬ್ಬಿಸುವವರಿಗೆ ಒಡಿಶಾ ಪೊಲೀಸರು ಸೋಮವಾರ ಖಡಕ್‌ ಎಚ್ಚರಿಕೆ ನೀಡಿದ್ದಾರೆ. “ಸಾಮಾಜಿಕ ಜಾಲತಾಣಗಳ ಕೆಲವು ಬಳಕೆದಾರರು ಬಾಲಸೋರ್‌ ಅವಘಡಕ್ಕೆ ಕೋಮು ಬಣ್ಣ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ದುರದೃಷ್ಟಕರ ಸಂಗತಿ. ಇಂಥ ಸುಳ್ಳು, ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಹಂಚುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

“ಕವಚ’ಕ್ಕೆ ನೀಡಿದ್ದ ಅನುದಾನ ಬಳಕೆಯೇ ಆಗಿಲ್ಲ!
ದುರಂತದ ಬೆನ್ನಲ್ಲೇ ಈ ಮಾರ್ಗದಲ್ಲಿ ರೈಲು ಅಪಘಾತ ನಿಗ್ರಹ ವ್ಯವಸ್ಥೆಯಾದ “ಕವಚ’ವನ್ನು ಏಕೆ ಅಳವಡಿಸಿರಲಿಲ್ಲ ಎಂಬ ಪ್ರಶ್ನೆ ಎದ್ದಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಕವಚ ವ್ಯವಸ್ಥೆಯನ್ನು ಅಳವಡಿಸಲೆಂದು 468.9 ಕೋಟಿ ರೂ.ಗಳ ಅನುದಾನವನ್ನು ನೀಡಲಾಗಿದ್ದರೂ, ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದು ರೂಪಾಯಿಯನ್ನೂ ರೈಲ್ವೆಯು ವೆಚ್ಚ ಮಾಡಿಲ್ಲ ಎಂದು ದತ್ತಾಂಶಗಳನ್ನು ಉಲ್ಲೇಖೀಸಿ ಇಂಡಿಯಾ ಟುಡೇ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next